JOLADA ROTTI ಜೋಳದ ರೊಟ್ಟಿ
ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು!
ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!?
ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
ನಂತರ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ. 1/2 ಲೋಟದಷ್ಟು ಹಸಿ ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ.
ಆದಷ್ಟೂ ಚೆನ್ನಾಗಿ ನಾದಿ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ. ಸ್ವಲ್ಪ ಜೋಳದ ಹಿಟ್ಟು ಉದುರಿಸಿ ತೆಳ್ಳಗೆ ಲಟ್ಟಿಸಿ.
ಕಾದ ಕಾವಲಿಯ ಮೇಲೆ ಹಾಕಿ ಮೇಲೆ ಭಾಗಕ್ಕೆ ಸ್ವಲ್ಪ ನೀರು ಸವರಿ. ಗುಳ್ಳೆಗಳು ಬರಲು ಪ್ರಾರಂಭವಾದಾಗ ರೊಟ್ಟಿಯನ್ನು ತಿರುವಿ ಹಾಕಿ.
ಒಂದು ಬಟ್ಟೆಯಿಂದ ರೊಟ್ಟಿಯನ್ನು ಒತ್ತಿದರೆ ಚೆನ್ನಾಗಿ ಉಬ್ಬುತ್ತದೆ.
ಎರಡೂ ಕಡೆ ಬೇಯಿಸಿ, ನಿಮಗಿಷ್ಟವಾದ Side Dish ನಮ ಸವಿಯಿರಿ.
ಜೋಳದ ರೊಟ್ಟಿಗೆ ಎಣ್ಣೆ ಮತ್ತು ಉಪ್ಪು ಹಾಕಲೇ ಬಾರದು. ಸಾಧ್ಯವಾದಷ್ಟೂ ನೀವೇ ಬೀಸಿಸುವ ಹಿಟ್ಟು ಹೊಸದಾಗಿದ್ದಾಗಲೇ ರೊಟ್ಟಿ ಮಾಡಬೇಕು. 15 ರಿಂದ 20 ದಿನಗಳೊಳಗೆ ಖಾಲಿ ಮಾಡಬೇಕು.
ಮೊಳಕೆ ಹೆಸರು ಕಾಳಿನ ಗೊಜ್ಜು
ಮಾಡುವ ವಿಧಾನ:-
1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.
ಹೆಸರು ಕಾಳು ಬೇಯಿಸಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಹೆಚ್ಚಿದ ಈರುಳ್ಳಿ, ಟೋಮೇಟೋ, ಅರಿಷಿಣ ಹಾಕಿ ಬಾಡಿಸಿ, ನಂತರ 2 ಚಮಚ ಬೆಳ್ಳುಳ್ಳಿ ಪುಡಿ, 1 ಚಮಚ ಹುಣಿಸೆ ರಸ, ಚೂರು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿದರೆ ಹೆಸರು ಕಾಳು ಗೊಜ್ಜು ಸಿದ್ಧ!
ಬೆಳ್ಳುಳ್ಳಿ ಪುಡಿ
2 ಬೆಳ್ಳುಳ್ಳಿ, 50 ಗ್ರಾಂ ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, 4 ಚಮಚ ತುರಿದ ಒಣ ಕೊಬ್ಬರಿಯೊಂದಿಗೆ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ, ಯಾವಾಗ ಬೇಕಾದರೂ ಉಪಯೋಗಿಸಬಹುದು!
ಧನ್ಯವಾದಗಳು