ಈಗ ನಿಮಗೆಲ್ಲಾ ಗೊತ್ತಿರುವ ಹಾಗೆ ಧನುರ್ಮಾಸ! ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಪೊಂಗಲ್ ನೈವೇದ್ಯ! ಆರೋಗ್ಯಕರವಾದ, ರುಚಿಕರವಾದ ಪೊಂಗಲ್ ಎಲ್ಲರಿಗೂ ಗೊತ್ತಿರುವ ಹಾಗೆ ಅಕ್ಕಿ ಮತ್ತು ಹೆಸರು ಬೇಳೆಯಿಂದ ಮಾಡುವುದು. ಅಕ್ಕಿಯ ಬದಲು ಅವಲಕ್ಕಿಯಿಂದ ರುಚಿಯಾದ ಪೊಂಗಲ್ ಮಾಡುವ ವಿಧಾನ ಇಲ್ಲಿದೆ!

ಅವಲಕ್ಕಿ ಪೊಂಗಲ್ ಮಾಡುವ ವಿಧಾನ:-

1/2 ಅಳತೆ ಹೆಸರು ಬೇಳೆಯನ್ನು ಸ್ವಲ್ಪ ಹುರಿದು, 1 ಅಳತೆ ಬಿಡಿಸಿದ ಅವರೆ ಕಾಳಿನ ಜೊತೆಗೆ 3 ಅಳತೆ ನೀರು ಹಾಕಿ ಮೂರು ವಿಷಲ್ ಕೂಗಿಸಿಡಿ.

4 ಚಮಚ ಕಾಯಿ ತುರಿದಿಡಿ.

2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕರಿಬೇವು ತೊಳೆದಿಡಿ.

1/2 ಚಮಚ ಕರಿ ಮೆಣಸು, 1/2 ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಕುಟ್ಟಿಡಿ.

1 ಅಳತೆ ಗಟ್ಟಿ ಅವಲಕ್ಕಿಯನ್ನು ತೊಳೆದಿಡಿ.

ಒಂದು ಚಿಕ್ಕ ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ಮೆಣಸು ಜೀರಿಗೆ ಪುಡಿ, ಚಿಟಿಕೆ ಇಂಗು, ಕರಿಬೇವು, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು ಒಲೆಯಿಂದ ಇಳಿಸಿ.

ಕುಕ್ಕರಿನಲ್ಲಿ ಅವರೆ ಕಾಳು, ಹೆಸರು ಬೇಳೆ ಬೆಂದ ನೀರಿಗೆ ತೊಳೆದ ಗಟ್ಟಿ ಅವಲಕ್ಕಿ, ಉಪ್ಪು,ಸ್ವಲ್ಪ ನೀರು ಬೇಕಾದರೆ ಹಾಕಿ ಅವಲಕ್ಕಿ ಬೆಂದ ನಂತರ ಕೊನೆಯಲ್ಲಿ ಒಗ್ಗರಣೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಅವಲಕ್ಕಿ ಪೊಂಗಲ್ ಸಿದ್ಧ!

ಧನ್ಯವಾದಗಳು