ಭಗವಾನ್ ಬುದ್ಧ

ಕಪಿಲವಸ್ತುವಿನ ಬಳಿಯಿರುವ ಲುಂಬಿಣಿಯಲ್ಲಿ ಶುದ್ದೋಧನ ಮತ್ತು ಮಾಯಾದೇವಿಯರಿಗೆ ಭಗವಾನ್ ಬುದ್ಧ ಮಗನಾಗಿ ಜನಿಸಿದ. ಅವನಿಗೆ ಸಿದ್ಧಾರ್ಥ-“ತನ್ನ ಕಾರ್ಯದಲ್ಲಿ ಯಶಸ್ವಿಯಾದವನು’ ಎಂದು ಹೆಸರಿಟ್ಟರು.

ರಾಜಕುಮಾರನನ್ನು ನೋಡಲು ಬನ್ನಿರೆಂದು ಶುದ್ದೋಧನನು ರಾಜರ್ಷಿಗಳಿಗೆ ಕರೆ ಕಳಿಸಿದ. ರಾಜರ್ಷಿಗಳು ಮಗುವನ್ನು ನೋಡಿ ಭವಿಷ್ಯವನ್ನು ನುಡಿದರು: ಈ ನವಜಾತ ಶಿಶುವು ಇಡೀ ಜಗತ್ತಿಗೇ ಮುಕ್ತಿಯ ಮಾರ್ಗವನ್ನು ತೋರುವುದು ಎಂದು ಅಲೌಕಿಕ ಚಿಹ್ನೆಗಳು ಸಾರುತ್ತಿವೆ”. ಈ ಮಗುವು ಎಂದಾದರೂ ರೋಗಿಯನ್ನೋ, ವಯಸ್ಸಾದವನನ್ನೋ, ಅಥವಾ ಶವವನ್ನೋ ಕಂಡರೆ,ವೈರಾಗ್ಯ ತಾಳಿ ಎಲ್ಲವನ್ನೂ ತ್ಯಜಿಸುವನೆಂದು ರಾಜನಿಗೆ ಎಚ್ಚರಿಕೆಯನ್ನೂ ಕೊಟ್ಟರು.

ಇದನ್ನು ಕೇಳಿ ರಾಜನಿಗೆ ಬಹಳ ಗಾಬರಿಯಾಯಿತು. ಬಹಳ ಸಣ್ಣಪ್ರಾಯದಲ್ಲೇ ಸಿದ್ಧಾರ್ಥನಿಗೆ ಮದುವೆ ಮಾಡಿ, ಎಲ್ಲ ಸುಖ ಸಾಧನಗಳಿದ್ದ  ಉದ್ಯಾನವೊಂದರಲ್ಲಿ ಅವನನ್ನು ಕೂಡಿಹಾಕಿದ. ಆದರೆ ಆಗಬಾರದ್ದು ಆಗಿಹೋಯಿತು. ಕಟ್ಟಿಹಾಕಿದ ಆನೆಯು ಕಾಡಿನ ಸ್ವಾತಂತ್ರ್ಯವನ್ನು ಬಯಸುವಂತೆ, ರಾಜಕುಮಾರನು ಹೊರಗಿನ ಪ್ರಪಂಚವನ್ನು ಕಾಣಬೇಕೆಂದು ತವಕಿಸಿದ. ಅವನು ನಗರವನ್ನು ವೀಕ್ಷಿಸಲು ಬರುವನೆಂದು ಎಲ್ಲೆಲ್ಲೂ ತಳಿರುತೋರಣಗಳನ್ನು ಕಟ್ಟಿಸಿಂಗರಿಸಿದ್ದರು. ನಗರವನ್ನು ನೋಡುತ್ತಿದ್ದಂತೆ ಸಿದ್ಧಾರ್ಥನು ಒಬ್ಬ ಮುದುಕನನ್ನು, ಒಬ್ಬರೋಗಿಯನ್ನು,ಒಂದು ಹೆಣವನ್ನು ಹಾಗೂ ಕಡೆಯದಾಗಿ ಒಬ್ಬ ಸಂನ್ಯಾಸಿಯನ್ನು ಕಂಡ. ಮೊದಲ ಮೂರು ದೃಶ್ಯಗಳು ಎಲ್ಲ  ಜೀವಿಗಳಿಗೂ ಬರುವ ಅವಸ್ಥೆಗಳು, ಆಕಸ್ಮಿಕಗಳಲ್ಲವೆಂದು ತಿಳಿದು ಸಿದ್ಧಾರ್ಥನ ಮನಸ್ಸು ತಳಮಳಗೊಂಡು, ಆಳವಾದ ಆಲೋಚನೆಯಲ್ಲಿ ಮುಳುಗಿತು.

ಅವನು ಅರಮನೆಗೆ ಹಿಂತಿರುಗುತ್ತಿದ್ದಂತೆಯೇ, ಅವನ ಪತ್ನಿ ಯಶೋಧರೆ ಗಂಡುಮಗುವಿಗೆ ಜನ್ಮ ನೀಡಿರುವ ಸುದ್ದಿಯನ್ನು ಯಾರೋ ಬಂದು ತಿಳಿಸಿದರು. ಮಗುವಿಗೆ  ರಾಹುಲ ಎಂದು ಹೆಸರಿಟ್ಟಿದ್ದರು. ವಾರ್ತೆಯನ್ನು ಕೇಳಿ ಸಂತೋಷಪಡುವುದರ ಬದಲು ಸಿದ್ಧಾರ್ಥ  ಗಂಭೀರವಾಗಿ ಆಲೋಚಿಸಿದ:

“ಬಂಧನದ ಮೇಲೆ ಮತ್ತೊಂದು ಬಂಧನವನ್ನು ಹೇರಿದಂತಿದೆ ಇದು.”ಸತ್ಯವೇನು ಎಂದು ತಿಳಿಯಲೋಸುಗ ಎಲ್ಲವನ್ನೂ ತ್ಯಜಿಸಿ ಹೊರಡಲು ತೀರ್ಮಾನಿಸಿದ. ಒಂದು ರಾತ್ರಿ ಎಲ್ಲವನ್ನೂ ಬಿಟ್ಟು ಹೊರಟಾಗ ಅವನ ಈ ನಿರ್ಧಾರವು ಕಾರ್ಯರೂಪಕ್ಕೆ ಇಳಿದು, ತನ್ನ ಅವತಾರ ಉದ್ದೇಶವನ್ನು ಪೂರೈಸುವತ್ತ ಸಿದ್ಧಾರ್ಥ ಸಾಗಿದ.

ಉರುವಿಲ್ವಕ್ಕೆ {ಬುದ್ಧ ಗಯೆ} ಬಂದ ಸಿದ್ಧಾರ್ಥನು ಒಂದು  ಅರಳೀ ಮರದಡಿಯಲ್ಲಿ ಸತ್ಯದರ್ಶನದ ದೃಢಸಂಕಲ್ಪವನ್ನು ಮಾಡಿ ಕುಳಿತ. ಆರು ವರ್ಷಗಳ ಕಾಲ ಸಾಧನೆಗೈದು ಕಠಿಣ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ ಬಳಿಕ ತಾನು ಹಂಬಲಿಸುತ್ತಿದ್ದ  ಜ್ಞಾನೋದಯವನ್ನು ಗಳಿಸಿ ಬೋಧಿಸತ್ವನಾದ, ಹೊಸ ಧರ್ಮದ ಪ್ರವರ್ತಕನಾದ.

ವಾರಾಣಸಿಯ ಬಳಿಯಿರುವ ಸಾರನಾಥದಲ್ಲಿ ಉಪನ್ಯಾಸ ನೀಡುವುದರ ಮೂಲಕ ತನ್ನ ವಿಚಾರಗಳ ಮೊದಲು ಪ್ರಚಾರವನ್ನು ಭಗವಾನ್ ಬುದ್ಧ ಪ್ರಾರಂಭಿಸಿದ. ನಲವತ್ತೈದು ವರ್ಷಗಳ ಕಾಲ ಸಂಚರಿಸುತ್ತ ತನ್ನ ಅದ್ಭುತ ಸಂದೇಶವನ್ನು ಜನರಿಗೆ ತಿಳಿಸುತ್ತ  ಜೀವನದ ಪ್ರಮುಖ ಕಾರ್ಯವನ್ನು ಭಗವಾನ್ ಬುದ್ಧ ಪೂರ್ಣಗೊಳಿಸಿದ. ತನ್ನ ಅನುಯಾಯಿಗಳಾದ ಭಿಕ್ಷುಗಳ ಸಂಘವನ್ನು ಚೆನ್ನಾಗಿ ಸ್ಥಾಪಿಸಿ ಕುಶೀ ನಗರದಲ್ಲಿ ಎಂಬತ್ತನೆಯ ವಯಸ್ಸಿನಲ್ಲಿ ವೈಶಾಖ ಪೂರ್ಣಿಮೆಯ ದಿನದಂದು ದೇಹವನ್ನು ತ್ಯಜಿಸಿದ. ಅವನು ಹುಟ್ಟಿದ್ದು, ಬುದ್ಧನಾದದ್ದು ಹಾಗೂ ದೇಹವನ್ನು ಬಿಟ್ಟಿದ್ದು ಈ ದಿನದಂದೇ-ಮೂರು ಕಾರಣಗಳಿಂದ ಪವಿತ್ರವಾದ ದಿನವಿದು.

ಭಗವಾನ್ ಬುದ್ಧನು ಕೇವಲ ‘ಏಷ್ಯಾ ಖಂಡದ ಜ್ಯೋತಿ’ಯಲ್ಲ, ‘ಇಡೀ ಜಗತ್ತಿನ ಜ್ಯೋತಿ’. ಮಾನವತೆಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಭಗವಾನ್ ಬುದ್ಧ ನೀಡಿದ ಕೊಡುಗೆ ಅಪಾರ. ಸಾವಿರಾರು ವರ್ಷಗಳಿಂದ ನೂರಾರು ಲಕ್ಷ ಜನರ ಜೀವನ ಹಾಗೂ ಭಾವನೆಗಳ ಮೇಲೆ ಭಗವಾನ್ ಬುದ್ಧ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಬೀರುತ್ತಾ ಬಂದಿದ್ದಾನೆ.

ಅನೇಕ ಆಧಾರಗಳಿಂದ ಸಂಗ್ರಹಿಸಿರುವ ಭಗವಾನ್ ಬುದ್ಧನ ನುಡಿಗಳನ್ನು ಈ ಕಿರುಹೊತ್ತಿಗೆಯಲ್ಲಿ ನೀಡುತ್ತಿದ್ದೇವೆ. ನಮೆಲ್ಲರ ಜೀವನಕ್ಕೆ ಇದು ಬೆಳಕು ಹಾಗೂ ಶ್ರೀಮಂತಿಕೆಯನ್ನು ತರಲಿ ಎಂದು ಹಾರೈಸುತ್ತೇವೆ.

ಭಗವಾನ್ ಬುದ್ಧ ನನ್ನು ಕುರಿತು ಸ್ವಾಮಿ ವಿವೇಕಾನಂದರು

ಕರ್ಮ ಯೋಗದ ವಿಚಾರಗಳನ್ನು ಅನುಷ್ಠಾನಕ್ಕೆ ತಂದ ಒಬ್ಬ ವ್ಯಕ್ತಿಯ ಕೆಲವು ನುಡಿಗಳನ್ನು ನಾನು ನಿಮಗೆ ಹೇಳಬಯಸುವೆ…ಅವನೇ ಬುದ್ಧ. ಸಮರ್ಪಕವಾಗಿ ಈ ವಿಚಾರಗಳನ್ನು ಕಾರ್ಯರೂಪಕ್ಕೆ ತಂದವನು ಇವನೊಬ್ಬನೇ. ಭಗವಾನ್ ಬುದ್ಧನ  ಹೊರೆತು ಬೇರೆಲ್ಲ ಪ್ರವಾದಿಗಳಿಗೂ ತಮ್ಮ ನಿಸ್ವಾರ್ಥ ಕ್ರಿಯೆಗೆ ಹೊರಗಿನ ಪ್ರಚೋದನೆ ಬೇಕಿತ್ತು… ಯಾವುದೇ ಅಪೇಕ್ಷೆಯಿಲ್ಲದ ಆದರ್ಶ ಕರ್ಮಯೋಗಿ ಈತ. ಮತ್ತಾರಿಗೂ ಹೋಲಿಸಲಾರದಂತಹ ಅತ್ಯದ್ಭುತ ಮಾನವನೆಂದು ಮಾನವತೆಯು ಇತಿಹಾಸವು ಸಾರುತ್ತಿದೆ. ಹೃದಯ ಹಾಗೂ ಮಸ್ತಿಷ್ಕಗಳ ಅತ್ಯುತ್ತಮ ಸಮಾಗಮ ಹಾಗೂ ಚೈತನ್ಯ ಶಕ್ತಿಯ ಅಭಿವ್ಯಕ್ತಿಗಳಲ್ಲಿ ಇವನನ್ನು ಮೀರಿಸುವ ಮತ್ತೊಂಬ್ಬ ವ್ಯಕ್ತಿ ಹುಟ್ಟಿಲ್ಲ…

ಐತಿಹಾಸಿಕ ದೃಷ್ಟಿಯಿಂದ ಬೌದ್ಧ ಧರ್ಮವು ಮಹತ್ವಪೂರ್ಣ-ಐತಿಹಾಸಿಕವಾಗಿ, ತಾತ್ವಿಕದೃಷ್ಟಿಯಿಂದಲ್ಲ  ಏಕೆಂದರೆ ಈ ಪ್ರಪಂಚ ಕಂಡಿರುವ ಧಾರ್ಮಿಕ ಆಂದೋಲನಗಳಲ್ಲಿ ಪ್ರಬಲವಾದದ್ದು  ಇದೇ, ಮಾನವ ಸಮಾಜದ  ಮೇಲೆ ಬಂದೆರಗಿದೆ ಬೃಹತ್ ಆಧ್ಯಾತ್ಮಿಕ ಅಲೆ ಇದೇ…

ಭಗವಾನ್ ಬುದ್ಧ  ಸೂಕ್ತಿ

ನಾಲ್ಕು ಆರ್ಯಸತ್ಯಗಳು

1.ದುಃಖದ ಅಸ್ತಿತ್ವ

2.ದುಃಖದ  ಕಾರಣ

3.ದುಃಖದ ಅವಸಾನ

4.ದುಃಖಾವಸಾನದ ಮಾರ್ಗ

ಐದು ತತ್ತ್ವಗಳು

ಜೀವಿಗಳ ಪ್ರಾಣಹಾನಿ ಮಾಡುವುದಿಲ್ಲ ಎಂಬ ಅಹಿಂಸೆಯ ತತ್ತ್ವವನ್ನು  ಸ್ವೀಕರಿಸಿ.

ಕಳ್ಳತನವನ್ನು ಮಾಡುವುದಿಲ್ಲ ಎಂಬ ತತ್ತ್ವವನ್ನು ಸ್ವೀಕರಿಸಿ.

ವ್ಯಭಿಚಾರದ ಜೀವನವನ್ನು ನಡೆಸುವುದಿಲ್ಲ ಎಂಬ ತತ್ತ್ವವನ್ನು ಸ್ವೀಕರಿಸಿ.

ಸುಳ್ಳನ್ನು ಹೇಳುವುದಿಲ್ಲ ಎಂಬ ತತ್ತ್ವವನ್ನು ಸ್ವೀಕರಿಸಿ.

ಮದ್ಯಪಾನವನ್ನು ಮಾಡುವುದಿಲ್ಲ ಎಂಬ ತತ್ತ್ವವನ್ನು ಸ್ವೀಕರಿಸಿ.

ಅಷ್ಟಾಂಗ ಮಾರ್ಗ

ಸರಿಯಾದ ಅರ್ಥಗ್ರಹಿಕೆ {ಮೂಢ ನಂಬಿಕೆ ಹಾಗೂ ಭ್ರಾಂತಿಗಳಿಂದ ಮುಕ್ತವಾದ}

ಸರಿಯಾದ ವಿಚಾರ {ಉನ್ನತವಾದ ಹಾಗೂ ಬುದ್ಧಿವಂತರಿಗೆ ಉಚಿತವಾದ}

ಸರಿಯಾದ ಮಾತು {ದಯೆಯುಳ್ಳ, ನೇರವಾದ ಹಾಗೂ ಪ್ರಾಮಾಣಿಕವಾದ}

ಸರಿಯಾದ ಜೀವನಶೈಲಿ {ಯಾವುದೇ ಜೀವಿಗೆ ನೋವು ಅಥವಾ ತೊಂದರೆಯನ್ನುತಾರದ}

ಸರಿಯಾದ ಪ್ರಯತ್ನ{ವ್ಯಕ್ತಿಯ ಸ್ವತರಬೇತಿ ಹಾಗೂ ನಿಗ್ರಹಕ್ಕೆ ಪೂರಕವಾದ}

ಸರಿಯಾದ ಮನಃಪ್ರಜ್ಞೆ {ಎಚ್ಚರವಾಗಿರುವ, ಎಲ್ಲವನ್ನೂ ಗಮನಿಸುವ ಮನಸ್ಸು}

ಸರಿಯಾದ ಏಕಾಗ್ರತೆ {ಜೀವನದ ವಾಸ್ತವಾಂಶಗಳ ಕುರಿತು ಆಳವಾದ ಧ್ಯಾನ ಮಾಡಬಲ್ಲದ್ದು}

ನಿಯಮಗಳು

ಕೊಲಬೇಡ, ಕಳಬೇಡ,ವ್ಯಭಿಚಾರಿಯಾಗಬೇಡ,ಅಸತ್ಯವನ್ನು ನುಡಿಯಬೇಡ,ಇತರರನ್ನು ದೂಷಿಸಬೇಡ, ಕಠೋರವಾಗಿ ನುಡಿಯಬೇಡ, ವ್ಯರ್ಥ ಮಾತುಕತೆಯಲ್ಲಿ ತೊಡಗಬೇಡ. ಇತರರ ಸಂಪತ್ತನ್ನು ಬಯಸಬೇಡ. ಇತರರನ್ನು ದ್ವೇಷಿಸಬೇಡ. ಧಾರ್ಮಿಕ ಚಿಂತನೆಯ ಅಭ್ಯಾಸ ಮಾಡು.

ಪುಣ್ಯ ಕಾರ್ಯಗಳು

ಸತ್ಪಾತ್ರರಿಗೆ ದಾನವನ್ನು ಮಾಡು. ನೈತಿಕತೆಯ ನಿಯಮಗಳನ್ನು ಪಾಲಿಸು. ಒಳ್ಳೆಯ ಆಲೋಚನೆಗಳನ್ನು ಬೆಳೆಸಿ ಅಭ್ಯಾಸ ಮಾಡು.

ಇತರರಿಗೆ ಸೇವೆ ಸಲ್ಲಿಸು, ಇತರರಿಗೆ ಬೇಕಾದ್ದನ್ನು ನೀಡು.

ತಂದೆತಾಯಿಗೆ ಹಾಗೂ ಹಿರಿಯರಿಗೆ ಗೌರವ ತೋರಿಸು, ಸೇವೆ ಮಾಡು.

ನಿನ್ನ ಪುಣ್ಯಗಳ ಒಂದು ಭಾಗವನ್ನು ಇತರರಿಗೆ ನೀಡು.

ಇತರರು ನೀಡುವ ಪುಣ್ಯವನ್ನು ಸ್ವೀಕರಿಸು.

ಧರ್ಮದ ವಿಚಾರಗಳನ್ನು ಕೇಳು.

ಧರ್ಮದ ವಿಚಾರಗಳನ್ನು ಪ್ರಚಾರ ಮಾಡು.

ನಿನ್ನ ದೋಷಗಳನ್ನು ಸರಿಪಡಿಸಿಕೊ.

ಮೂರು ಎಚ್ಚರಿಕೆಗಳು

ಎಂಬತ್ತೋ, ತೊಂಬತ್ತೋ  ಅಥವಾ ಒಂದು ನೂರು ವರ್ಷಗಳ ವೃದ್ಧ ಪುರುಷ ನನ್ನೋ ಅಥವಾ ಮಹಿಳೆಯನ್ನೋ ನೀನು ನೋಡಿಲ್ಲವೆ ? ಬಡಕಲು ಮೈ, ಹಳೆಯ ಮರದ ಛಾವಾಣಿಯಂತೆ ಬಾಗಿದ ಬೆನ್ನು, ಕೋಲನ್ನು ಆಸರೆಯಾಗಿರಿಸಿಕೊಂಡು ತಡವರಿಸುತ್ತ, ನಡುಗುವ ಕೈ ಕಾಲುಗಳು, ಬೊಚ್ಚುಬಾಯಿ, ನೆರೆಗೂದಲ ತಲೆ, ಸೊರಗಿ ಹೋದ ಚರ್ಮವುಳ್ಳ ಮುದುಕರನ್ನು ಕಂಡದ್ದು ನೆನಪಿಲ್ಲವೇ ನಿನಗೆ ?  ನೀನು ಹೀಗೆಯೇ ಕೊಳೆಯಬೇಕು, ಇದರಿಂದ ನೀನು ತಪ್ಪಿಸಿಕೊಳ್ಳಲಾರೆ ಎಂಬ ಆಲೋಚನೆ ನಿನಗೆ ಇದನ್ನು ಕಂಡಾಗ ಎಂದೂ ಬರಲಿಲ್ಲವೆ ?

ರೋಗದಿಂದ ನರಳುತ್ತ, ದುರ್ಬಲತೆಯಿಂದ ತನ್ನ ಹೇಸಿಗೆಯಲೇ ಅಸಹಾಯಕತೆಯಿಂದ ಒದ್ದಾಡುತ್ತಿರುವ ಪುರುಷನನ್ನೋ, ಮಹಿಳೆಯನ್ನೋ ನೀನು ಎಂದು ನೋಡಿಲ್ಲವೆ ? ಇತರರ ಸಹಾಯದಿಂದ ಮಾತ್ರ ಮೇಲೇಳಬಲ್ಲ, ಅವರ ಸಹಾಯವಿದ್ದಾರೆ ಹಾಸಿಗೆಯಲ್ಲಿ ಮಲಗಬಲ್ಲ ರೋಗಿಗಳಂತೆ ನೀನೂ ರೋಗಗಳಿಗೆ ಬಲಿಯಾಗುವೆಯೆಂಬ ಆಲೋಚನೆ ನಿನಗೆಂದೂ ಬರಲಿಲ್ಲವೇ ? ಇದರಿಂದ ನೀನು ತಪ್ಪಿಸಿಕೊಳ್ಳಲಾರೆಯೆಂದು, ನೀನಗೆ ತಿಳಿಯಲಿಲ್ಲವೇ ?

ನೀನು ಸತ್ತಿರುವ ಪುರುಷನ ಅಥವಾ ಮಹಿಳೆಯ ಶವವನ್ನು ಈ ಪ್ರಪಂಚದಲ್ಲಿ ಕಂಡಿಲ್ಲವೇ? ಎರಡು ಅಥವಾ ಮೂರು ದಿನಗಳ ಬಳಿಕ ಆ ಶವವು ಉಬ್ಬಿ, ನೀಲಿಗಟ್ಟಿ ಕೊಳೆಯಲು ಪ್ರಾರಂಭಿಸುವುದು ನೆನಪಿಲ್ಲವೇ ? ನಿನಗೂ ಸಾವು ಬರುವುದು, ಅದರಿಂದ ನೀನು ತಪ್ಪಿಸಿಕೊಳ್ಳಲಾರೆಯೆಂಬ ಆಲೋಚನೆ ನಿನಗೆ ಬರಲೇ ಇಲ್ಲವೇ ?

ಸಾರನಾಥದಲ್ಲಿ ನೀಡಿದ ಮೊದಲ ಉಪನ್ಯಾಸ

ಐದು ಭಿಕ್ಷುಗಳನ್ನು ಉದ್ದೇಶಿಸಿ ಬುದ್ಧ ನುಡಿದ:

ತಥಾಗತನನ್ನು ಅವನ ಹೆಸರಿನಿಂದಾಗಲಿ, ಸ್ನೇಹಿತನೆಂದಾಗಲಿ ಕರೆಯದಿರಿ. ಏಕೆಂದರೆ ಅವನು ಈಗ ಬುದ್ಧ- ಪವಿತ್ರಾತ್ಮನು. ಬುದ್ಧ ಎಲ್ಲರನ್ನೂ ಸಮನಾಗಿ ಪ್ರೀತಿಸುವ ಹೃದಯವುಳ್ಳವನಾದ್ದರಿಂದ ಅವನನ್ನು ‘ತಂದೆ’ ಎಂದು ಕರೆಯುವರು. ತಂದೆಗೆ ಅಗೌರವವನ್ನು ತೋರಿಸುವುದು ಅಪರಾಧ,ಅವನನ್ನು ದ್ವೇಷಿಸುವುದು ಪಾಪ.

ತಥಾಗತನು ತಪಸ್ಸಿನಲ್ಲಿ ಮುಕ್ತಿಯನ್ನು ಅರಸಲಿಲ್ಲ. ಹಾಗೆಂದ ಮಾತ್ರಕ್ಕೆ ಅವನು ಪ್ರಾಪಂಚಿಕ ಸುಖಗಳಲ್ಲಿ ರಮಿಸುವನು ಎಂದು ಭಾವಿಸದಿರಿ. ಅವನು ವಿಲಾಸಿಯಲ್ಲ. ತಥಾಗತನು ಮಧ್ಯಪಂಥವನ್ನು ಕಂಡುಕೊಂಡಿರುವನು.

ಮೀನು ಮಾಂಸಗಳನ್ನು ತಿನ್ನದೇ ಇರುವುದು, ನಗ್ನನಾಗಿರುವುದು, ತಲೆಬೋಳಿಸಿಕೊಳ್ಳುವುದು ಅಥವಾ ಜಟಾಧಾರಿಯಾಗಿರುವುದು, ನಾರುಮಡಿಯನ್ನು ಧರಿಸುವುದು, ಮೈಗೆ ಕೊಲೆಯನ್ನು ಮೆತ್ತಿಕೊಳ್ಳುವುದು, ಬೆಂಕಿಗೆ ಆಹುತಿಯಾಗುವುದು- ಇವಾವುದೂ ಭ್ರಮೆಗಳಿಂದ ಮುಕ್ತನಾಗದವನನ್ನು ಪವಿತ್ರಗೊಳಿಸಲಾರವು.

ವೇದಗಳನ್ನು ಪಠಿಸುವುದು, ಪುರೋಹಿತರಿಗೆ ದಕ್ಷಿಣೆ ನೀಡುವುದು, ದೇವತೆಗಳಿಗೆ ಹವಿಸ್ಸನ್ನು ನೀಡುವುದು, ಬಿಸಿಲು ಚಳಿಗಳಿಗೆ ಮೈಯೊಡ್ಡಿ ಕಠೋರ ತಪಸ್ಸನ್ನಾಚರಿಸುವುದು ಮುಕ್ತಿಗಾಗಿ ಇಂತಹ ಅನೇಕ ಆಚರಣೆಗಳನ್ನು ಮಾಡಿದರು  ಭ್ರಮೆಗಳಿಂದ ಮುಕ್ತನಾಗದಿದ್ದಾರೆ ಅವು ಅವನನ್ನು ಪವಿತ್ರಗೊಳಿಸಲಾರವು.

ಕೋಪ, ಮದ್ಯಸೇವನೆ, ಹಠಮಾರಿತನ,ಧರ್ಮಾಂಧನಾಗಿರುವುದು,ಕಪಟತನ, ಅಸೂಯೆ, ಆತ್ಮಪ್ರಶಂಸೆ, ಇತರರನ್ನು ಅವಹೇಳನ ಮಾಡುವುದು, ದೊಡ್ಡಸ್ತಿಕೆ ಹಾಗೂ ಕೆಟ್ಟ ಭಾವನೆಗಳು-ಇವು ಅಶೌಚದ ವಿಧಗಳು. ಕೇವಲ ಮಾಂಸವನ್ನು ತಿನ್ನುವುದು ಮಾತ್ರ ಅಪವಿತ್ರ ಕ್ರಿಯೆಯಲ್ಲ.

ಓ ಭಿಕ್ಷುಗಳೇ. ನನ್ನ ಉಪದೇಶವನ್ನು ಕೇಳಿ, ಎರಡೂ ಅತಿರೇಕಗಳಿಂದ ದೂರವಿರವ ಮಧ್ಯಪಂಥವನ್ನು ನಿಮಗೆ ತಿಳಿಸುವೆ. ಕಷ್ಟಗಳನ್ನು ಅನುಭವಿಸುವುದರಿಂದ ದುರ್ಬಲನಾದ ಸಾಧಕನ ಮನಸ್ಸಿನಲ್ಲಿ ಗೊಂದಲ ಮಯ ಅನಾರೋಗ್ಯಕರ ಚಿಂತನೆಗಳೇ ಏಳುತ್ತವೆ. ಪ್ರಾಪಂಚಿಕ ಜ್ಞಾನವನ್ನು ಗಳಿಸಬೇಕಾದರೂ ಶರೀರ ದಂಡನೆ ಉಚಿತವಲ್ಲ ಎಂದಾದ ಮೇಲೆ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಬೇಕಾದರೆ ಈ ಮಾರ್ಗ ಹೇಗೆ ಉಪಯುಕ್ತವಾದೀತು?

ಯಾರು ತನ್ನ ದೀಪವನ್ನು ನೀರಿನಿಂದ ತುಂಬಿ ಬೆಳಗಿಸಲು ಪ್ರಯತ್ನಿಸುವನೋ  ಅವನು ಕತ್ತಲೆಯನ್ನು ಹೋಗಲಾಡಿಸುವುದಾದರೂ ಹೇಗೆ? ಕೊಳೆತ ಮರವನ್ನು ಉರಿಸಲು ಪ್ರಯತ್ನಿಸುವವನು ವಿಫಲನಾಗುವನು..

ಶರೀರವನ್ನು ದಂಡಿಸುವುದು ನೋವನ್ನುತರುವುದು, ಅದು ವ್ಯರ್ಥವೂ ಹೌದು. ತನ್ನ ಬಯಕೆಗಳ  ಅಗ್ನಿಯನ್ನು  ತಣಿಸದೆ ನೀಚ ಜೀವನವನ್ನು ಜೀವಿಸುತ್ತ ಹೇಗೆ ತಾನೇ ತನ್ನ ಅಹಂಕಾರದಿಂದ ಸಾಧಕನು ಮುಕ್ತನಾಗಬಲ್ಲ?

ಅಹಂಕಾರವಿರುವ ತನಕ ಎಲ್ಲ ಶರೀರದಂಡನೆಯೂ ವ್ಯರ್ಥ. ಪ್ರಾಪಂಚಿಕ ಅಥವಾ ಸ್ವರ್ಗದ ಸುಖಗಳ ಬಯಕೆಗಳು ವ್ಯಕ್ತಿಯನ್ನು ಕಾಡುತ್ತಿದ್ದಾರೆ, ತಪಸ್ಸಿನಿಂದ ಏನು ಸಾಧಿಸಿದಂತಾಯಿತು ? ಆದರೆ ಯಾರಲ್ಲಿ ಅಹಂಕಾರ ನಾಶವಾಗಿದೆಯೋ, ಯಾರು ಕಾಮನೆಗಳಿಂದ ಮುಕ್ತನಾಗಿರುವನೋ ಅವನು ಈ ಜಗತ್ತಿನ ಅಥವಾ ಸ್ವರ್ಗದ ಸುಖಗಳನ್ನು ಬಯಸನು. ಶರೀರದ ಸ್ವಾಭಾವಿಕ ಬಯಕೆಗಳನ್ನು ಈಡೇರಿಸುವುದರಿಂದ ಅವನು ಮಲಿನಗೊಳ್ಳುವುದಿಲ್ಲ. ಶರೀರದ ಅವಶ್ಯಕತೆಗಳಿಗೆ ತಕ್ಕಂತೆ ಅವನು ತಿನ್ನಲಿ, ಕುಡಿಯಲಿ.

ನೀರು ಕಮಲದ ಸುತ್ತ ಇದ್ದರೂ, ಅದರ ದಳಗಳನ್ನು ತೋಯಿಸುವುದಿಲ್ಲ. ಇಂದ್ರಿಯ ಲೋಲುಪತೆಯ ಎಲ್ಲ ವಿಧಗಳೂ ದುರ್ಬಲಗೊಳಿಸುವ ಸಾಧನಗಳು. ಯಾರು ತನ್ನ ಇಂದ್ರಿಯಗಳ ಬಯಕೆಗಳ ದಾಸನಾಗಿರುತ್ತಾನೋ, ಸದಾ ಅವುಗಳ ತೃಪ್ತಿಗಾಗಿ ಪರದಾಡುತ್ತಿರುತ್ತಾನೋ ಅಂತಹವನ ಬಾಳು ತುಚ್ಛ ಹಾಗೂ ಅಸಭ್ಯ.

ಜೀವನಕ್ಕೆ ಬೇಕಾಗುವ ಅವಶ್ಯಕತೆಗಳನ್ನು ಮಾತ್ರ ಪೂರೈಸುವುದು ತಪ್ಪಲ್ಲ. ಶರೀರವನ್ನು ಆರೋಗ್ಯ ವಾಗಿಟ್ಟುಕೊಳ್ಳುವುದು ಕರ್ತವ್ಯ, ಇಲ್ಲದಿದ್ದರೆ ಜ್ಞಾನದ ದೀಪದ ಬತ್ತಿಯನ್ನು ಹೊಸೆಯುವ ಸಾಮರ್ಥ್ಯ ಇಲ್ಲವಾಗುತ್ತದೆ, ಮನಸ್ಸು ದೃಢವಾಗಿರದೆ ತಿಳಿಯದ ಆಲೋಚನೆಯೂ ಅಸಾಧ್ಯವಾಗುತ್ತದೆ.

ಎರಡು ವಿಪರೀತಗಳಿಂದ ದೂರವಿರುವ ‘ಮಧ್ಯ ಪಂಥ’ ಎಂದರೆ ಇದೆ ಓ ಭಿಕ್ಷುಗಳೇ !

ಅನುಗ್ರಹೀತನಾದ ಬುದ್ಧನು ತನ್ನ  ಶಿಷ್ಯರನ್ನು ಉದ್ದೇಶಿಸಿ ಅತ್ಯಂತ ಕರುಣೆಯಿಂದ ಮಾತನಾಡಿದನು. ಅವರು ಮಾಡಿದ್ದ ತಪ್ಪುಗಳಿಗೆ ಸಹಾನುಭೂತಿ ತೋರಿ ಅದೆಲ್ಲ ವ್ಯರ್ಥವೆಂದು ತೋರಿದ. ಬುದ್ಧನ ಮೃದು ನುಡಿಗಳ ಹಿತವಾದ ಪ್ರಚೋದನೆಯಿಂದ ಅವರ ಹೃದಯಗಳನ್ನು ಹಿಮದಂತೆ ಕಲ್ಲಾಗಿಸಿದ್ದ ಅಪನಂಬಿಕೆಯ ಭಾವನೆಗಳೆಲ್ಲ ಕರಗಿ ಹೋದವು.

ಧರ್ಮಚಕ್ರದ  ಚಾಲನೆ

ಬುದ್ಧನು ಅತ್ಯದ್ಭುತವಾದ ಧರ್ಮಚಕ್ರವನ್ನು ಸಾರನಾಥದಲ್ಲಿ ಸ್ಥಾಪಿಸಿದನು ; ಅವನು ಐದು ಮಂದಿ ಭಿಕ್ಷುಗಳಿಗೆ ಬೋಧನೆ ಮಾಡತೊಡಗಿದನು. ಅವರಿಗೆ ಈ ಮೂಲಕ  ಅಮೃತತ್ವದ ದ್ವಾರವನ್ನು ತೆರೆದನು ; ನಿರ್ವಾಣಸುಖವನ್ನು ಅವರಿಗೆ  ತೋರಿಸಿಕೊಟ್ಟನು. ಬುದ್ಧನು ತನ್ನ ಉಪದೇಶವನ್ನು ಮಾಡತೊಡಗಿದಾಗ ಜಗತ್ತಿನಲ್ಲೆಲ್ಲ ವಿದ್ಯುತ್ ಸಂಚಾರವಾಯಿತು.

ಅವನು ಹೇಳಿದನು :

ಚಕ್ರದ ಅರೆಗಳು ಸತ್ ಚಾರಿತ್ರ್ಯದ ನಿಯಮಗಳು; ನ್ಯಾಯ ಆ ಅರೆಗಳ ಏಕರೂಪತೆ. ವಿವೇಕ ಚಕ್ರದ ಹೊರಮೈ ; ಶಿಷ್ಟಾಚಾರ ಹಾಗೂ ಚಿಂತನಶೀಲತೆಗಳು ಚಕ್ರದ ನಾಭಿ- ಅದರಲ್ಲೇ ಸತ್ಯದ ಕೇಂದ್ರ ಬಿಂದುವನ್ನು  ಬಿಗಿಗೊಳಿಸಲಾಗಿದೆ.

ಯಾರು ದುಃಖ, ಅದರ ಕಾರಣ, ಅದರ ಪರಿಹಾರೋಪಾಯ, ಹಾಗೂ ಅದರ ನಿವೃತ್ತಿ ಇವನ್ನು ಅರಿತಿರುತ್ತಾನೆ. ಅವನು ನಾಲ್ಕು ಆರ್ಯಸತ್ಯಗಳನ್ನು ಅರಿತಿರುತ್ತಾನೆ. ಅವನು ಸನ್ಮಾರ್ಗದಲ್ಲಿ ನಡೆಯುತ್ತಾನೆ.

ಸರಿಯಾದ ದೃಷ್ಟಿಯು ಅವನ ದಾರಿದೀಪವಾಗುವುದು. ಸರಿಯಾದ ಲಕ್ಷ್ಯವೆ ಅವನ ಮಾರ್ಗದರ್ಶಕವಾಗುವುದು. ಸರಿಯಾದ ಮಾತುಗಳು ಅವನಿಗೆ ಮಾರ್ಗ ಮಧ್ಯದ ತಂಗುದಾಣವಾಗುವುದು. ಅವನ ವರ್ತನೆ ನೇರ; ಅಂತೆಯೇ ನಡಿಗೆಯೂ ನೇರ. ಅವನು ಜೀವನೋಪಾಯಕ್ಕಾಗಿ ಮಾಡುವ ಕೆಲಸ ಸರಿಯಾದುದು ; ಅದರಲ್ಲೇ ಅವನಿಗೆ ಉಲ್ಲಾಸ. ಸರಿಯಾದ ಪ್ರಯತ್ನಗಳೇ ಅವನ ಹೆಜ್ಜೆಗಳು ; ಸರಿಯಾದ ಆಲೋಚನೆಗಳೇ ಅವನ ಉಸಿರಾಟ ; ಶಾಂತಿ ಅವನ ಹೆಜ್ಜೆಯನ್ನು ಅನುಸರಿಸಿ ಬರುವುದು.

ಅನಂತರ ಧನ್ಯಜೀವಿ ಬುದ್ಧನು ಜೀವದ ಅಸ್ಥಿರತೆಯನ್ನು ಕುರಿತು ಹೀಗೆಂದನು :

ಏನೇನು ಹುಟ್ಟುವುದೋ ಎಲ್ಲವೂ ನಾಶವಾಗುವುದು. ಜೀವದ ಚಿಂತೆಗಳೆಲ್ಲವೂ ಅರ್ಥಹೀನ; ಅಹಂಕಾರವೆಂಬುದು ಮರೀಚಿಕೆಯಂತೆ; ಅದನ್ನು ಕಾಡುವ ತೊಂದರೆಗಳೆಲ್ಲವೂ ಮಾಯವಾಗುವವು. ನಿದ್ರಿಸುವವನು ಎಚ್ಚೆತ್ತಾಗ ಅವನ ದುಃಸ್ವಪ್ನ ಮಾಯವಾಗುವಂತೆ ಅವೆಲ್ಲ ತೊಲಗುವವು.

ಜಾಗೃತನಾದವನು ಭಯರಹಿತನು; ಅವನೇ ಬುದ್ಧನಾದವನು; ಅವನು ತನ್ನ ಆಸಕ್ತಿ, ಆಸೆ ಹಾಗೂ ದುಃಖಗಳ ನಿರರ್ಥ ಕಥೆಯನ್ನು ಅರಿತಿರುವನು.

ಸ್ವಾರ್ಥವನ್ನು ಜಯಿಸಿದವನೇ ಸುಖಿ.ಶಾಂತಿಯನ್ನು ಪಡೆದವನು ಸುಖಿ. ಅದೇ ರೀತಿ ಸತ್ಯವನ್ನು ಕಂಡುಕೊಂಡವನು ಸುಖಿ.

ಸತ್ಯ ಉದಾತ್ತ ಹಾಗೂ ಮಧುರ ಸತ್ಯವು ಕೆಡುಕಿನಿಂದ ನಿನ್ನನ್ನು ರಕ್ಷಿಬಲ್ಲುದು. ಸತ್ಯಕ್ಕೆ ಹೊರತಾದ ಜಗದೋದ್ಧಾರಕ ಈ ಜಗತ್ತಿನಲ್ಲಿ ಬೇರಾರು ಇಲ್ಲ.

ಸತ್ಯದಲ್ಲಿ ನಂಬಿಕೆಯಿಡು. ಸತ್ಯವನ್ನು ಗ್ರಹಿಸಲು ನಿನಗೆ ಅಸಾಧ್ಯವಾಗಬಹುದು,ಅದು ಅತ್ಯಂತ ಕಹಿಯಾಗಿರಬಹುದು, ಮೊದ ಮೊದಲು ನೀನು ಅದರಿಂದ ಹಿಮ್ಮೆಟ್ಟಬಹುದು. ಆದರೂ ಸತ್ಯದಲ್ಲಿ ವಿಶ್ವಾಸವಿಡು.

ಆತ್ಮ ಒಂದು ಜ್ವರ; ಅದು ಒಂದು ಕ್ಷಣಿಕ ದರ್ಶನ, ಕನಸು. ಆದರೆ ಸತ್ಯ ಪರಿಪೂರ್ಣ, ಉದಾತ್ತ ಹಾಗೂ ಚಿರಂತನ. ಸತ್ಯಕ್ಕೆ ಹೊರತಾದ ಅಮರತ್ವವಿಲ್ಲ. ಏಕೆಂದರೆ ಸತ್ಯವೊಂದೇ ಶಾಶ್ವತವಾದುದು.

ಸತ್ಯಕ್ಕೆ ವಿಧೇಯನಾಗಿರಲು ನಿರ್ಧರಿಸಿರುವ ವ್ಯಕ್ತಿ ಏಕಾಂಗಿಯಾಗಿದ್ದರೆ,ತನ್ನ ಹಳೆಯ ಅಭ್ಯಾಸಗಳಿಗೆ ಜಾರಿಬೀಳಬಹುದು. ಆದ್ದರಿಂದ ಜೊತೆಯಾಗಿ ನಿಲ್ಲಿ ; ಒಬ್ಬರಿಗೊಬ್ಬರು ಸಹಕಾರ ನೀಡಿ ; ಇನ್ನೊಬ್ಬರ ಪ್ರಯತ್ನವನ್ನು ಬಲಗೊಳಿಸಿ.

ಸಹೋದರರಂತೆ ಇರಿ ; ಪ್ರೀತಿಯಲ್ಲಿ, ಪಾವಿತ್ರ್ಯದಲ್ಲಿ, ಸತ್ಯವೆಂಬ ಧ್ಯೇಯದಲ್ಲಿ ನೀವೆಲ್ಲ ಒಂದಾಗಿ.

ಸತ್ಯವನ್ನು ಎಲ್ಲೆಡೆ ಹರಡಿ ; ಆ ತತ್ತ್ವವನ್ನು ಜಗತ್ತಿನ ಎಲ್ಲೆಡೆ ಪ್ರಚಾರ ಮಾಡಿ. ಅದರಿಂದ ಎಲ್ಲ ಜೀವಿಗಳೂ ಧರ್ಮಸಾಮ್ರಾಜ್ಯದ  ಪ್ರಜೆಗಳಾಗಿ ಬದುಕಬಹುದ.

ದುಃಖದ ನಾಶಕ್ಕಾಗಿ ಪವಿತ್ರ ಜೀವನವನ್ನು ನಡೆಸು.

ದಯೆ

ನನಗೆ ಯಾವ ಪರಿಹಾರವೂ ಬೇಡ ಸ್ವರ್ಗದಲ್ಲಿ ಜನ್ಮ ಪಡೆಯುವುದೂ ಬೇಡ. ಆದರೆ ನನಗೆ ಬೇಕಾಗಿರುವುದು: ದಾರಿ ತಪ್ಪಿಹೋಗಿರುವವರನ್ನು ಮತ್ತೆ ಸನ್ಮಾರ್ಗಕ್ಕೆ ಕರೆತರಲು, ಅಜ್ಞಾನದ ಕತ್ತಲಲ್ಲಿ ಜೀವಿಸುತ್ತಿರುವವರಿಗೆ ಬೆಳಕನ್ನು ನೀಡಲು, ಜಗತ್ತಿನಿಂದ ಎಲ್ಲ ದುಃಖ, ಸಂಕಟಗಳನ್ನು ನಿವಾರಿಸಲು ನನಗೆ ಸಹಾಯ ಬೇಕು.

ನನ್ನ ಅನುಕೂಲಕ್ಕಾಗಿ ನಾನು ವಿಶ್ವ ದಯೆಯನ್ನು ಆಚರಿಸುತ್ತಿಲ್ಲ ; ಅನುಕಂಪದಲ್ಲಿ ನನಗೆ ಪ್ರೀತಿಯಿದೆ, ಏಕೆಂದರೆ ಎಲ್ಲ ಜೀವಿಗಳ ಆನಂದದಲ್ಲಿ ನನ್ನ ಪಾಲನ್ನು ನೀಡುವುದು ನನ್ನ ಆಸೆ.

ನಿನ್ನ ದುಃಖಕ್ಕೆ ಕಾರಣ ಏನೇ ಆಗಿರಲಿ, ಇತರರನ್ನು ಮಾತ್ರ ನೋಯಿಸಬೇಡ.

ಜೀವಿಗಳನ್ನು ಹಿಂಸಿಸುವ, ಅವುಗಳಿಗೆ ಉಪದ್ರವ ನೀಡುವ, ಅವುಗಳ ಮೇಲೆ ದಯೆಯಿಲ್ಲದ ವ್ಯಕ್ತಿಯನ್ನು ಜಾತಿಭ್ರಷ್ಟನೆಂದು ತಿಳಿಯಬೇಕು.

ಎಲ್ಲ ಜೀವಿಗಳ ಮೇಲೆ ದಯೆ- ಇದೇ ನಿಜವಾದ ಧರ್ಮ. ಇತರ ಜೀವಿಗಳ ಬಗ್ಗೆ ನಿನ್ನ ಹೃದಯದಲ್ಲಿ ಅಪರಿಮಿತ ಸದ್ಭಾವವನ್ನು ಬೆಳೆಸು.

ನಿಜವಾದ ಧರ್ಮದ ವಿಶಿಷ್ಟವಾದ ಲಕ್ಷಣವೆಂದರೆ, ಸದ್ಭಾವ, ಪ್ರೀತಿ, ಸತ್ಯನಿಷ್ಠೆ, ಪರಿಶುದ್ಧತೆ, ಉದಾತ್ತಚರಿತೆ ಹಾಗೂ ಕರುಣೆ.

ಎಲ್ಲ ಜೀವಿಗಳಿಗೂ ಸುಖದ ಬಯಕೆಯಿದೆ. ಆದ್ದರಿಂದ ನಿನ್ನ ದಯೆಯನ್ನು ಎಲ್ಲರೆಡೆಗೆ ಹರಿಸು.

ದ್ವೇಷ ದ್ವೇಷವನ್ನು ನಾಶಗೈಯುವುದಿಲ್ಲ. ಪ್ರೀತಿಯಿಂದ ಮಾತ್ರ ಅದು ನಾಶವಾಗುವುದು. ಇದು ಪ್ರಾಚೀನವಾದ ನಿಯಮ.

ಸಹನೆಯೆಂಬುದು ಅತ್ಯುನ್ನತವಾದ ತಪಸ್ಸು. ನಿರ್ವಾಣ ಅತಿಶ್ರೇಷ್ಠವೆಂದು ಬುದ್ಧರು ಹೇಳುತ್ತಾರೆ. ಇತರರನ್ನು ಹಿಂಸಿಸುವವನು ಸರ್ವತ್ಯಾಗಿಯಲ್ಲ ; ಇತರರನ್ನು ದೂಷಿಸುವವನು ಸಾಧುವಲ್ಲ.

ಇತರರನ್ನು ನೋಯಿಸುವ ಮೂಲಕ ತನ್ನ ಸುಖವನ್ನು ಕಾಣುವವನು ದ್ವೇಷರಹಿತನಾಗಿಲ್ಲ ಎಂದೆನ್ನಬೇಕು. ಏಕೆಂದರೆ ಅವನು ದ್ವೇಷದ ಸಿಕ್ಕುಗಳಲ್ಲಿ ಬಂಧಿತನಾಗಿದ್ದಾನೆ.

ತಾಯಿ ತನ್ನ ಜೀವನವನ್ನೇ ಬಲಿಕೊಟ್ಟಾದರೂ ತನ್ನ ಏಕೈಕ ಮಗುವನ್ನು ರಕ್ಷಿಸುತ್ತಾಳೆ; ಅಂತೆಯೇ ಸತ್ಯವನ್ನು ಕಂಡುಕೊಂಡವನು ಯಾವ ಭೇದವನ್ನೂ ಮಾಡದೆ ಎಲ್ಲರಿಗೂ ಒಳಿತನ್ನೇ ಬಯಸಬೇಕು.

ಸೇವಾಕಾರ್ಯಗಳನ್ನು ಮಾಡುವವನನ್ನು ಎಲ್ಲರೂ ಪ್ರೀತಿಸುತ್ತಾರೆ. ಅವನ ಸ್ನೇಹವನ್ನು ಎಲ್ಲರೂ ವಿಶೇಷವಾಗಿ ಪ್ರಶಂಸೆ ಮಾಡುತ್ತಾರೆ. ಅಂತ್ಯಕಾಲದಲ್ಲಿ ಅವನ ಹೃದಯ ತೃಪ್ತಿ, ಆನಂದಗಳಿಂದ ತುಂಬಿ ತುಳುಕಾಡುವುದು. ಏಕೆಂದರೆ ಅವನಿಗೆ ಯಾವ ಪಶ್ಚಾತ್ತಾಪವೂ ಇರುವುದಿಲ್ಲ. ತನ್ನ ಕೊಡುಗೆಗೆ ಪ್ರತಿಫಲವಾಗಿ ಪಡೆಯುವ ವಿಕಸಿತ ಕುಸುಮದಿಂದ  ಅವನಿಗೆ ಮಾಗಿದ ಹಣ್ಣು ದೊರಕುವುದು.

ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ: ನಮ್ಮ ಆಹಾರವನ್ನು ನೀಡುವುದರಿಂದ ನಮಗೆ ಇನ್ನಷ್ಟು ಬಲ ದೊರಕುವುದು ; ಇತರರಿಗೆ ವಸ್ತ್ರದಾನ ಮಾಡುವುದರಿಂದ ನಮಗೆ ಹೆಚ್ಚಿನ ಸೌಂದರ್ಯ ಬರುವುದು; ಪಾವಿತ್ರ್ಯ ಮತ್ತು ಸತ್ಯದಲ್ಲಿ ನೆಲೆ ಕಂಡುಕೊಳ್ಳುವುದರಿಂದ ನಮಗೆ ಮಹತ್ತಾದ ನಿಧಿ ದೊರಕುವುದು.

ಯೋಧನು ಶೂರತನದಿಂದ ಯುದ್ಧಕ್ಕೆ ಮುನ್ನುಗ್ಗುವಂತೆ ಸೇವೆ ಮಾಡುವವನು ಮುನ್ನಡೆಯುವನು. ಪ್ರೀತಿ, ಕರುಣೆಗಳಿಂದ ಕೂಡಿದ ಅವನು ಗೌರವದಿಂದ ಎಲ್ಲವನ್ನೂ ಕೊಡುತ್ತಾನೆ. ಅವನು ಎಲ್ಲ ಬಗೆಯ ದ್ವೇಷ, ಅಸೂಯೆ, ಕ್ರೋಧಗಳನ್ನು ಹೋಗಲಾಡಿಸಿಕೊಂಡಿರುತ್ತಾನೆ.

ಸೇವೆ ಮಾಡುವವನು ಮುಕ್ತಿಯ ಮಾರ್ಗವನ್ನು ಕಂಡುಕೊಂಡಿರುತ್ತಾನೆ. ಅವನು ಗಿಡವೊಂದನ್ನು ನೆಟ್ಟು, ಕೆಲವು ವರ್ಷಗಳಾದ ಮೇಲೆ ನೆರಳು, ಹೂ, ಹಣ್ಣುಗಳನ್ನು ಪಡೆಯುವ ವ್ಯಕ್ತಿಯಂತೆ. ಸೇವಾಕಾರ್ಯದ ಫಲ ಇದೇ ರೀತಿ. ಸಹಾಯದ ಅಗತ್ಯವಿದ್ದವರಿಗೆ ಸಹಾಯ ಮಾಡುವವನ ಆನಂದ ಇದೇ ರೀತಿ. ಶ್ರೇಷ್ಠವಾದ ನಿರ್ವಾಣವೂ ಇದೇ ರೀತಿ.

ದಯೆಯಿಂದ ಕೂಡಿದ ಕರ್ಮಗಳನ್ನು ನಿರಂತರ ಮಾಡುವುದರಿಂದ ಮಾತ್ರ ಅಮರತ್ವವನ್ನು ಹೊಂದಬಹುದು. ಅನುಕಂಪ, ಸೇವೆ ಇವುಗಳಿಂದ ಪರಿಪೂರ್ಣತೆಯನ್ನು ಸಾಧಿಸಬಹುದು.

ಅತ್ಯಂತ ಅಗತ್ಯವಾಗಿರುವುದು ಯಾವುದೆಂದರೆ- ಪ್ರೀತಿಯಿಂದ ಕೂಡಿದ ಹೃದಯ.

ಧ್ಯಾನ

ಐದು ಬಗೆಯ ಧ್ಯಾನಗಳಿವೆ :

ಮೊದಲನೆಯದು ಪ್ರೀತಿಯ ಧ್ಯಾನ. ಇದರಲ್ಲಿ ನಿಮ್ಮ ಹೃದಯದ ಹೊಂದಾಣಿಕೆ ಮಾಡಿಕೊಳ್ಳಬೇಕು. ಅದರಿಂದ ನೀವು ಎಲ್ಲರ ಸುಖ, ಸಂತೋಷಗಳನ್ನು ಬಯಸಬೇಕು ; ನಿಮ್ಮ ಶತ್ರುಗಳ ಆನಂದವನ್ನೂ ನೀವು ಬಯಸಬೇಕು.

ಎರಡನೆಯದು ಅನುಕಂಪದ ಧ್ಯಾನ. ಸಂಕಟದಲ್ಲಿರುವ ಎಲ್ಲ ಜೀವಿಗಳನ್ನು ಕುರಿತು ನೀವು ಚಿಂತಿಸಬೇಕು ; ಅವರ ದುಃಖವನ್ನು ನೀವು ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡಿಸಿಕೊಳ್ಳಬೇಕು. ಅದರಿಂದ ನಿಮ್ಮ ಆತ್ಮದಲ್ಲಿ ಅವರಿಗಾಗಿ ಆಳವಾದ ಅನುಕಂಪ ಮೇಲೇಳುವಂತಾಗಬೇಕು.

ಮೂರನೆಯದು ಆನಂದದ ಧ್ಯಾನ. ಇಲ್ಲಿ ನೀವು ಇತರರ ಸಮೃದ್ಧಿಯನ್ನು ಕುರಿತು ಚಿಂತಿಸಬೇಕು. ಇತರರ ಸಂತೋಷದಲ್ಲಿ ನೀವು ಸಂತೋಷವನ್ನು ಕಾಣಬೇಕು.

ನಾಲ್ಕನೆಯದು ಅಶುಚಿಯ ಧ್ಯಾನ. ಕೆಡುಕಿನ, ಭ್ರಷ್ಟಜೀವನದ ಕೆಟ್ಟ ಪರಿಣಾಮಗಳನ್ನು, ಪಾಪ ಹಾಗೂ ರೋಗದ ಪರಿಣಾಮಗಳನ್ನು ಕುರಿತು ನೀವು ಚಿಂತಿಸಬೇಕು. ಒಂದು ಕ್ಷಣದ ಸುಖ ಎಷ್ಟೊಂದು ಕ್ಷುಲ್ಲಕ; ಆದರೆ ಅದರ ಪರಿಣಾಮಗಳು ಎಷ್ಟೊಂದು ಘೋರ !

ಐದನೆಯದು ಶಾಂತಿಯ ಧ್ಯಾನ. ಇಲ್ಲಿ ನೀವು ಪ್ರೀತಿ-ದ್ವೇಷ, ಸರ್ವಾಧಿಕಾರ- ಶೋಷಣೆ, ಬಡತನ – ಶ್ರೀ ಮಂತಿಕೆಗಳನ್ನು ಮೀರಿಹೋಗಿ ಉನ್ನತಭಾವದಲ್ಲಿರುತ್ತೀರಿ. ನಿಮ್ಮ ವಿಧಿಯನ್ನು ನೀವು ನಿಷ್ಪಕ್ಷಪಾತ  ಶಾಂತಭಾವದಿಂದ, ಪರಿಪೂರ್ಣ ಶಾಂತಿಯಿಂದ ಪರಿಗಣಿಸುವಿರಿ.

ನಾಲ್ಕು ಬಗೆಯ ಧ್ಯಾನಗಳಿವೆ :

ಮೊದಲನೆಯದು, ಏಕಾಂತ. ಇಲ್ಲಿ ನಿಮ್ಮ ಮನಸ್ಸನ್ನು ನೀವು ಇಂದ್ರಿಯ ಸುಖಗಳಿಂದ ಮುಕ್ತಗೊಳಿಸಬೇಕು.

ಎರಡನೆಯದು ಮನಶ್ಶಾಂತಿ. ಮನಸ್ಸನ್ನು ಶಾಂತಿ, ಆನಂದಗಳಿಂದ ತುಂಬಬೇಕು.

ಮೂರನೆಯದು, ಆಧ್ಯಾತ್ಮಿಕ ವಿಷಯಗಳಲ್ಲಿ ಆನಂದವನ್ನು ಹೊಂದಬೇಕು.

ನಾಲ್ಕನೆಯದು ಪರಿಪೂರ್ಣವಾದ ಪರಿಶುದ್ಧತೆ ಹಾಗೂ ಶಾಂತಿಯ ಅವಸ್ಥೆ ; ಅಲ್ಲಿ ಮನಸ್ಸು ಎಲ್ಲ ಸುಖ, ದುಃಖಗಳಿಗಿಂತ ಮೇಲಿರುವುದು.

ಆಸಕ್ತಿ ಹೀನನಾಗಿರು; ಮನಸ್ಸನ್ನು ಕುಂಠಿಸುವ ತಪ್ಪು ಸಾಧನೆಗಳನ್ನು ತ್ಯಜಿಸು.

ಋದ್ಧಿ {ಜಡದ ಮೇಲೆ ಚೈತನ್ಯದ ಹತೋಟಿ}ಯನ್ನು ಪಡೆಯಲು ನಾಲ್ಕು ಮಾರ್ಗಗಳಿವೆ:

ದುರ್ಗುಣಗಳು ಮೇಲೇಳುವುದನ್ನು ತಡೆ.

ಮೇಲೆದ್ದ ದುರ್ಗುಣಗಳನ್ನು ದೂರ ಮಾಡು.

ಇನ್ನೂ ಮೂಡಿಬರದಿರುವ ಒಳಿತನ್ನು ನಿರ್ಮಾಣಮಾಡು.

ಪ್ರಾಮಾಣಿಕವಾದ ಅನ್ವೇಷಣೆ ಮಾಡು ; ಅದರಲ್ಲಿ ದೃಢನಿಶ್ಚಯವನ್ನು ಹೊಂದಿರು. ಕೊನೆಗೆ ನೀನು ಸತ್ಯವನ್ನು ಕಾಣುವೆ.

ಮನಸ್ಸು

ಎಲ್ಲ ಕರ್ಮಗಳ ಪೂರ್ವಭಾವಿ ರೂಪವೇ ಮನಸ್ಸು. ಎಲ್ಲ ಇಂದ್ರಿಯ ಸಾಮರ್ಥ್ಯಗಳಲ್ಲಿ ಮನಸ್ಸು ಅತ್ಯಂತ ಹೆಚ್ಚಿನದು. ಎಲ್ಲ ಸಾಪೇಕ್ಷ ಕಲ್ಪನೆಗಳೂ ಮನಸ್ಸಿನಲ್ಲಿ. ಹುಟ್ಟುತ್ತವೆ.

ಮನಸ್ಸು ಎಲ್ಲ ಗ್ರಹಿಕೆಗಳಿಗೂ ಮೊದಲೇ ಬರುತ್ತದೆ. ಬಾಹ್ಯಪ್ರಪಂಚದ ಎಲ್ಲ ಭೂತ ವಸ್ತುಗಳಲ್ಲಿ ಅದು ಅತ್ಯಂತ ಸೂಕ್ಷ್ಮವಾದುದು. ಎಲ್ಲ ವಸ್ತುನಿಷ್ಠ ಪ್ರಜ್ಞೆಯ ಮೂಲ ಮನಸ್ಸಿನಲ್ಲಿದೆ. ಯಾರು ಶುದ್ಧ ಮನಸ್ಸಿನಿಂದ ಮಾತನಾಡುವರೊ ಹಾಗೂ ಕೆಲಸ ಮಾಡುವರೊ ಅವರಲ್ಲಿ ಆನಂದ ನೆಲೆಸಿರುತ್ತದೆ- ತನ್ನ ನೆರಳಿನಂತೆ.

‘ನನ್ನನ್ನು ಎಲ್ಲರೂ ದ್ವೇಷಿಸುತ್ತಾರೆ, ಯಾರೂ ನನ್ನನ್ನು ನಂಬುವುದಿಲ್ಲ; ಎಲ್ಲರೂ ತಪ್ಪುತಿಳಿಯುತ್ತಾರೆ, ಹಾಗೂ ವಂಚಿಸುತ್ತಾರೆ’ ಹೀಗೆ ಯಾರು ಮನಸ್ಸಿನಲ್ಲಿ ಕೊರಗುತ್ತಿರುತ್ತಾರೋ ಅವರು ನಾಶವನ್ನು ತರಬಲ್ಲ ಕಾರಣಗಳಿಂದ ಮುಕ್ತರಾಗುವುದಿಲ್ಲ.

ತನ್ನನ್ನೇ ತಾನು ಗೆದ್ದವನು ಸಾವಿರ ವೈರಿಗಳನ್ನು ನಾಶಮಾಡಿದವನಿಗಿಂತ ಮಿಗಿಲಾದ ವೀರ. ತನ್ನ ಇಂದ್ರಿಯಗಳಿಗೆ ದಾಸನಾಗಿರುವವನಿಗಿಂತ ಸಾವಿರಪಾಲು ಶಕ್ತಿಶಾಲಿ.

ಬಾಹ್ಯ ಸೌಂದರ್ಯ, ಅದ್ಭುತಗಳನ್ನು  ಅರಸುವ ಮನಸ್ಸುಳ್ಳವನು, ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದವನು; ಅಶುದ್ಧ ಆಹಾರವನ್ನು ಸೇವಿಸುವವನು, ನೈತಿಕ ಧೈರ್ಯವಿಲ್ಲದವನು ಹಾಗೂ ಸೋಮಾರಿಯದವನು- ಇಂತಹವನನ್ನು ಅಜ್ಞಾನ, ದುಃಖಗಳು ಬಿರುಗಾಳಿ ಒಣಮರವನ್ನು ನಾಶಮಾಡುವಂತೆ ನಾಶಮಾಡುವವು.

ಮನೆಯ ಹಂಚನ್ನು ಭದ್ರವಾಗಿ ಹೊಂದಿಸದಿದ್ದರೆ ಮಳೆಯ ಹನಿಗಳು ಒಳಕ್ಕೆ ಬರುವಂತೆ ಆಸಕ್ತಿ,  ದ್ವೇಷ, ಭ್ರಾಂತಿ ಇವು ವ್ಯಕ್ತಿಕೇಂದ್ರಿತ ಧ್ಯಾನಕ್ಕೆ ವಿಮುಖವಾದ ಮನಸ್ಸನ್ನು ಪ್ರವೇಶಿಸುವುವು.

ಯಾರ ಮನಸ್ಸು ಕಾಮದಲ್ಲಿ ಮುಳುಗಿಹೋಗಿಲ್ಲವೋ, ಯಾರು ದ್ವೇಷದ ಪ್ರಭಾವಕ್ಕೆ ಒಳಗಾಗಿಲ್ಲವೋ, ಯಾರು ಒಳಿತು- ಕೆಡುಕುಗಳನ್ನು ತ್ಯಜಿಸಿರುವನೋ, ಅಂಥ ಪ್ರಜ್ಞಾವಂತನಿಗೆ ಯಾವುದೇ ಭಯವಿಲ್ಲ.

ಯಾರ ಹೃದಯ ಅಜ್ಞಾನದ ಮಾರ್ಗವನ್ನು ಅನುಸರಿಸುವುದೋ ಅವನು ಒಬ್ಬ ವ್ಯಕ್ತಿಗೆ ಅವನ ಅತ್ಯಂತ ದ್ವೇಷಿಯಾದ, ಕಡು ವೈರಿಗಿಂತಲೂ ಹೆಚ್ಚಿನ ಹಾನಿಯನ್ನುಂಟು ಮಾಡುವನು.

ನಿಗ್ರಹಿಸಲು ಕಷ್ಟವಾದ, ರಕ್ಷಿಸಲು ಅಸಾಧ್ಯವಾದ ಚಂಚಲ ಮನಸ್ಸನ್ನು ವಿವೇಕಿಯು ನಿಯಂತ್ರಣದಲ್ಲಿಡುತ್ತಾನೆ.

ಮನಸ್ಸನ್ನು ನಿಗ್ರಹಿಸುವುದು ಕಷ್ಟ ಅದು ಅತ್ಯಂತ ಸೂಕ್ಷ್ಮ, ಚುರುಕು ಹಾಗೂ ತಾನುವಾಲಿದಲ್ಲಿಗೆ ತಕ್ಷಣ ನೆಗೆಯುವಷ್ಟು ಚಂಚಲ. ಅದನ್ನು ನಿಗ್ರಹಿಸುವುದು ಸೂಕ್ತ. ನಿಗ್ರಹಿಸಲ್ಪಟ್ಟ ಮನಸ್ಸು ಆನಂದವನ್ನು ತರುವುದು.

ತಂದೆ ತಾಯಿ ಅಥವಾ ಇತರ ಬಂಧುಗಳು ಏನನ್ನು ಮಾಡಲಾರರೋ ಅದನ್ನು ಚೆನ್ನಾಗಿ ಹತೋಟಿಯಲ್ಲಿಟ್ಟ ಮನಸ್ಸು ಮಾಡುವುದು. ಅದು ಒಬ್ಬ ವ್ಯಕ್ತಿಯನ್ನು ಉನ್ನತಿಗೇರಿಸುವುದು.

ಪ್ರಜ್ಞೆ ಮೂಡಿದ ವ್ಯಕ್ತಿಗೆ ಭಯವಿಲ್ಲ.

ಕೆಡುಕನ್ನು ಮಾಡದಿರುವುದು, ಸತ್ಕರ್ಮಗಳನ್ನು ಮಾಡುವುದು, ತನ್ನ ಮನಸ್ಸಿನ ಶುದ್ಧೀಕರಣ- ಇದು ಬೌದ್ಧತತ್ತ್ವ.

ಆತ್ಮ

ಯಾರಿಗೆ ತನ್ನ ಸ್ವರೂಪದ ಅರಿವಿರುವುದೋ, ತನ್ನ ಇಂದ್ರಿಯಗಳು ಹೇಗೆ ವರ್ತಿಸುತ್ತವೆ ಎಂದು ತಿಳಿದಿರುವುದೋ,ಅವರಿಗೆ ‘ಅಹಂ’ ಎಂಬುದು ಇರಲಾರದು. ಅವನು ಶಾಶ್ವತವಾದ ಶಾಂತಿಯನ್ನು ಪಡೆಯುವನು. ಜಗತ್ತು ‘ನಾನು’ ಎಂಬ ಆಲೋಚನೆಗೆ ಅಂಟಿಕೊಂಡಿದೆ. ತಪ್ಪು ಗ್ರಹಿಕೆಗಳು ಇದರಿಂದಲೇ ಹುಟ್ಟುವವು.

‘ನಾನು’ ಎಂಬುದು ಸತ್ತ ನಂತರವೂ  ಇರುವುದು ಎಂದು ಕೆಲವರು ಹೇಳುತ್ತಾರೆ. ಅದು ನಾಶವಾಗುವುದು ಎಂದು ಇತರರು ಹೇಳುತ್ತಾರೆ. ಇಬ್ಬರ ಅಭಿಪ್ರಾಯವೂ ತಪ್ಪು. ಅವರ ತಪ್ಪು ಅತ್ಯಂತ ದಾರುಣವಾದುದು.

‘ನಾನು’ ಎಂಬುದು ನಾಶವಾಗುವುದು ಎಂದಾದರೆ ಅವರು ಯಾವ ಸಿದ್ಧಿಗಾಗಿ ಹೊರಡುವರೋ ಆ ಫಲವೂ ನಾಶವಾಗಬೇಕು.ಆಗ, ಒಂದು ಸಮಯದಲ್ಲಿ ಏನೂ ಇರುವುದಿಲ್ಲ. ಪಾಪದಿಂದ ಕೂಡಿದ ಸ್ವಾರ್ಥದಿಂದ ಉಂಟಾಗುವ ಈ ಬಿಡುಗಡೆಗೆ ಬೆಲೆಯೇ ಇರುವುದಿಲ್ಲ.

‘ನಾನು’ ಎಂಬುದು ನಾಶವಾಗದು ಎಂದಾದರೆ, ಜೀವನ- ಮರಣ ಇವುಗಳ ನಡುವೆ ಜನನಮರಣರಹಿತವಾದ ಒಂದೇ ಒಂದು ಐಕ್ಯವಿದೆ. ‘ನಾನು’ ಎಂಬುದು ಹೀಗಿದ್ದರೆ ಅದು ಪರಿಪೂರ್ಣವಾದುದು ; ಕರ್ಮದಿಂದ ಅದು ಪರಿಪೂರ್ಣವಾಗದು. ಶಾಶ್ವತವಾದ, ಅಳಿವಿಲ್ಲದ ‘ನಾನು’ ಎಂದಿಗೂ ಬದಲಾಗದು. ಆ ಆತ್ಮವು ಈಶ್ವರ ಹಾಗೂ ಒಡೆಯನಾಗಿರುವುದು ; ಆಗಲೇ ಪರಿಪೂರ್ಣವಾಗಿರುವುದನ್ನು ಪರಿಪೂರ್ಣಗೊಳಿಸುವ ಅವಶ್ಯಕತೆಯೇ ಇಲ್ಲ. ನ್ಯೆತಿಕ ಮೌಲ್ಯಗಳು, ಮುಕ್ತಿ ಇತ್ಯಾದಿಗಳು ಅನಗತ್ಯ.

ಆದರೆ ಈಗ ನಾವು ಸುಖ, ದುಃಖಗಳ ಚಿಹ್ನೆಯನ್ನು ಇಲ್ಲಿ ನೋಡುತ್ತೇವೆ. ನಿಯತತೆ ಎಲ್ಲಿದೆ ? ನಮ್ಮ ಕರ್ಮಗಳನ್ನು ಮಾಡುವುದು ‘ನಾನು’ ಅಲ್ಲವಾದರೆ,ಆಗ ‘ನಾನು’ ಎಂಬುದೇ ಇರಲಾರದು. ಕರ್ಮದ ಹಿಂದೆ ಕರ್ತೃವಿರಲಾರ, ಜ್ಞಾನದ ಹಿಂದೆ  ಜ್ಞಾತೃವಿರಲಾರ, ಜೀವದ ಹಿಂದೆ ಈಶ್ವರನಿರಲಾರ.

‘ಅಹಂ’ನ ದಾಸನಾದ ನೀನು, ಅದಕ್ಕೋಸ್ಕರ ಅಹೋರಾತ್ರಿ ದುಡಿಯುವೆ, ಹುಟ್ಟು, ವೃದ್ಧಾಪ್ಯ, ರೋಗ, ಮೃತ್ಯು ಇವುಗಳ ಭಯದಿಂದ ಸತತವೂ ಕಂಗೆಡುವೆ ; ಹೊಸ ವಾರ್ತೆಯನ್ನು ಕೇಳು- ನಿನ್ನ ಕ್ರೂರ ಪ್ರಭು ‘ಅಹಂ’ ಎಂಬುದೇ ಇಲ್ಲ.

‘ನಾನು’ ಎಂಬುದು ಒಂದು ದೋಷ, ಭ್ರಮೆ ಹಾಗೂ ಕನಸು. ಕಣ್ಣು ತೆರೆ, ಎಚ್ಚರಗೊಳ್ಳು. ಎಲ್ಲವೂ ಹೇಗಿವೆಯೋ ಹಾಗೆಯೇ ಅವನ್ನೂ ನೋಡು. ಆಗ ನಿನಗೆ ನೆಮ್ಮದಿಯುಂಟಾಗುವುದು.

ಎಚ್ಚೆತ್ತವನಿಗೆ ದುಃಸ್ವಪ್ನಗಳ ಭಯವಿಲ್ಲ. ಸರ್ಪದಂತೆ ಕಾಣಿಸುವ ವಸ್ತು ಹಗ್ಗವೇ ಎಂದು ಯಾರು ಅರಿತುಕೊಳ್ಳುವನೋ, ಅವನ ಭಯ ಓಡಿಹೋಗುವುದು.

‘ನಾನು’ ಎಂಬುದೇ ಇಲ್ಲ ಎಂದು ತಿಳಿದವನು ತನ್ನ ಎಲ್ಲ ಕಾಮ, ಅಹಂಕಾರಗಳನ್ನು ಕಳಚಿಕೊಳ್ಳುವನು.

ವಸ್ತುಗಳಿಗೆ ಅಂಟಿಕೊಳ್ಳುವುದು, ದುರಾಸೆ, ಇಂದ್ರಿಯಲೋಲುಪತೆ ಇವು ಹಿಂದಿನ ಅಸ್ತಿತ್ವದಿಂದ ಬಂದ ಬಳುವಳಿ  ಇವು  ದುಃಖ, ಪ್ರಾಪಂಚಿಕತೆ ಇವಕ್ಕೆ ಕಾರಣ.

ನಿಮಲ್ಲಿರುವ ಸ್ವಾರ್ಥದಿಂದಾಗಿ ಎಲ್ಲವನ್ನೂ  ಹೊಂದಬೇಕೆಂಬ ಪ್ರವೃತ್ತಿಯನ್ನು ಬಿಟ್ಟುಬಿಡಿ. ಇದರಿಂದ ಪಾಪರಹಿತವಾದ ಮನಶ್ಶಾಂತಿ ನಿಮಗೆ ಲಭಿಸುವುದು. ಅದರಿಂದ ಶಾಂತಿ, ಶುಭ ಹಾಗೂ ವಿವೇಕ ಉಂಟಾಗುವುದು.

ಆತ್ಮವು ಪ್ರಿಯವೆಂದು ಅರಿತಾಗ, ಮನುಷ್ಯನು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ವಿವೇಕಿಯು ಯಾವುದೇ ಮೂರು ಬಗೆಯ ದೃಷ್ಟಿಗಳಲ್ಲಿ ಜಾಗರೂಕತೆಯಿಂದಿರಬೇಕು.

ತನಗೆ ತಾನು ಮಾತ್ರ ಕೆಡಕನ್ನು ಮಾಡಬಹುದು.

ತನ್ನನ್ನು ತಾನು ಮಾತ್ರ ಅಪವಿತ್ರಗೊಳಿಸಬಹುದು.

ತನಗೆ ತಾನು ಮಾತ್ರ ಕೆಡುಕನ್ನು ತಪ್ಪಿಸಬಹುದು.

ತನ್ನನ್ನು ತಾನು ಮಾತ್ರ ಶುದ್ಧೀಕರಿಸಬಹುದು.

ಶುದ್ಧ, ಅಶುದ್ಧ ಎಲ್ಲವೂ ವ್ಯಕ್ತಿಯನ್ನವಲಂಬಿಸಿದೆ.

ಇತರರನ್ನು ಪವಿತ್ರಗೊಳಿಸಲು ಯಾರಿಗೂ ಸಾಧ್ಯವಿಲ್ಲ.