ಮಂಚೂರಿಯನ್ ಎಲ್ಲರ ಫೇವರೈಟ್! ಈ ಮಂಚೂರಿ ಸ್ವಲ್ಪ ವಿಶೇಷ ರುಚಿ.

ಅವರೆ ವೆಜ್ ಬಾಲ್ ಮಂಚೂರಿಯನ್ ಮಾಡುವ ವಿಧಾನ:-

1 ಕ್ಯಾರೆಟ್, 1 ಕ್ಯಾಪ್ಸಿಕಮ್, ಒಂದು ಹಿಡಿ ಕ್ಯಾಬೇಜ್, 10 ರಿಂದ 12 ಎಳೆಯದಾದ ಹುರುಳಿ ಕಾಯಿ ತೊಳೆದು ಆದಷ್ಟೂ ಸಣ್ಣಗೆ ಹೆಚ್ಚಿಡಿ.

2 ಹಿಡಿ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ತರಿ ತರಿಯಾಗಿ ರುಬ್ಬಿಡಿ. ಸುಮ್ಮನೆ ಒಂದು ಸುತ್ತು ಸುತ್ತಿದರೆ ಸಾಕು!

  

ತರಕಾರಿಗಳು, ರುಬ್ಬಿದ ಅವರೆ ಮಿಶ್ರಣ, 1 ಚಮಚ ಕಾರ್ನ್ ಫ್ಲೋರ್,1 ಚಮಚ ಮೈದಾ, 1 ಚಮಚ ಅಕ್ಕಿ ಹಿಟ್ಟು ಹಾಕಿ, ಉಪ್ಪು, 1 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ. ನೀರು ಸೇರಿಸುವ ಅಗತ್ಯವಿಲ್ಲ. ತರಕಾರಿ, ಹಿದುಕಿದ ಬೇಳೆಯಲ್ಲಿರುವ ನೀರಿನಂಶವೇ ಸಾಕು!

ಕಲೆಸಿದ ಹಿಟ್ಟಿನಿಂದ ಪುಟ್ಟ ಪುಟ್ಟ ಉಂಡೆ ಮಾಡಿ ಬಿಸಿಯಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ತೆಗೆದಿಡಿ.

ಒಗ್ಗರಣೆಗೆ 1 ಚಿಕ್ಕ ಬೆಳ್ಳುಳ್ಳಿ, ಹಸಿ ಶುಂಠಿ 1 ಇಂಚು, 1 ಈರುಳ್ಳಿ, 1 ಕ್ಯಾಪ್ಸಿಕಮ್, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

  

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಮ್ ಹಾಕಿ ಹುರಿದು ತಲಾ ಒಂದು ಚಮಚ ವಿನೆಗರ್, ಸೋಯಾ ಸಾಸ್, ವಿನೆಗರ್, ರೆಡ್ ಚಿಲ್ಲಿ ಸಾಸ್, ಟೋಮೇಟೋ ಸಾಸ್ ಹಾಕಿ ಚೆನ್ನಾಗಿ ಕಲೆಸಿ. 4 ಚಮಚ ನೀರಿಗೆ 1 ಚಿಕ್ಕ ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಕಲೆಸಿ ಒಗ್ಗರಣೆಗೆ ಹಾಕಿ. ಕೊನೆಯಲ್ಲಿ ಬೆಂದ ವೆಜ್ ಬಾಲ್ ಗಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಅವರೆ ವೆಜ್ ಬಾಲ್ ಮಂಚೂರಿಯನ್ ಸಿದ್ಧ!

ಹಿದುಕಿದ ಬೇಳೆ Optional! ಅದನ್ನು ಹಾಕದೆ ಇತರ ತರಕಾರಿಗಳನ್ನು ಹಾಕಿ ಬೇಕಾದರೂ ಮಾಡಬಹುದು!

ಧನ್ಯವಾದಗಳು.