ಚಿತ್ರಾನ್ನ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ! ಎಷ್ಟು ಬಗೆಯ, ಎಷ್ಟು ಬಣ್ಣದ, ಎಷ್ಟು ರುಚಿಯ ಚಿತ್ರಾನ್ನ! ಅಬ್ಬಾ ಎಷ್ಟು ದೊಡ್ಡ ಲಿಸ್ಟ್! ಈ ಲಿಸ್ಟ್ ಗೆ ಇನ್ನೊಂದು ಸೇರ್ಪಡೆ ಪುಡಿ ಚಿತ್ರಾನ್ನ!

ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ!

ಮಾಡುವ ವಿಧಾನ:-

1 ಪಾವು ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.

4 ಚಮಚ ಒಣ ಕೊಬ್ಬರಿ ತುರಿದಿಡಿ.

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

  

1 ಟೇಬಲ್ ಚಮಚ ಕಡಲೇ ಬೇಳೆ, 2 ಟೀ ಚಮಚ ಉದ್ದಿನ ಬೇಳೆ, 1 ಟೀ ಚಮಚ ಧನಿಯಾ, 2 ಟೀ ಚಮಚ ಬಿಳಿ ಎಳ್ಳು, 1/4 ಟೀ ಚಮಚ ಮೆಂತ್ಯ, 1/2 ಟೀ ಚಮಚ ಸಾಸಿವೆ, 1/2 ಟೀ ಚಮಚ ಜೀರಿಗೆ ಎಣ್ಣೆ ಹಾಕದೆ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಡಿ.

ಕೊನೆಯಲ್ಲಿ ಕೊಬ್ಬರಿ ತುರಿ, ಮೆಣಸಿನಕಾಯಿ ಪುಡಿ, ಬೇಳೆಗಳ ಪುಡಿ ಎಲ್ಲವನ್ನೂ ಸೇರಿಸಿ ಇನ್ನೊಂದು ಬಾರಿ ಪುಡಿ ಮಾಡಿಡಿ.

4 ಚಮಚ ಹುಣಿಸೆ ರಸ ತೆಗೆದು, 2 ಕಡಲೇ ಬೀಜದ ಗಾತ್ರ ಬೆಲ್ಲ ಹಾಕಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ,ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು, ಹುಣಿಸೆ ರಸ, ಉಪ್ಪು ಹಾಕಿ ಸ್ವಲ್ಪ ಕುದಿಸಿ ಒಲೆಯಿಂದ ಇಳಿಸಿ.

ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹರಡಿ ಮೇಲೆ ಮಾಡಿಟ್ಟ ಒಗ್ಗರಣೆ, ಬೇಳೆಗಳ ಪುಡಿ ಹಾಕಿ ಕಲೆಸಿ ಮೇಲೆ ಕರಿದ ಕಡಲೇ ಬೀಜ ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಪುಡಿ ಚಿತ್ರಾನ್ನ ಸಿದ್ಧ! ಈ ಚಿತ್ರಾನ್ನದ ರುಚಿ ಹೆಚ್ಚು ಕಡಿಮೆ ಪುಳಿಯೋಗರೆ ಹಾಗಿರುತ್ತದೆ!

ಧನ್ಯವಾದಗಳು