ಬೇಸಿಗೆ ಬಂತೆಂದರೆ ಎಲ್ಲಾ ಕಡೆ ಮಾವಿನ ಕಾಯಿ, ಹಣ್ಣಿನ ಸುವಾಸನೆ ತುಂಬಿ ಹೋಗುತ್ತದೆ! ಮಾವಿನ ಕಾಯಿಯಿಂದ ಮಾಡುವ ಸುಲಭವಾದ, ರುಚಿಯಾದ, ತಿಂಗಳಾದರೂ ಕೆಡದ ಗೊಜ್ಜಿನ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಗಟ್ಟಿಯಾದ ತೋತಾಪುರಿ ಮಾವಿನ ಕಾಯಿ ಆಯ್ಕೆ ಮಾಡಿ ಕೊಳ್ಳಿ. ಗುಂಡು ಮಾವಿನಲ್ಲೂ ಮಾಡಬಹುದು. ಸ್ವಲ್ಪ ಹುಳಿ ಹೆಚ್ಚು ಇರುತ್ತದೆ! ತೋತಾಪುರಿ ಮಾವು ಹುಳಿ ಕಡಿಮೆ!

2 ಮಾವಿನ ಕಾಯಿ ತೊಳೆದು, ಒರೆಸಿ ತುರಿದಿಡಿ. ನೀರಿನಂಶ ಸ್ವಲ್ಪವೂ ಇರಬಾರದು ಈ ಗೊಜ್ಜು ಮಾಡುವಾಗ!

  

1 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಹುರಿದು ಪುಡಿ ಮಾಡಿಡಿ.

20 ರಿಂದ 25 ಒಣ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, ಪುಡಿ ಮಾಡಿಡಿ. ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು. ನಾನು ಕೇವಲ ಬ್ಯಾಡಗಿ ಮೆಣಸಿನಕಾಯಿ ಅಷ್ಟೇ ಹಾಕಿರುವುದು. ಬೇಕಾದರೆ ಗುಂಟೂರು ಮತ್ತು ಬ್ಯಾಡಗಿ ಮೆಣಸಿನಕಾಯಿ ಎರಡೂ ಸೇರಿಸಿ ಹಾಕಬಹುದು!

  

ಬಾಣಲೆಯಲ್ಲಿ 4 ಚಮಚ ಸೌಟು ಹಾಕಿ ಬಿಸಿಯಾಗಲು ಇಡಿ.( ಎಣ್ಣೆ ತುಸು ಹೆಚ್ಚೇ ಬೇಕು. ಎಣ್ಣೆಯಲ್ಲಿ ಮಾವಿನ ತುರಿ ಬೇಯಬೇಕು. ನೀರು ಹಾಕುವಂತಿಲ್ಲ) ಒಗ್ಗರಣೆಗೆ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಇಂಗು, ಅರಿಷಿಣ, 4 ಎಸಳು ಕರಿಬೇವು ಹಾಕಿ ಸ್ವಲ್ಪ ಹುರಿದು, ತುರಿದ ಮಾವಿನ ಕಾಯಿ ಹಾಕಿ ಸ್ವಲ್ಪ ಬಾಡಿಸಿ.

ನಂತರ ಮೆಣಸಿನಕಾಯಿ ಪುಡಿ, ಸಾಸಿವೆ, ಮೆಂತ್ಯ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ನೆಲ್ಲಿ ಕಾಯಿ ಗಾತ್ರದ ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಕಡಿಮೆ ಉರಿಯಲ್ಲಿ 8 ರಿಂದ 10 ನಿಮಿಷ ಬೇಯಿಸಿದರೆ ರುಚಿಯಾದ ಮಾವಿನ ಕಾಯಿ ಗೊಜ್ಜು ಸಿದ್ಧ!

ಒಲೆಯಿಂದ ಇಳಿಸಿ, ನಿಮಗೆ ಬೇಕಾಗುವಷ್ಟು ಅನ್ನದೊಂದಿಗೆ ಸ್ವಲ್ಪ ಗೊಜ್ಜು ಹಾಕಿ ಕಲೆಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಚಿತ್ರಾನ್ನ ರೆಡಿ!

  

ಉಳಿದ ಗೊಜ್ಜನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ, Fridge ನಲ್ಲಿಟ್ಟು ಬೇಕಾದಾಗ ಅನ್ನ ಮಾಡಿ ಕಲೆಸಿಕೊಳ್ಳಬಹುದು!

ಈ ಗೊಜ್ಜಿಗೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಬಾರದು. ಬೇಕಾದರೆ ಒಣ ಕೊಬ್ಬರಿ ತುರಿ ಹಾಕಿಕೊಳ್ಳಬಹುದು.

ಈ ಗೊಜ್ಜು Fridge ನಲ್ಲಿಟ್ಟರೆ ಸ್ವಲ್ಪ ದಿನಗಳ ನಂತರ ಎಣ್ಣೆ ಅಂಶ ಕಡಿಮೆ ಆಗುತ್ತದೆ! ನೀವು ಅನ್ನಕ್ಕೆ ಕಲೆಸುವಾಗ 2 ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕಡಲೇ ಬೀಜ ಹುರಿದು ಹಾಕಬಹುದು!

ಧನ್ಯವಾದಗಳು