HESARU BELE KODUBALE ಹೆಸರು ಕೋಡುಬಳೆ
ತೆಲುಗಿನಲ್ಲಿ ಪೆಸಲು ಕಡಿಯಲು ಎಂದು ಕರೆಯುವ ಈ ತಿಂಡಿ ಆಂಧ್ರ ಪ್ರದೇಶದ ಸಾಂಪ್ರಾದಾಯಕ ತಿಂಡಿ! ಕನ್ನಡದಲ್ಲಿ ಹೆಸರು ಕೋಡುಬಳೆ ಅಂತ ನಾನಿಟ್ಟ ಹೆಸರು! ಕೋಡುಬಳೆ ಎಂದೊಡನೆ ಸಾಧಾರಣ ಕೋಡುಬಳೆಯ ಹಾಗೆ ಗರಿ ಗರಿಯಾಗಿರುತ್ತದೆ, ವಾರವಾದರೂ ಚೆನ್ನಾಗಿರುತ್ತದೆ ಅಂತ ಅಂದುಕೊಳ್ಳಬೇಡಿ! ಆಗ ಮಾಡಿ ಆಗಲೇ ತಿನ್ನುವುದು! ಬಜ್ಜಿ, ಬೋಂಡಾ, ವಡೆಯ ಹಾಗೆ!
ಮಾಡುವ ವಿಧಾನ:-
ಹೆಸರು ಬೇಳೆ – 3 ಕಪ್
ಉದ್ದಿನ ಬೇಳೆ- 1/2 ಕಪ್
ಅಕ್ಕಿ – 1/2 ಕಪ್
ಈ ಮೂರನ್ನು ಒಟ್ಟಿಗೆ 4 ಗಂಟೆ ನೆನೆಸಿಡಿ. 1 ಮಾಗಿದ ಪಚ್ಚ ಬಾಳೆ ಹಣ್ಣು ಸಿಪ್ಪೆ ತೆಗೆದು ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಆದಷ್ಟೂ ನುಣ್ಣಗೆ ರುಬ್ಬಿ.
ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ.
ರುಬ್ಬಿದ ಮಿಶ್ರಣಕ್ಕೆ ಚಿಟಿಕೆ ಉಪ್ಪು ಸೇರಿಸಿ ಕಲೆಸಿ, ಒಂದು ಸೌಟಿನಷ್ಟು ಹಿಟ್ಟು ತೆಗೆದು ಕೊಂಡು ಕೋಡುಬಳೆಯ ಹಾಗೆ ಗುಂಡಾಗಿ ಹಾಕಿ ಎರಡೂ ಕೊನೆಗಳು ಸೇರುವಂತೆ ಹಿಟ್ಟು ಹಾಕಿ.
ಎರಡೂ ಕಡೆ ಗರಿ ಗರಿಯಾಗಿ ಆಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ, ತೆಗೆದು ಚಟ್ನಿ, ಪಾಯಸದೊಂದಿಗೆ ಸವಿಯಿರಿ!
ಕಾದ ಎಣ್ಣೆಯಲ್ಲಿ ಸೌಟಿನಿಂದ ಗುಂಡಗೆ ಹಿಟ್ಟು ಹಾಕುವುದು ಸ್ವಲ್ಪ ಕಷ್ಟವೇ! ಅಭ್ಯಾಸ ಆದರೆ ಚೆನ್ನಾಗಿ ಬರುತ್ತದೆ!
ಕೆಲವರು ಗುಂಡಗಿರುವ ಕಲ್ಲು, ಕಬ್ಬಿಣದ ಬೇರಿಂಗ್ ಇಟ್ಟು ಅದರ ಸುತ್ತಲೂ ಕೋಡುಬಳೆ ಹಾಕುತ್ತಾರೆ.
ನಾನು ನೇರವಾಗಿ ಹಾಕಿ ಮಾಡಿದ್ದೇನೆ!
ಧನ್ಯವಾದಗಳು