ರುಮಾಲಿ ರೋಟಿ ಬಹು ಜನಪ್ರಿಯ ಆಹಾರ! ಹಿಂದಿಯಲ್ಲಿ ರುಮಾಲ್ ಅಂದರೆ ಕರ್ಚೀಫ್ ಎಂದು ಅರ್ಥ! ಅಂದರೆ ಕರ್ಚೀಫ್ ಹಾಗೆ ತೆಳ್ಳಗೆ, ಅಗಲವಾಗಿರುವ ರೋಟಿ ಎಂದು ಅರ್ಥ!

ಮಾಡುವ ವಿಧಾನ:-

1 ಕಪ್ ಮೈದಾ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಸ್ವಲ್ಪ ಎಣ್ಣೆ ಸವರಿ 15 ನಿಮಿಷ ಮುಚ್ಚಿಡಿ.

    

ಮತ್ತೊಂದು ಬಾರಿ ಚೆನ್ನಾಗಿ ನಾದಿ, ಚಪಾತಿ ಹಿಟ್ಟಿನ ಉಂಡೆಗಿಂತ ಸ್ವಲ್ಪ ದೊಡ್ಡ ಉಂಡೆ ತೆಗೆದುಕೊಂಡು ಆದಷ್ಟೂ ತೆಳ್ಳಗೆ, ದೊಡ್ಡದಾಗಿ ಲಟ್ಟಿಸಿ.

ಒಂದು ದೊಡ್ಡ ಬಾಣಲೆಯ ತಳವನ್ನು ಚೆನ್ನಾಗಿ ತೊಳೆದು ಒರೆಸಿ, ದೊಡ್ಡ ಉರಿಯಿರುವ ಒಲೆಯ ಮೇಲೆ ಬೋರಲು ಹಾಕಿ ದೊಡ್ಡ ಉರಿಯಲ್ಲಿ ಬಿಸಿ ಮಾಡಿ.

  

ಎಚ್ಚರಿಕೆಯಿಂದ ಲಟ್ಟಿಸಿರುವ ರೋಟಿಯನ್ನು ಬಿಸಿಯಾದ ಬಾಣಲೆ ಮೇಲೆ ಹಾಕಿ. ಉರಿ ಮಧ್ಯಮ ಮಾಡಿ ರೋಟಿ ಎಲ್ಲಾ ಕಡೆ ಬೇಯಿಸಿ. ಗುಳ್ಳೆಗಳು ಬಂದ ನಂತರ ತಿರುವಿ ಹಾಕಿ ಇನ್ನೊಂದು ಕಡೆಯೂ ಬೇಯಿಸಿ ಮಡಚಿ ತೆಗೆದಿಡಿ.

ಇದೇ ರೀತಿ ಉಳಿದ ಹಿಟ್ಟಿನಿಂದ ರೋಟಿಗಳನ್ನು ಮಾಡಿ.

 

ಕಡಕ್ ಮಸಾಲ ರೋಟಿ ಮಾಡುವ ವಿಧಾನ:-

ನೀವು ಮಾಡಿರುವ ರುಮಾಲಿ ರೋಟಿಯನ್ನು ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಎಲ್ಲಾ ಕಡೆಯೂ ಒತ್ತುತ್ತಾ ರೋಟಿ ಪೂರಾ ಕಡಕ್ ಆಗುವಂತೆ ಮಾಡಿ ( ಚಿತ್ರ ನೋಡಿ) ಈ ರೋಟಿ ಗರಿ ಗರಿಯಾಗಿ ಇರಬೇಕು! ಬಿಸಿಯಿದ್ದಾಗಲೇ ಸ್ವಲ್ಪ ತುಪ್ಪ ಸವರಿಡಿ.

    

2 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ.

  

4 ಕ್ಯೂಬ್ ಚೀಸ್ ತುರಿದಿಡಿ.

ಎಲ್ಲಾ ತರಕಾರಿಗಳನ್ನು ಸೇರಿಸಿ ಸ್ವಲ್ಪ ಉಪ್ಪು, 1/2 ಚಮಚ ಖಾರದ ಪುಡಿ ಹಾಕಿ ಚೆನ್ನಾಗಿ ಕಲೆಸಿ.

  

ಒಂದು ದೊಡ್ಡ ತಟ್ಟೆಯಲ್ಲಿ ಕಡಕ್ ರೋಟಿ ಇಟ್ಟು ಸುತ್ತಲೂ ತರಕಾರಿ ಮಿಶ್ರಣ ಉದುರಿಸಿ, ಮೇಲೆ ತುರಿದ ಚೀಸ್, ಚಾಟ್ ಮಸಾಲ ಉದುರಿಸಿ ತಕ್ಷಣ ಸವಿಯಿರಿ!

ಮೊದಲೇ ತರಕಾರಿಗಳನ್ನು ಹಾಕಿದರೆ ರೋಟಿ ಮೆತ್ತಗೆ ಆಗುತ್ತದೆ! ಹಾಗಾಗಿ ಮನೆಯ ಸದಸ್ಯರೆಲ್ಲಾ ಊಟಕ್ಕೆ ಬರುವ ಸಮಯದಲ್ಲಿ ಈ ರೋಟಿ ಮಾಡಿ ಸವಿಯಿರಿ!

ಬೆಂಗಳೂರಿನ ಕೆಲವೇ ಹೋಟೆಲ್ ಗಳಲ್ಲಿ ಈ ರೋಟಿ ಸಿಗುವುದು! ಹಾಗಾದರೆ ಮನೆಯಲ್ಲಿಯೇ ಮಾಡಿ ಸವಿಯುತ್ತೀರಲ್ಲಾ!?

ಧನ್ಯವಾದಗಳು