DAHI BATATA PURI ದಹಿ ಬಟಾಟ ಪುರಿ

Categories: Kannada, Tindi TinisuPublished On: February 23, 20180 Comments0.7 min read
Indu Jayaram
SHARE

ಎಲ್ಲರ ಮೆಚ್ಚಿನ ಚಾಟ್! ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ ಪುರಿ ಮಾಡಲು:-

1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.

  

10 ನಿಮಿಷದ ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ದೊಡ್ಡ ದೊಡ್ಡ ಚಪಾತಿಯಂತೆ ತೆಳ್ಳಗೆ ಲಟ್ಟಿಸಿ, ಯಾವುದಾದರೂ ಚಿಕ್ಕ ಡಬ್ಬದ ಮುಚ್ಚಳದಿಂದ ಕಟ್ ಮಾಡಿ ಪುಟ್ಟ ಪುಟ್ಟ ಪುರಿ ಮಾಡಿ ಕಾದ ಎಣ್ಣೆಯಲ್ಲಿ, ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

ಒಂದೊಂದು ಪುರಿ ಹಾಕಿದಾಗಲೂ ಜಾಲರಿಯಿಂದ ಒತ್ತಿದರೆ ಉಬ್ಬುತ್ತದೆ.

ಹೀಗೆ ಎಲ್ಲಾ ಪುರಿಗಳನ್ನು ಕರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಬೆಳಿಗ್ಗೆ ಪುರಿ ಮಾಡಿಟ್ಟುಕೊಂಡು ಸಂಜೆಗೆ ದಹಿ ಪುರಿ ಮಾಡಬಹುದು!

 

ಹಸಿರು ಚಟ್ನಿ:-

2 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, ಉಪ್ಪು, 1/2 ನಿಂಬೆ ರಸ ಹಾಕಿ ನೀರು ಹಾಕದೆ ರುಬ್ಬಿದರೆ ಹಸಿರು ಚಟ್ನಿ ರೆಡಿ!

 

ಸಿಹಿ ಚಟ್ನಿ:-

1 ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು, 6 ಕರ್ಜೂರ, 1 ನೆಲ್ಲಿ ಕಾಯಿ ಗಾತ್ರದ ಬೆಲ್ಲ ನುಣ್ಣಗೆ ರುಬ್ಬಿ ಸೋಸಿಡಿ. ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿದರೆ ಸಿಹಿ ಚಟ್ನಿ ಸಿದ್ಧ!

    

1/2 ಲೀಟರ್ ಗಟ್ಟಿಯಾದ, ತಾಜಾ ಮೊಸರಿಗೆ 2 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಡೆದಿಡಿ. ( ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ. ನಾನು ಹಾಕಿರುವುದು ಸುಗರ್ ಫ್ರೀ ನ್ಯಾಚೂರ, ಮಧು ಮೇಹಿಗಳೂ ಕೂಡ ತಿನ್ನಬಹುದು!)

2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ. ಈ ಆಲೂ ಮಿಶ್ರಣಕ್ಕೆ 1/4 ಚಮಚ ಖಾರದ ಪುಡಿ, 1/4 ಚಮಚ ಜೀರಿಗೆ ಹುರಿದು ಪುಡಿ ಮಾಡಿದ್ದು, 1/4 ಚಮಚ ಬ್ಲಾಕ್ ಸಾಲ್ಟ್ ಹಾಕಿ ಚೆನ್ನಾಗಿ ಕಲೆಸಿಡಿ.

   

ನಿಮಗೆ ಇಷ್ಟವಾದ ಯಾವುದಾದರೂ ನೆಂದ ಕಾಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ನೀರು ಸೋರಿ ಹಾಕಿಡಿ.

ಒಂದು ತಟ್ಟೆಯಲ್ಲಿ ಪುರಿಗಳನ್ನು ಮಧ್ಯೆ ಒಂದು ರಂಧ್ರ ಮಾಡಿ, ಆಲೂಗೆಡ್ಡೆ ಮಿಶ್ರಣ, ಬೆಂದ ಕಾಳು, ಸ್ವಲ್ಪ ಹಸಿರು ಚಟ್ನಿ, ಸ್ವಲ್ಪ ಸಿಹಿ ಚಟ್ನಿ, ಸಿಹಿ ಮೊಸರು, ಸೇವ್, ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿಟಿಕೆ ಖಾರದ ಪುಡಿ, ಚಾಟ್ ಮಸಾಲ ಉದುರಿಸಿ ತಕ್ಷಣ ಸವಿಯಿರಿ!

ಧನ್ಯವಾದಗಳು

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment