ಪುಳಿಯೋಗರೆ ಎಲ್ಲರ ಮೆಚ್ಚಿನ ತಿಂಡಿ! ಅದರ ಗೊಜ್ಜು ಮಾಡಿಟ್ಟರೆ ಯಾವಾಗ ಬೇಕಾದರೂ ಅನ್ನ ಮಾಡಿ ಕಲೆಸಿ ಕೊಳ್ಳಬಹುದು!

ಆದರೆ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ ಸ್ವಲ್ಪ ಕಷ್ಟದ, ನಿಧಾನವಾದ ಕೆಲಸವೇ! ಹೀಗೆ ಮಾಡಿ ನೋಡಿ! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ:-

1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ, ಕಿವುಚಿ ರಸ ತೆಗೆದಿಡಿ.

ಕಡಲೇ ಬೇಳೆ – 1 ಟೇಬಲ್ ಚಮಚ
ಧನಿಯಾ – 1 ಟೇಬಲ್ ಚಮಚ
ಬಿಳಿ ಎಳ್ಳು – 1 ಟೇಬಲ್ ಚಮಚ
ಗುರೆಳ್ಳು / ಹುಚ್ಚೆಳ್ಳು – 1/2 ಟೇಬಲ್ ಚಮಚ
ಸಾಸಿವೆ – 1 ಟೀ ಚಮಚ
ಜೀರಿಗೆ – 1 ಟೀ ಚಮಚ
ಮೆಂತ್ಯ – 1/2 ಟೀ ಚಮಚ
ಒಣಗಿದ ಮೆಣಸಿನಕಾಯಿ – ಬ್ಯಾಡಗಿ, ಕೆಂಪು ಎರಡೂ ಸೇರಿ 18 ರಿಂದ 20
ಒಣ ಕೊಬ್ಬರಿ – 1 ಟೇಬಲ್ ಚಮಚ

ಮೇಲೆ ಹೇಳಿರುವ ಅಷ್ಟು ಸಾಮಾಗ್ರಿಗಳನ್ನು ಎಣ್ಣೆ ಹಾಕದೆ ಹುರಿದಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದು ಇತರ ಸಾಮಗ್ರಿಗಳೊಂದಿಗೆ ಸೇರಿಸಿ ಪುಡಿ ಮಾಡಿಡಿ.

   

ಬಾಣಲೆಯಲ್ಲಿ 2 ಸೌಟು ಎಣ್ಣೆ ಹಾಕಿ. ( ಎಣ್ಣೆ ತುಸು ಹೆಚ್ಚೇ ಬೇಕು ) ಕಾದ ಮೇಲೆ ಸಾಸಿವೆ, ಇಂಗು, ಕರಿಬೇವು, ಚಿಟಿಕೆ ಅರಿಷಿಣ, ಹುಣಿಸೆ ರಸ, ಉಪ್ಪು, ಮಸಾಲೆ ಪುಡಿ, 1 ನೆಲ್ಲಿ ಕಾಯಿ ಗಾತ್ರದ ಬೆಲ್ಲ ಹಾಕಿ ಚೆನ್ನಾಗಿ ಕಲೆಸಿ.

ಕಡಿಮೆ ಉರಿಯಲ್ಲಿ ಎಣ್ಣೆ ಗೊಜ್ಜಿನಿಂದ ಹೊರ ಬರುವವರೆಗೆ ಕುದಿಸಿ ಒಲೆಯಿಂದ ಇಳಿಸಿ.

   

ನಿಮಗೆ ಬೇಕಾಗುವಷ್ಟು ಗೊಜ್ಜು ಬೇರೆ ಬಟ್ಟಲಿನಲ್ಲಿ ಹಾಕಿಕೊಂಡು ಮಾಡಿಟ್ಟ ಉದುರುದುರಾದ ಅನ್ನ, ಕರಿದ ಕಡಲೇ ಬೀಜ ಹಾಕಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಇನ್ಸ್ಟೆಂಟ್ ಪುಳಿಯೋಗರೆ ಸಿದ್ಧ!

ಈ ಅಳತೆಯಲ್ಲಿ ಮಾಡಿದ ಗೊಜ್ಜು ಸುಮಾರು 1/2 ಕೇಜಿ ಅಕ್ಕಿಯಿಂದ ಮಾಡಿದ ಅನ್ನಕ್ಕೆ ಕಲೆಸಲು ಸಾಕಾಗುವುದು!

ಗೊಜ್ಜು Fridge ನಲ್ಲಿಟ್ಟರೆ ತಿಂಗಳಾದರೂ ಕೆಡುವುದಿಲ್ಲ!

ಧನ್ಯವಾದಗಳು