ONION UTHAPPAM ಆನಿಯನ್ ಊತಪ್ಪಂ
ಎಲ್ಲರ ಮೆಚ್ಚಿನ ತಿಂಡಿ! ಸುಲಭವಾಗಿ ಮಾಡಬಹುದಾದ ರೆಸಿಪಿ!
ಮಾಡುವ ವಿಧಾನ:-
ದೋಸೆ ಅಕ್ಕಿ – 3 ಕಪ್
ಉದ್ದಿನ ಬೇಳೆ – 1 ಕಪ್
ಮೆಂತ್ಯ – 1/2 ಟೀ ಚಮಚ ( ಬೇಕಾದರೆ )
ಗಟ್ಟಿ ಅವಲಕ್ಕಿ – 2 ಚಮಚ
4 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.
ಬೆಳಿಗ್ಗೆ ಚಿಟಿಕೆ ಸಕ್ಕರೆ ಸೇರಿಸಿ ಕಲೆಸಿಡಿ.
4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀ, ಹೆಚ್ಚಿದ ಈರುಳ್ಳಿ, ಉಪ್ಪು ಹಾಕಿ ಸ್ವಲ್ಪ ಹುರಿದು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಹಸಿ ಈರುಳ್ಳಿಯನ್ನೇ ಊತಪ್ಪಂ ಮಾಡಲು ಹಾಕುವುದು. ಈರುಳ್ಳಿ ಸ್ವಲ್ಪ ಹುರಿದು ಹಾಕಿದರೆ ರುಚಿ ಇನ್ನೂ ಚೆನ್ನಾಗಿರುತ್ತದೆ! ಬೇಕಾದರೆ ಹೆಚ್ಚಿದ ಟೊಮೆಟೊ, ತುರಿದ ಕ್ಯಾರೆಟ್ ಸ್ವಲ್ಪ ಸೇರಿಸಿಕೊಳ್ಳಬಹುದು!
ಕಾವಲಿ ಬಿಸಿಯಾಗಲು ಇಡಿ. ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಬಟ್ಟೆ ಅಥವಾ ಕಿಚನ್ ಟವೆಲ್ ನಿಂದ ಕಾವಲಿಯನ್ನು ಒರೆಸಿ.
ಒಂದು ಸೌಟಿನಷ್ಟು ಹಿಟ್ಟು ತೆಗೆದು ಕೊಂಡು ಸ್ವಲ್ಪ ದಪ್ಪಗೆ ದೋಸೆ ಹರಡಿ ತಕ್ಷಣ ಈರುಳ್ಳಿ ಮಿಶ್ರಣವನ್ನು ಮೇಲೆ ಉದುರಿಸಿ, ಲಘುವಾಗಿ ಒತ್ತಿ.
ಸ್ವಲ್ಪ ಎಣ್ಣೆ ಸುತ್ತಲೂ ಹಾಕಿ ಉರಿ ಕಡಿಮೆ ಮಾಡಿ ತಟ್ಟೆ ಮುಚ್ಚಿ ಬೇಯಿಸಿ.
ನಂತರ ಎಚ್ಚರಿಕೆಯಿಂದ ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಆನಿಯನ್ ಊತಪ್ಪಂ ಸಿದ್ಧ!
ಮುಂದಿನ ದೋಸೆ ಹಾಕುವಾಗ ಕಾವಲಿಯನ್ನು ಒಮ್ಮೆ ಒರೆಸಿ ದೋಸೆ ಮಾಡಬೇಕು.
ಸಾಮಾನ್ಯವಾಗಿ ನಾನು ಸ್ವಲ್ಪ ಹುಳಿ ಬಂದ ದೋಸೆ ಹಿಟ್ಟಿನಲ್ಲಿ ಈ ದೋಸೆ ಮಾಡುವುದು. ಅಂದರೆ ರುಬ್ಬಿದ ಮೊದಲನೇ ದಿವಸ ಮಸಾಲ ದೋಸೆ ಮಾಡಿ ಮರುದಿನ ಉಳಿದ ಹಿಟ್ಟಿನಿಂದ ಈ ತರಹ ಮಾಡುವುದು!
ಟೋಮೇಟೋ ಚಟ್ನಿ
ಕಾಯಿ ಚಟ್ನಿ ಯಾವಾಗಲೂ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ!
ಮಾಡುವ ವಿಧಾನ:-
4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.
1 ಚಮಚ ಹುಣಿಸೆ ರಸ ತೆಗೆದಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ ಹೆಚ್ಚಿದ ಟೋಮೇಟೋ, ಉಪ್ಪು ಹಾಕಿ ಸ್ವಲ್ಪಹುರಿದುಕೊಳ್ಳಿ.
ತಣ್ಣಗಾದ ನಂತರ ಹುಣಿಸೆ ರಸ, ಮೆಣಸಿನಕಾಯಿ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿ. ನೀರು ಹಾಕುವ ಅಗತ್ಯವಿದೆ. ಟೋಮೇಟೋದಲ್ಲಿರುವ ನೀರಿನಂಶವೇ ಸಾಕು.
ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಚಿಟಿಕೆ ಇಂಗು ಹಾಕಿ ಟೋಮೇಟೋ ಚಟ್ನಿಗೆ ಸೇರಿಸಿದರೆ, ಬಾಯಲ್ಲಿ ನೀರೂರಿಸುವ ಟೋಮೇಟೋ ಚಟ್ನಿ ಸಿದ್ಧ!
ಈ ಚಟ್ನಿ ದೋಸೆ, ಇಡ್ಲಿ, ಚಪಾತಿ, ಅನ್ನದೊಡನೆ ಕೂಡ ತುಂಬಾ ಚೆನ್ನಾಗಿರುತ್ತದೆ!
ಧನ್ಯವಾದಗಳು