ಉತ್ತರ ಭಾರತದ ಜನಪ್ರಿಯ ಆಹಾರ! ಎರಡೂ ಒಳ್ಳೆಯ ಕಾಂಬಿನೇಶನ್! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ!

ಜೀರಾ ರೈಸ್ ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಹೆಚ್ಚಾಗಿ ಹಾಕಿ ತೆರೆದ ಬಾಣಲೆಯಲ್ಲಿ/ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ.

1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ದೊಡ್ಡ ಚಮಚ ಜೀರಿಗೆ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ.

  

ನಂತರ ಬಾಸುಮತಿ ಅನ್ನ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಸ್ವಲ್ಪ ಹೊತ್ತು ಬಿಸಿ ಮಾಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಜೀರಾ ರೈಸ್ ಸಿದ್ಧ!

 

ದಾಲ್ ಫ್ರೈ

1 ಚಿಕ್ಕ ಲೋಟ ಹೆಸರು ಬೇಳೆ ಬೇಯಿಸಿ, ಸ್ವಲ್ಪ ಮಸೆದಿಡಿ.

1 ಈರುಳ್ಳಿ, 1 ಟೋಮೇಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ.

ನಂತರ ಹೆಚ್ಚಿದ ಟೋಮೇಟೋ, ಚಿಟಿಕೆ ಅರಿಷಿಣ, 1/2 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ.

ಬೆಂದ ಹೆಸರು ಬೇಳೆ, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

  

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿದರೆ, ಸುಲಭವಾಗಿ ಮಾಡಬಹುದಾದ, ರುಚಿಯಾದ ದಾಲ್ ಫ್ರೈ ಸಿದ್ಧ!

ಈ ದಾಲ್ ಫ್ರೈ ಚಪಾತಿ, ಅನ್ನದೊಡನೆ ಕೂಡ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು