ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಷಯಗಳು!
ಜನವರಿ 26 ನಮ್ಮ ಭಾರತ ಗಣ ರಾಜ್ಯೋತ್ಸವದ ದಿನ! ನಮ್ಮ ಭಾರತದ ಹೆಮ್ಮೆಯ ತ್ರಿರಂಗದ ಧ್ವಜದ, ಮೂರು ಬಣ್ಣಗಳನ್ನು ಒಂದೇ ತಿಂಡಿಯಲ್ಲಿ ತರುವ ಸಣ್ಣ ಪ್ರಯತ್ನ ನಾನಿಲ್ಲಿ ಮಾಡಿದ್ದೇನೆ.
ಈ ಪ್ರಯತ್ನ ನಾನು ನಮ್ಮ ದೇಶದ ಮೇಲಿಟ್ಟಿರುವ ದೇಶಾಭಿಮಾನದಿಂದ! ಬೇರೆ ಯಾವುದೇ ದುರುದ್ದೇಶ ಇಲ್ಲ!
ತ್ರಿರಂಗಿ ಪೂರಿ ಮಾಡುವ ವಿಧಾನ:-
ಕೇಸರಿ ಬಣ್ಣದ ಹಿಟ್ಟಿಗಾಗಿ:-
2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು ನುಣ್ಣಗೆ ರುಬ್ಬಿ.
ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, 1/2 ಚಮಚ ಖಾರದ ಪುಡಿ, ಚಿಟಿಕೆ ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ.
ರುಬ್ಬಿದ ಕ್ಯಾರೆಟ್ ಮಿಶ್ರಣ ಹಾಕಿ ನೀರು ಸೇರಿಸದೆ ಗಟ್ಟಿಯಾಗಿ ಹಿಟ್ಟು ಕಲೆಸಿಡಿ.
ಬಿಳಿ ಬಣ್ಣದ ಹಿಟ್ಟಿಗಾಗಿ 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದಿಡಿ.
ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, ಚಿಟಿಕೆ ಉಪ್ಪು, 1/2 ಚಮಚ ಬಿಳಿ/ ಕರಿ ಮೆಣಸಿನ ಪುಡಿ, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ.
ಆಲೂಗೆಡ್ಡೆ ತುರಿ ಸೇರಿಸಿ, ನೀರು ಹಾಕದೆ ಹಿಟ್ಟು ಗಟ್ಟಿಯಾಗಿ ಕಲೆಸಿಡಿ.
ಹಸಿರು ಬಣ್ಣದ ಹಿಟ್ಟಿಗಾಗಿ:-
2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು, 2 ಹಸಿ ಮೆಣಸಿನ ಕಾಯಿ ಜೊತೆಗೆ ಹಾಕಿ, ಬಾಣಲೆಯಲ್ಲಿ ಹಾಕಿ ಬೇಯಿಸಿಡಿ. ನೀರು ಸೋರಿ ಹಾಕಿ, ನುಣ್ಣಗೆ ರುಬ್ಬಿಡಿ.
ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, ಚಿಟಿಕೆ ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ.
ನೀರು ಹಾಕದೆ ಪಾಲಾಕ್ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ ಗಟ್ಟಿಯಾಗಿ ಹಿಟ್ಟು ಕಲೆಸಿಡಿ.
ಕಲೆಸಿದ ಹಿಟ್ಟನ್ನು 30 ನಿಮಿಷ ಮುಚ್ಚಿಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ.
ಮೂರು ಬಣ್ಣದ ಹಿಟ್ಟಿನಿಂದ ಒಂದೊಂದು ಚೆಂಡಿನ ಗಾತ್ರದ ಹಿಟ್ಟು ತೆಗೆದು ಕೊಂಡು, ಉದ್ದಕ್ಕೆ, ಬೇರೆ ಬೇರೆಯಾಗಿ ನಾದಿ.
ಮೂರು ಬಣ್ಣದ ಹಿಟ್ಟುಗಳನ್ನು ಸೇರಿಸಿ ಜಡೆಯಂತೆ ಹೆಣೆಯೆರಿ ( ಚಿತ್ರ ನೋಡಿ)
ಹೆಣೆದ ಜಡೆಯ ಭಾಗದಿಂದ ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಉಂಡೆಗಳನ್ನು ಮಾಡಿ ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದು ಚಟ್ನಿ, ಪಲ್ಯದ ಜೊತೆಗೆ ಸವಿಯಿರಿ!
ತ್ರಿರಂಗಿ ಚಪಾತಿ
ಮೇಲೆ ಹೇಳಿದ ರೀತಿಯಲ್ಲಿ ಚಿರೋಟಿ ರವೆ ಸೇರಿಸದೆ ಕೇವಲ ಗೋಧಿ ಹಿಟ್ಟು ಮಾತ್ರ ಹಾಕಿ, ಹಿಟ್ಟು ಕಲೆಸಿ, ಇದೇ ರೀತಿಯಲ್ಲಿ ಚಪಾತಿ ಮಾಡಬಹುದು!
ಧನ್ಯವಾದಗಳು
Leave A Comment