ಸಂಜೆ ವೇಳೆಗೆ ಎಲ್ಲರೂ ಇಷ್ಟಪಡುವ ತಿಂಡಿ! ಸಾಧಾರಣವಾಗಿ ಆಲೂಗೆಡ್ಡೆ ಮಿಶ್ರಣ ತುಂಬಿ ಮಾಡುವ ಸಮೋಸಾದ ವಿಭಿನ್ನವಾದ ರೂಪ ಈ ಪನ್ನೀರ್ ಸಮೋಸಾ!

ಮಾಡುವ ವಿಧಾನ:-

100 ಗ್ರಾಂ ಬಟಾಣಿ ಬೇಯಿಸಿ ಸ್ವಲ್ಪ ಕಿವುಚಿಡಿ.

100 ಗ್ರಾಂ ಪನ್ನೀರ್ ತುರಿದಿಡಿ.

  

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ ಮಸಾಲ, ಬೆಂದ ಬಟಾಣಿ ಹಾಕಿ ಸ್ವಲ್ಪ ಹುರಿದು, ಉಪ್ಪು, ತುರಿದ ಪನ್ನೀರ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಡಿ.

  

1/2 ಕಪ್ ಚಿರೋಟಿ ರವೆ, 1/2 ಕಪ್ ಮೈದಾ, ಚಿಟಿಕೆ ಉಪ್ಪು, 1/2 ಚಮಚ ಓಂ ಕಾಳು( ಅಜವಾನ ), 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.

  

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಉಂಡೆಗಳನ್ನು ಚಪಾತಿಯ ಅಳತೆಗೆ ತೆಳ್ಳಗೆ ಲಟ್ಟಿಸಿ. ಮಧ್ಯದಲ್ಲಿ ಕತ್ತರಿಸಿ ಒಂದೊಂದು ಭಾಗವನ್ನು ಕೋನ್ ಆಕಾರದಲ್ಲಿ ಮಾಡಿ, ಪನ್ನೀರ್ ಮಿಶ್ರಣ ತುಂಬಿ. ಅಂಚುಗಳ ಸುತ್ತಲೂ ಸ್ವಲ್ಪ ನೀರು ಸವರಿ ಅಂಟಿಸಿ ಕೋನ್ ಆಕಾರ ಮಾಡಿ, ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಆಗುವವರೆಗೆ ಬೇಯಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಪನ್ನೀರ್ ಸಮೋಸಾ ರೆಡಿ!

ಪುದೀನಾ ಚಟ್ನಿ ಮಾಡುವ ವಿಧಾನ :-

4 ಚಮಚ ಪುದೀನಾ ಸೊಪ್ಪು, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ ಉಪ್ಪು, ಸ್ವಲ್ಪ ನಿಂಬೆ ರಸ ಹಾಕಿ ರುಬ್ಬಿದರೆ ಪುದೀನಾ ಚಟ್ನಿ ಸಿದ್ಧ!

ಧನ್ಯವಾದಗಳು