ನಮ್ಮ ಬಸ್ಸಾರಿನ ತಮ್ಮ ಅಂತ ಹೇಳಬಹುದು. ರುಚಿಯಾಗಿ, ಸುಲಭವಾಗಿ ಮಾಡಬಹುದಾದ ಸಾರು!

ಮಾಡುವ ವಿಧಾನ:-

ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ, ಕಾಳು, ಸೊಪ್ಪು ಬೇಳೆ ಜೊತೆಗೆ ಬೇಯಿಸಿ ನೀರು ಸೋರಿ ಹಾಕಿ, ಕಟ್ಟು ತೆಗೆದಿಡಿ. ಕಟ್ಟನ್ನು ಸಾರು ಭಾಡಲು ಉಪಯೋಗಿಸಿ.

ಬೇಯಿಸಿದ್ದನ್ನು ಒಗ್ಗರಣೆ ಹಾಕಿ ಪಲ್ಯ ಮಾಡಿ.

ಖಾರಾ ಮಸಾಲೆ ರುಬ್ಬಲು:-

6 ರಿಂದ 8 ಒಣ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.

2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.

  

ಹುರಿದ ಮೆಣಸಿನಕಾಯಿ, 1 ಚಿಕ್ಕ ಚಮಚ ಕರಿ ಮೆಣಸು, 1 ಚಮಚ ಜೀರಿಗೆ, ಬೆಳ್ಳುಳ್ಳಿ, 1 ನಿಂಬೆ ಗಾತ್ರದ ಹುಣಿಸೆ ಹಣ್ಣು, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.

ಮೊದಲು ಮೆಣಸಿನಕಾಯಿ, ಮೆಣಸು ಪುಡಿ ಮಾಡಿ. ನಂತರ ಬೆಳ್ಳುಳ್ಳಿ, ಜೀರಿಗೆ ಹಾಕಿ ಒಂದು ಸುತ್ತು ರುಬ್ಬಿ, ನಂತರ ಹುಣಿಸೆ ಹಣ್ಣು, ಉಪ್ಪು ಹಾಕಿ ರುಬ್ಬಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ.

  

ಬೇಳೆ ಕಟ್ಟು ಚೆನ್ನಾಗಿ ಬಿಸಿ ಮಾಡಿ ಒಲೆಯಿಂದ ಇಳಿಸಿ. ರುಬ್ಬಿದ ಖಾರಾ ಮಸಾಲೆಯನ್ನು ನಿಮ್ಮ ರುಚಿಗೆ ತಕ್ಕಷ್ಟು ಕಟ್ಟಿಗೆ ಸೇರಿಸಿ ಚೆನ್ನಾಗಿ ಕಲೆಸಿ. ಉಪ್ಪು ಬೇಕಾದರೆ ಸ್ವಲ್ಪ ಸೇರಿಸಿ. ಈ ಖಾರಾ ಮಸಾಲೆ ಹಾಕಿದ ಮೇಲೆ ಕಟ್ಟು ಕುದಿಸಬಾರದು. ಹಸಿ ಖಾರದ ಸುವಾಸನೆ ಹಾಗೆ ಇರಬೇಕು. ತೀರಾ ಬೇಕೆನಿಸಿದರೆ ಮಾತ್ರ ಸ್ವಲ್ಪ ಬಿಸಿ ಮಾಡಿ. ಕುದಿಸಬೇಡಿ.

ಈ ಉಪ್ಪು ಸಾರು ರಾಗಿ ಮುದ್ದೆ, ಅನ್ನದೊಡನೆ ತುಂಬಾ ಚೆನ್ನಾಗಿರುತ್ತದೆ!

  

ಈ ಖಾರ ಮಸಾಲೆ ಈ ಅಳತೆಯಲ್ಲಿ ಮಾಡಿದರೆ ನಾಲ್ಕು ಜನ ಊಟಕ್ಕೆ ಸಾಕಾಗುವುದು. ನಿಮಗೆ ಬೇಕಾಗುವಷ್ಟು ಹೆಚ್ಚು ಅಥವಾ ಕಡಿಮೆ ಸಾಮಗ್ರಿಗಳನ್ನು ಹಾಕಿಮಾಡಬಹುದು.

ಈ ಮಸಾಲೆ Fridge ನಲ್ಲಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 15 ದಿನವಾದರೂ ಕೆಡುವುದಿಲ್ಲ.

ನೀವು ಬೇಕಾದರೆ ಇದನ್ನು ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಹಾಕಿ ಕಲೆಸಿ ಕೊಂಡು ಹಾಗೆಯೇ ತಿನ್ನಬಹುದು!

ಅಥವಾ ದೋಸೆ, ಇಡ್ಲಿಯ ಜೊತೆಗೆ ಚಟ್ನಿಯ ಹಾಗೆ ಹಾಕಿ ಕೊಳ್ಳಬಹುದು!

ಹುಳಿ ಬೇಕಾದರೆ ಊಟ ಮಾಡುವಾಗ ನಿಂಬೆ ರಸ ಹಾಕಿಕೊಳ್ಳಬಹುದು!

ಧನ್ಯವಾದಗಳು