ಬೇಸಿಗೆ ಕಾಲ ಬಂದೊಡನೆ ಗೃಹಿಣಿಯರಿಗೆ ವರ್ಷಕ್ಕೆ ಬೇಕಾಗುವಷ್ಟು ಹಪ್ಪಳ, ಸಂಡಿಗೆ ಮಾಡಿಡುವ ಕೆಲಸ! ಸುಲಭವಾಗಿ ಮಾಡಬಹುದಾದ ಸಬ್ಬಕ್ಕಿಯ ಸಂಡಿಗೆಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1/2 ಕೇಜಿ ಸಬ್ಬಕ್ಕಿಯನ್ನು ತೊಳೆದು ( ಸಾಧಾರಣ ಸಬ್ಬಕ್ಕಿ, ಬೆಳ್ಳಗೆ, ಗುಂಡಗೆ ಇರುವುದು. ನೈಲಾನ್ ಸಾಬೂದಾನ ಅಲ್ಲ) ರಾತ್ರಿ ಪೂರ ನೆನೆಸಿಡಿ. ಸಬ್ಬಕ್ಕಿಯ ಮೇಲೆ ಎರಡು ಇಂಚು ನೀರು ಇರುವಷ್ಟು ಹಾಕಿಡಿ.

   

ಬೆಳಿಗ್ಗೆ 100 ಗ್ರಾಂ ಹಸಿ ಮೆಣಸಿನಕಾಯಿ ತೊಳೆದು ಮಿಕ್ಸಿಯಲ್ಲಿ ಪುಡಿ ಮಾಡಿಡಿ.

ನೆಂದ ಸಬ್ಬಕ್ಕಿಗೆ ಮೆಣಸಿನಕಾಯಿ ಪೇಸ್ಟ್, 1 ಚಮಚ ಪುಡಿ ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿ 2 ವಿಷಲ್ ಕೂಗಿಸಿಡಿ. ಬೇಯಿಸಲು ದೊಡ್ಡ ಕುಕ್ಕರ್ ಬಳಸಿ. ಸಾಬೂದಾನ ಬೆಂದ ಮೇಲೆ ಎರಡರಷ್ಟು ಆಗುತ್ತದೆ.

   

ಬೆಂದ ಸಬ್ಬಕ್ಕಿಯನ್ನು ಚೆನ್ನಾಗಿ ಕಲೆಸಿ ರುಚಿ ಬೇಕಾದರೆ ನೋಡಬಹುದು. ತುಂಬಾ ಗಟ್ಟಿಯಾದರೆ ಸ್ವಲ್ಪ ನೀರು ಹಾಕಿ.ಸಬ್ಬಕ್ಕಿ ಪೂರ್ತಿಯಾಗಿ ಬೆಂದ ಮೇಲೆ ಪಾರದರ್ಶಕವಾಗಿ ಕಾಣಬೇಕು. ಬೆಳ್ಳಗಿದ್ದರೆ ಇನ್ನೂ ಬೆಂದಿಲ್ಲವೆಂದು ಅರ್ಥ. ಹಾಗಿದ್ದರೆ ಇನ್ನೂ ಸ್ವಲ್ಪ ಹೊತ್ತು ಹಾಗೆ ಒಲೆಯ ಮೇಲಿಟ್ಟು ಬೇಯಿಸಿ.

ಮಿಶ್ರಣವನ್ನು ಸೌಟಿನಿಂದ ಸುಲಭವಾಗಿ ಸುರಿಯುವ ಹದಕ್ಕೆ ಇರಬೇಕು.

   

ಪ್ಲಾಸ್ಟಿಕ್ ಶೀಟ್ ಗಳನ್ನು ತೊಳೆದು ಹರಡಿ. ಸೌಟಿನಿಂದ ಚಿಕ್ಕ ಚಿಕ್ಕದಾಗಿ ಸಂಡಿಗೆಯನ್ನು ಹಾಕಿ. ಮಧ್ಯದಲ್ಲಿ ಸ್ವಲ್ಪ ಜಾಗ ಬಿಡಿ. ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಚೆನ್ನಾಗಿ ಒಣಗಲು ಬಿಡಿ. ಒಂದು ತೆಳ್ಳನೆಯ ಸೀರೆ ಅಥವಾ ಪಂಚೆಯಿಂದ ಸಂಡಿಗೆಯನ್ನು ಮುಚ್ಚಿಟ್ಟರೆ ಧೂಳು ಬಳಸುವುದಿಲ್ಲ! ಪಕ್ಷಿಗಳು ಮುಟ್ಟುವುದಿಲ್ಲ!

ಮರುದಿನ ಎಚ್ಚರಿಕೆಯಿಂದ ಸಂಡಿಗೆಯನ್ನು ತೆಗೆದು ತಿರುವಿ ಹಾಕಿ ಮತ್ತು ಒಂದು ದಿನ ಒಣಗಲು ಬಿಡಿ.

ಹೀಗೆ ಮೂರ್ನಾಲ್ಕು ದಿನ ಚೆನ್ನಾಗಿ ಒಣಗಿಸಿದ ನಂತರ ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು!

ಚೆನ್ನಾಗಿ ಒಣಗಿಸಿದ ಸಂಡಿಗೆ ಗಾಜಿನ ಹಾಗೆ ಪಾರದರ್ಶಕವಾಗಿರಬೇಕು.

ಧನ್ಯವಾದಗಳು