ಹೆಸರೇ ಹೇಳುವಂತೆ ಮಲೈ ಅಂದರೆ ತಾಜಾ ಕೆನೆ ಹಾಕಿ ಮಾಡುವ ಗ್ರೇವಿ! ರುಚಿಕರ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಸಾಧಾರಣವಾಗಿ ಗ್ರೇವಿಗಳಿಗೆ ಬೆಳ್ಳುಳ್ಳಿ, ಈರುಳ್ಳಿ ಹಾಕಿಯೇ ಮಾಡುವುದು! ಆದರೆ ಅದನ್ನು ಹಾಕದೆ ರುಚಿಯಾದ ಗ್ರೇವಿ ಮಾಡುವ ವಿಧಾನ ನೋಡೋಣವೇ!?

ಮಾಡುವ ವಿಧಾನ :-

ಕೊಫ್ತಾ ಮಾಡಲು:-

ತಲಾ 50 ಗ್ರಾಂ ಬೀನ್ಸ್, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ ಸಣ್ಣಗೆ ಹೆಚ್ಚಿ ಹಬೆಯಲ್ಲಿ Half boil ಮಾಡಿಡಿ.

ಬೆಂದ ತರಕಾರಿಗಳನ್ನು ಸ್ವಲ್ಪ ಹಿಸುಕಿ, 4 ಚಮಚ ಕಾರ್ನ್ ಫ್ಲೋರ್, ಉಪ್ಪು, 1/2 ಚಮಚ ಖಾರದ ಪುಡಿ ಹಾಕಿ ಚೆನ್ನಾಗಿ ಕಲೆಸಿ, (ನೀರು ಸೇರಿಸಬೇಡಿ. ತರಕಾರಿಯಲ್ಲಿರುವ ನೀರಿನ ಅಂಶವೇ ಸಾಕು)ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬಿಸಿ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದಿಡಿ.

  

 

ಗ್ರೇವಿ ಮಾಡಲು :-

1 ಟೇಬಲ್ ಚಮಚ ಗಸಗಸೆ, 12 ಗೋಡಂಬಿ ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ.

4 ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದಿಡಿ.

ಮೊದಲು ಗಸಗಸೆ, ಗೋಡಂಬಿ ನುಣ್ಣಗೆ ರುಬ್ಬಿ. ನಂತರ ಸಿಪ್ಪೆ ತೆಗೆದ ಟೋಮೇಟೋ ಹಾಕಿ ರುಬ್ಬಿಡಿ.

  

ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ, 1/4 ಚಮಚ ಜೀರಿಗೆ, ಚಿಟಿಕೆ ಅರಿಷಿಣ, ರುಬ್ಬಿದ ಮಿಶ್ರಣ, 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ.

  

ಕೊನೆಯಲ್ಲಿ 4 ಚಮಚ ಫ್ರೆಶ್ ಕ್ರೀಮ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ.

ಬಟ್ಟಲಿನಲ್ಲಿ ಕರಿದ ಕೊಫ್ತಾಗಳನ್ನು ಜೋಡಿಸಿಡಿ. ಮೇಲೆ ಬಿಸಿಯಾದ ಗ್ರೇವಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮತ್ತೊಂದು ಚಮಚ ತಾಜಾ ಕೆನೆ, ಹುರಿದ ಗೋಡಂಬಿ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಲೈ ಕೊಫ್ತಾ ಸಿದ್ಧ!

ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಸೂಪರ್ ಕಾಂಬಿನೇಶನ್!

ಬೆಳ್ಳುಳ್ಳಿ, ಈರುಳ್ಳಿ ಹಾಕದಿದ್ದರೂ ರುಚಿ ಅದ್ಭುತವಾಗಿರುತ್ತೆ! ಹೋಟೆಲ್ ಗಳಲ್ಲಿ ಇದನ್ನು ಜೈನ್ ಗ್ರೇವಿ ಅಂತ ಕರೆಯುತ್ತಾರೆ.

ನಿಮಗೆ ಫ್ರೆಶ್ ಕ್ರೀಮ್ ಸಿಗದಿದ್ದರೆ ಮನೆಯಲ್ಲಿರುವ ಹಾಲಿನಿಂದ ಫ್ರೆಶ್ ಕ್ರೀಮ್ ಮಾಡಬಹುದು.

ಪ್ರತಿದಿನ ಹಾಲು ಕಾಯಿಸಿದ ನಂತರ ಸ್ವಲ್ಪ ಬೆಚ್ಚಗಿರುವ ಹಾಲಿನ ಬಟ್ಟಲನ್ನು ತಟ್ಟೆ ಮುಚ್ಚದೆ Fridge ನಲ್ಲಿಡಿ. ಸ್ವಲ್ಪ ಸಮಯದ ನಂತರ ಹಾಲು ಗಟ್ಟಿಯಾಗಿ ಕೆನೆ ಕಟ್ಟುತ್ತದೆ. ಈ ಕೆನೆಯನ್ನು ತೆಗೆದು ಒಂದು ಡಬ್ಬದಲ್ಲಿ ಹಾಕಿ Fridge ನಲ್ಲಿಡಿ.

ಪ್ರತಿ ದಿನ ಹೀಗೆ ಕೆನೆ ಸಂಗ್ರಹಿಸಿ ನಿಮಗೆ ಫ್ರೆಶ್ ಕ್ರೀಮ್ ಬೇಕಾದಾಗ ಕೆಲವು ಚಮಚ ಹಾಲು ಸೇರಿಸಿ ಸ್ವಲ್ಪ ಕಡೆದರೆ ತಾಜಾ ಕೆನೆ ಸಿದ್ಧ!

ಈರುಳ್ಳಿ, ಬೆಳ್ಳುಳ್ಳಿ ಇಷ್ಟವಾಗುವವರು ಒಗ್ಗರಣೆಗೆ ಸಣ್ಣಗೆ ಹೆಚ್ಚಿದ 1 ಚಿಕ್ಕ ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್ 1 ಚಮಚ ಹಾಕಬಹುದು!

ಧನ್ಯವಾದಗಳು