ತಮಿಳಿನಲ್ಲಿ ಅಡೈ ಅಂದರೆ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಬೇಳೆಗಳು ತಮ್ಮಲ್ಲಿ ಬೇಕಾದಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿವೆ! ಎಲ್ಲಾ ಬೇಳೆಗಳನ್ನು ಒಟ್ಟು ಗೂಡಿಸಿ ಮಾಡುವ ಆರೋಗ್ಯಕರವಾದ, ರುಚಿಕರವಾದ ರೆಸಿಪಿ ಇಲ್ಲಿದೆ!

ಅಡೈ ಮಾಡುವ ವಿಧಾನ:-

ದೋಸೆ ಅಕ್ಕಿ – 1 ಕಪ್
ತೊಗರಿ ಬೇಳೆ – 1/2 ಕಪ್
ಹೆಸರು ಬೇಳೆ – 1/2 ಕಪ್
ಉದ್ದಿನ ಬೇಳೆ – 1/2 ಕಪ್
ಕಡಲೇ ಬೇಳೆ – 1/2 ಕಪ್
ಗಟ್ಟಿ ಅವಲಕ್ಕಿ – 2 ಚಮಚ
ಮೆಂತ್ಯ – 1/2 ಚಮಚ
ಜೀರಿಗೆ – 1/2 ಚಮಚ
ಮೆಣಸು – 1/4 ಚಮಚ
ಬ್ಯಾಡಗಿ ಮೆಣಸಿನಕಾಯಿ – 4 ರಿಂದ 6

ಮೇಲೆ ಹೇಳಿರುವ ಅಕ್ಕಿ, ಅವಲಕ್ಕಿ, ಬೇಳೆಗಳನ್ನು ತೊಳೆದು ಮೆಣಸಿನಕಾಯಿ, ಮೆಣಸು, ಜೀರಿಗೆ ಹಾಕಿ 2 ಗಂಟೆ ನೆನೆಸಿಡಿ. ನಂತರ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ.

    

ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಪುಡಿ ಇಂಗು ಹಾಕಿ ಚೆನ್ನಾಗಿ ಕಲೆಸಿಡಿ. ಬೇಳೆಗಳಲ್ಲಿ ಸ್ವಲ್ಪ ವಾಯು (Gas) ಅಂಶ ಇರುವುದರಿಂದ ಇಂಗು ಹಾಕಲೇ ಬೇಕು. ಇಂಗು ಬದಲಿಗೆ 1 ಇಂಚು ಶುಂಠಿ ಸಿಪ್ಪೆ ತೆಗೆದು ರುಬ್ಬುವಾಗ ಹಾಕಬಹುದು. ಅಥವಾ ಶುಂಠಿ ಮತ್ತು ಇಂಗು ಎರಡೂ ಸ್ವಲ್ಪ ಸ್ವಲ್ಪ ಹಾಕಬಹುದು.

ಈ ದೋಸೆ ಆಗ ರುಬ್ಬಿ ತಕ್ಷಣ ಮಾಡುವುದು! ಹುಳಿ ಬರುವ ಅವಶ್ಯಕತೆ ಇಲ್ಲ!

  

ಕಾದ ಕಾವಲಿಯ ಮೇಲೆ ಗರಿ ಗರಿಯಾಗಿ ಅಥವಾ ಮೃದುವಾಗಿ ನಿಮಗೆ ಇಷ್ಟವಾಗುವ ರೀತಿಯಲ್ಲಿ ದೋಸೆ ಮಾಡಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ಅಡೈ ಸಿದ್ಧ!

ಅಕಸ್ಮಾತ್ ಹಿಟ್ಟು ಮಿಕ್ಕಿದರೆ ಮರುದಿನ ಸ್ವಲ್ಪ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ ದೋಸೆ ಮಾಡಬಹುದು. ಅದೂ ಕೂಡ ರುಚಿಯಾಗಿರುತ್ತದೆ!

  

ಇದಕ್ಕೆ ಖಾರಾ ಹಾಕಿರುವುದರಿಂದ ಚಟ್ನಿ ಬೇಕಾಗಿಲ್ಲ! ಮೊಸರು, ಚಟ್ನಿ ಪುಡಿ ಜೊತೆಗೆ ತಿನ್ನಬಹುದು!

ಮೆಣಸು, ಬ್ಯಾಡಗಿ ಮೆಣಸಿನಕಾಯಿ ಎರಡೂ ಹಾಕುವುದರಿಂದ ನಿಮ್ಮ ರುಚಿಗೆ ತಕ್ಕಷ್ಟು ಖಾರಾ ಹಾಕಿಕೊಳ್ಳಬಹುದು!

ಧನ್ಯವಾದಗಳು