ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ!
ಸುಲಭವಾಗಿ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ:-

ನಿಂಬೆ ಹಣ್ಣು ಗಾತ್ರದ ಹುಣಿಸೆ ರಸ ತೆಗೆದಿಡಿ.

4 ಚಮಚ ಕಾಯಿ ತುರಿದಿಡಿ.

   

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.

1 ಲೋಟ ಅಕ್ಕಿ ತೊಳೆದು ಹುಣಿಸೆ ರಸ, 2 ಚಮಚ ರಸಂ ಪುಡಿ ( ಸಾರಿನ ಪುಡಿ ), ಉಪ್ಪು, ಚಿಟಿಕೆ ಅರಿಷಿಣ, ಚೂರು ಬೆಲ್ಲ 2 ಲೋಟ ನೀರು ಹಾಕಿ ಅನ್ನ ಮಾಡಿಡಿ. ಹುಣಿಸೆ ರಸ ಮತ್ತು ನೀರು ಎರಡೂ ಸೇರಿ 2 ಲೋಟ ಅಳತೆ ಆಗಬೇಕು. ಈ ರೆಸಿಪಿಯಲ್ಲಿ ಅನ್ನ ಉದುರುದುರಾಗಿ ಇರಬೇಕು.

  

ಬಾಣಲೆಯಲ್ಲಿ 6 ಚಮಚ ಎಣ್ಣೆ ಹಾಕಿ ಕಡಲೇ ಬೀಜ ಹುರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೆಂಗಳೂರು, ಉದ್ದಿನ ಬೇಳೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಮಾಡಿ, ಮಾಡಿಟ್ಟ ಅನ್ನ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಮೂರ್ನಾಲ್ಕು ನಿಮಿಷ ಬಿಸಿ ಮಾಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಡಲೇ ಬೀಜ, ಕಾಯಿ ತುರಿ, ಬಿಳಿ ಎಳ್ಳಿನ ಪುಡಿ ಹಾಕಿ ಕಲೆಸಿದರೆ ರುಚಿಯಾದ ಗೊಜ್ಜನ್ನ ಸಿದ್ಧ!

ಇದೇ ರೀತಿ ಗಟ್ಟಿ ಅವಲಕ್ಕಿ ನೆನೆಸಿ ಮಾಡಿದರೆ ಗೊಜ್ಜವಲಕ್ಕಿ ರೆಡಿ!

ಧನ್ಯವಾದಗಳು