ಮಂಗಳೂರು ಬೋಂಡಾ/ಮಂಗಳೂರು ಬಜ್ಜಿ/ ಗೋಲಿ ಬಜೆ ಹೀಗೆ ಕಲೆಸಿಕೊಳ್ಳುವ ರುಚಿಯಾದ, ಸುಲಭವಾಗಿ ಮಾಡಬಹುದಾದ ತಿಂಡಿಯ ರೆಸಿಪಿ ಇಲ್ಲಿದೆ!

ಸಾಧಾರಣವಾಗಿ ಎಲ್ಲರೂ ಮಂಗಳೂರು ಬೋಂಡಾ ಮೈದಾ ಹಿಟ್ಟಿನಲ್ಲಿ ಮಾಡುತ್ತಾರೆ. ನಾನು ಗೋಧಿ ಹಿಟ್ಟಿನ ಮಂಗಳೂರು ಬೋಂಡಾ ಮಾಡಿದ್ದೇನೆ. ಮೈದಾ ಹಿಟ್ಟನ್ನು ಹಾಕಿ ಮಾಡುವ ಬೋಂಡಾದಷ್ಟೇ ಚೆನ್ನಾಗಿ, ಗರಿ ಗರಿಯಾಗಿ ಇರುತ್ತದೆ!

ಮಾಡುವ ವಿಧಾನ:-

1 ಅಳತೆ ಗೋಧಿ ಹಿಟ್ಟು, 1/4 ಅಕ್ಕಿ ಹಿಟ್ಟು, 1 ಚಮಚ ಚಿರೋಟಿ ರವೆ, ಉಪ್ಪು, 1 ಟೀ ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ.

1 ಅಳತೆ ಗಟ್ಟಿಯಾದ ಹುಳಿ ಮೊಸರು ಹಾಕಿ ಚೆನ್ನಾಗಿ ಗಂಟಿಲ್ಲದ ಹಾಗೆ ಕಲೆಸಿ 2 ಗಂಟೆ ತಟ್ಟೆ ಮುಚ್ಚಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಈರುಳ್ಳಿ ಬೇಕಾದರೆ ಹಾಕಿಕೊಳ್ಳಬಹುದು.

4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

  

ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು ಸಣ್ಣಗೆ ಹೆಚ್ಚಿಡಿ.

1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ/ ತುರಿದಿಡಿ.

4 ಚಮಚ ಕಾಯಿ ತುರಿದಿಡಿ/ ಸಣ್ಣಗೆ ಹೆಚ್ಚಿಡಿ.

ಕಲೆಸಿಟ್ಟ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳು, ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ.

ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ಹಾಕಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕೈಯನ್ನು ನೀರಿನಲ್ಲಿ ಅದ್ದಿ ಪುಟ್ಟ ಪುಟ್ಟ ಉಂಡೆ ಮಾಡಿ ಬಿಸಿಯಾದ ಎಣ್ಣೆಯಲ್ಲಿ ಹಾಕಿ. ಪ್ರತಿ ಬಾರಿ ಬೋಂಡಾ ಹಾಕುವಾಗಲೂ ನೀರಿನಲ್ಲಿ ಅದ್ದಿ ಬೋಂಡಾ ಸ್ವಲ್ಪ ಗುಂಡಗೆ ಮಾಡಿ ಹಾಕಬೇಕು.

ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಕೆಂಪಗೆ ಗರಿ ಗರಿಯಾಗುವವರೆಗೆ ಕರಿದು ಹೆಚ್ಚಿನ ಎಣ್ಣೆ ತೆಗೆದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ ಚಟ್ನಿಯೊಂದಿಗೆ ಸವಿಯಿರಿ!

 

ಗೋಧಿ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದು! ಹಾಗಾಗಿ ಈ ರೆಸಿಪಿ!

ಬೋಂಡಾ ಕಲೆಸಿ 2 ಗಂಟೆಯ ನಂತರ ತುಂಬಾ ತೆಳ್ಳಗೆ ಆಗಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಮಾಡಿ.

ಗಟ್ಟಿಯಾಗಿದ್ದರೆ ಸ್ವಲ್ಪ ಮೊಸರು ಸೇರಿಸಿ ಮಾಡಬಹುದು. ಆದರೆ ನೀರು ಮಾತ್ರ ಸೇರಿಸಬಾರದು.

ಧನ್ಯವಾದಗಳು