ಮುಸುಕಿದ ಜೋಳದಲ್ಲಿ ಆರೋಗ್ಯಕರವಾದ ಅಂಶಗಳು ತುಂಬಾ ಇವೆ. ನಾರಿನಂಶ ಹೇರಳವಾಗಿದ್ದು, ಸಕ್ಕರೆಯ ಅಂಶ ತುಂಬಾ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ತಿನ್ನಬಹುದು!

ಇಂತಹ ಮುಸುಕಿದ ಜೋಳದ ಹಿಟ್ಟಿಅಂಇಂದ ರುಚಿಯಾದ ರೊಟ್ಟಿ ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ:-

1 ಚಿಕ್ಕ ಸೌತೇ ಕಾಯಿ, 1 ಕ್ಯಾರೆಟ್, 1 ಕ್ಯಾಪ್ಸಿಕಮ್, 1 ಈರುಳ್ಳಿ ತುರಿದಿಡಿ.

2 ಚಮಚ ಕಾಯಿ ತುರಿದಿಡಿ.

2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

1 ಕಟ್ಟು ಮೆಂತ್ಯ ಸೊಪ್ಪು, 1/2 ಕಟ್ಟು ಕೊತ್ತಂಬರಿ ಸೊಪ್ಪು, 4 ಎಸಳು ಕರಿಬೇವು ಸಣ್ಣಗೆ ಹೆಚ್ಚಿಡಿ.

  

ಬಟ್ಟಲಿನಲ್ಲಿ ಎಲ್ಲಾ ತರಕಾರಿ, ಸೊಪ್ಪುಗಳು, ಕಾಯಿ ತುರಿ, ಉಪ್ಪು, 1 ಚಮಚ ಎಣ್ಣೆ, 1 ಚಮಚ ಜೀರಿಗೆ, ಚಿಟಿಕೆ ಇಂಗು ಹಾಕಿ ಚೆನ್ನಾಗಿ ಕಲೆಸಿ.

ಈ ಮಿಶ್ರಣಕ್ಕೆ ಹಿಡಿಸುವಷ್ಟು ಜೋಳದ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು ಹಾಕಿ ರೊಟ್ಟಿ ಹಿಟ್ಟು ಕಲೆಸಿಡಿ. ನೀರು ಹಾಕಲೇ ಬಾರದು. ತರಕಾರಿ, ಸೊಪ್ಪಿನಲ್ಲಿರುವ ನೀರಿನಂಶವೇ ಸಾಕು!

ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಸವರಿ ಚಿಕ್ಕ ಉಂಡೆ ತೆಗೆದುಕೊಂಡು ತೆಳ್ಳಗೆ ರೊಟ್ಟಿ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

   

ನಂತರ ತಿರುವಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆಯೂ ಬೇಯಿಸಿ, ಚಟ್ನಿಯೊಂದಿಗೆ ಬಿಸಿಯಾಗಿ ಸವಿಯಿರಿ!

ತರಕಾರಿಗಳು, ಸೊಪ್ಪು ಹೆಚ್ಚು ಹಾಕಿರುವುದರಿಂದ ಎರಡು ರೊಟ್ಟಿ ತಿಂದರೆ ಹೊಟ್ಟೆ ತುಂಬಿ ಹೋಗುತ್ತದೆ!

ಧನ್ಯವಾದಗಳು