” ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ” ಎಂಬ ಗಾದೆಯಂತೆ ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಬಾಳೆ ಹಣ್ಣು, ಕಬ್ಬಿನ ತುಂಡನ್ನು ಸಂಬಂಧಿಕರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ವಾಡಿಕೆ!

ಈ ಬಾರಿ ಸಿಹಿ ಎಳ್ಳಿನೊಂದಿಗೆ ನೀವೇಕೆ ” ಖಾರಾ ಎಳ್ಳು ” ಕೂಡ ಹಂಚಬಾರದು!?

ಏನು ಖಾರಾ ಎಳ್ಳಾ ಅಂತ ಆಶ್ಚರ್ಯ ಆಯ್ತಾ!? ಹೌದು ಖಾರಾ ಎಳ್ಳು! ಇದು ನನ್ನ ನಾದಿನಿ ಗೋದಾ ರೆಸಿಪಿ! ಹೆಚ್ಚು ಜನರಿಗೆ ಈ ವಿಧಾನ ಗೊತ್ತಿಲ್ಲದೆ ಇರಬಹುದು! ಮಾಡಿ ನೋಡಿ! ಖಂಡಿತಾ ಮನೆ ಮಂದಿಯೆಲ್ಲಾ ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ:-

1 ಲೋಟ ಕಡಲೇ ಬೇಳೆ, 1 ಲೋಟ ಹೆಸರು ಬೇಳೆ ತೊಳೆದು ಬೇರೆ ಬೇರೆಯಾಗಿ 2 ಗಂಟೆ ನೆನೆಸಿ, ನೀರು ಸಂಪೂರ್ಣವಾಗಿ ಸೋರಿ ಹಾಕಿ.

ಒಣ ಬಟ್ಟೆಯ ಮೇಲೆ ನೆರಳಿನಲ್ಲಿ ಸ್ವಲ್ಪ ಹೊತ್ತು ಒಣಗಿಸಿ.

1 ಲೋಟ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ನೆರಳಿನಲ್ಲಿ ಒಣಗಿಸಿ. ( Optional )

    

1 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ Slice ಮಾಡಿ, ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

1 ಹಿಡಿ ಕರಿಬೇವು ತೊಳೆದು, ಒಣ ಬಟ್ಟೆಯ ಮೇಲೆ ಒಣಗಿಸಿ.

  

ಒಂದು ಬಟ್ಟಲಿನಲ್ಲಿ 2 ಚಮಚ ಖಾರದ ಪುಡಿ, 2 ಚಮಚ ಉಪ್ಪು, 1 ಚಮಚ ಇಂಗು ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಅದಕ್ಕೆ ಹೊಂದುವಂತಹ Metal ಜಾಲರಿಯನ್ನು ಬಾಣಲೆಯ ಒಳಗಿಟ್ಟು, ( ಚಿತ್ರ ನೋಡಿ ) ಒಂದೊಂದೇ ಹಿಡಿ ಬೇಳೆಯನ್ನು ಹಾಕಿ ಗರಿ ಗರಿಯಾಗಿ ಆಗುವವರೆಗೆ ಕರಿದು ಜಾಲರಿ ಸಮೇತ ಮೇಲೆ ತೆಗೆದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ. ಹೀಗೆ ಮಾಡುವುದರಿಂದ ಬೇಳೆಯನ್ನು ಎಣ್ಣೆಯಿಂದ ತೆಗೆಯುವುದು ಸುಲಭ!

    

ಸ್ವಲ್ಪ ಬಿಸಿಯಾಗಿರುವಾಗಲೇ ಉಪ್ಪು, ಖಾರದ ಪುಡಿ ಮಿಶ್ರಣ ಸ್ವಲ್ಪ ಉದುರಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ಇದೇ ರೀತಿ ಹಿದುಕಿದ ಬೇಳೆ, 1 ಲೋಟ ಕಡಲೇ ಬೀಜ, ಒಣ ಕೊಬ್ಬರಿ ತುಂಡುಗಳು, ಕರಿಬೇವು ಗರಿ ಗರಿಯಾಗಿ ಕರಿದು ಪ್ರತಿ ಬಾರಿಯೂ ಸ್ವಲ್ಪ ಸ್ವಲ್ಪವೇ ಉಪ್ಪು, ಖಾರದ ಪುಡಿ ಉದುರಿಸಿ, ಚೆನ್ನಾಗಿ ಕಲೆಸಿ, ಡಬ್ಬದಲ್ಲಿ ಹಾಕಿಡಿ.

ಬಾಣಲೆಯಲ್ಲಿ 1 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದು ಒಲೆಯಿಂದ ಇಳಿಸಿ.

ಉಪ್ಪು, ಖಾರದ ಪುಡಿ ಮಿಶ್ರಣಕ್ಕೆ ಕೆಲವು ಹನಿಗಳಷ್ಟು ನೀರು ಹಾಕಿ ಚೆನ್ನಾಗಿ ಕಲೆಸಿ ಬಿಸಿಯಾದ ಎಳ್ಳಿಗೆ ಹಾಕಿ ಚೆನ್ನಾಗಿ ಕಲೆಸಿ, ಮತ್ತೆ ಸ್ವಲ್ಪ ಹೊತ್ತು ಕಡಿಮೆ ಉರಿಯಲ್ಲಿ ಹುರಿದು, ಸ್ವಲ್ಪ ತಣ್ಣಗಾದ ಮೇಲೆ ಕರಿದ ಇತರ ಪದಾರ್ಥಗಳೊಂದಿಗೆ ಸೇರಿಸಿ ಮತ್ತೊಂದು ಬಾರಿ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳಾದರೂ ಗರಿ ಗರಿಯಾಗಿರುತ್ತದೆ!

ಒಮ್ಮೆ ಮಾಡಿ ನೋಡಿ!

ಧನ್ಯವಾದಗಳು