ಜಿಲೇಬಿ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಇದರ ರುಚಿಗೆ ಮನ ಸೋಲದವರಿಲ್ಲ! ಈ ಸಿಹಿಯನ್ನು ಸಕ್ಕರೆಯಲ್ಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ!

ಸಕ್ಕರೆ ಬದಲು ಬೆಲ್ಲದಲ್ಲಿ ಮಾಡುವುದು ಈ ರೆಸಿಪಿ ವಿಶೇಷತೆ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ!

ಅಂದ ಹಾಗೆ ನಿಮ್ಮ ಅನ್ನಪೂರ್ಣೆ ಪೇಜ್ ನ 300 ನೇ ರೆಸಿಪಿ! ಹಾಗಾಗಿ ವಿಶೇಷ ಸಿಹಿ!

ಮಾಡುವ ವಿಧಾನ:-

1 ಅಳತೆ ಬೆಲ್ಲ ಪುಡಿ ಮಾಡಿ 1/4 ಲೋಟ ನೀರು ಹಾಕಿ ಅರ್ಧ ಎಳೆ ಪಾಕ ಬಂದೊಡನೆ 1/2 ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ, ಒಲೆಯಿಂದ ಇಳಿಸಿ ತಟ್ಟೆ ಮುಚ್ಚಿಡಿ. ಅಂದರೆ ಪಾಕ ಸ್ವಲ್ಪ ಗಟ್ಟಿಯಾದರೆ ಸಾಕು. ಬೆಲ್ಲ ಪೂರ್ತಿಯಾಗಿ ಕರಗಿದ ಮೇಲೆ ಸ್ವಲ್ಪ ಗಟ್ಟಿಯಾಗಿ ಆದಾಗ ಎರಡು ಬೆರಳುಗಳ ಮಧ್ಯೆ ಸ್ವಲ್ಪ ಪಾಕ ತೆಗೆದುಕೊಂಡು ಎಳೆದರೆ ಎಳೆ ಅರ್ಧ ಬಂದರೂ ಸಾಕು!

 

ಜಿಲೇಬಿ ಮಾಡುವ ವಿಧಾನ:-

1 ಲೋಟ ಮೈದಾ ಹಿಟ್ಟಿಗೆ, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್, 2 ಚಮಚ ಮೊಸರು, ಚಿಟಿಕೆ ಅರಿಷಿಣ, 1/4 ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಗಂಟಿಲ್ಲದ ಹಾಗೆ ಕಲೆಸಿಡಿ. 5 ನಿಮಿಷ ಚೆನ್ನಾಗಿ ಕಲೆಸಿ.

    

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಜಿಲೇಬಿ ಬಾಟಲಿನಲ್ಲಿ ಮಿಶ್ರಣ ತುಂಬಿ, ಕಾದ ಎಣ್ಣೆಗೆ ನೇರವಾಗಿ ಗುಂಡಾಗಿ ಜಿಲೇಬಿ ಹಿಂಡಿ ಎರಡೂ ಕಡೆ ಗರಿ ಗರಿಯಾಗಿ ಬೇಯಿಸಿ, ತೆಗೆದು ನೇರವಾಗಿ ಬೆಲ್ಲದ ಪಾಕದಲ್ಲಿ ಅದ್ದಿ ತೆಗೆದಿಟ್ಟರೆ ರುಚಿಯಾದ, ಬೆಲ್ಲದ ಜಿಲೇಬಿ ಸವಿಯಲು ಸಿದ್ಧ!

ಅಕಸ್ಮಾತ್ ನಿಮಗೆ ಜಿಲೇಬಿ ಬಾಟಲ್ ಸಿಗದಿದ್ದರೆ, ಯಾವುದಾದರೂ ಸಾಸ್ ಬಾಟಲ್, ಮಕ್ಕಳ ನೀರಿನ ಬಾಟಲ್ ನಲ್ಲಿ ಮಾಡಬಹುದು. ( STRAW ಇರುವ ಬಾಟಲ್)

ಅಥವಾ ಹಾಲಿನ/ ಮೊಸರಿನ/ ಎಣ್ಣೆಯ ಕವರ್ ತೊಳೆದು ಮಿಶ್ರಣ ತುಂಬಿ, ಒಂದು ದಾರದಿಂದ ಕಟ್ಟಿ. ತಳ ಭಾಗದಲ್ಲಿ ಸಣ್ಣ ರಂಧ್ರ ಮಾಡಿ ಜಿಲೇಬಿ ಮಾಡಬಹುದು!

 

ಆಪಲ್ ಜಿಲೇಬಿ

  

ಇದೇ ರೀತಿಯಲ್ಲಿ ಕಲೆಸಿದ ಹಿಟ್ಟಿನಲ್ಲಿ ಸಣ್ಣಗೆ ಹೆಚ್ಚಿದ ಸೇಬು ಅಥವಾ ಪೈನಾಪಲ್ ಹಣ್ಣು ಅದ್ದಿ ಎಣ್ಣೆಯಲ್ಲಿ ಕರಿದು ಬೆಲ್ಲದ ಪಾಕದಲ್ಲಿ ಅದ್ದಿ ತೆಗೆದಿಟ್ಟರೆ ರುಚಿಯಾದ ಆಪಲ್ ಜಿಲೇಬಿ ಸಿದ್ಧ! ಬಿಳಿ ತಟ್ಟೆಯಲ್ಲಿರುವುದು ಆಪಲ್ ಜಿಲೇಬಿ!

 

ರಬ್ಡಿ ಮಾಡುವ ವಿಧಾನ:-

ಸ್ವಲ್ಪ ಬಿಸಿ ಹಾಲಿಗೆ ಕೇಸರಿ ದಳ ಹಾಕಿಡಿ.

ಸ್ವಲ್ಪ ಬಾದಾಮಿ, ಗೋಡಂಬಿ, ಪಿಸ್ತಾ ಸಣ್ಣಗೆ ಹೆಚ್ಚಿಡಿ.

1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಆರಂಭವಾದಾಗ ಉರಿ ಕಡಿಮೆ ಮಾಡಿ ಹಾಲು ಅರ್ಧದಷ್ಟು ಕಡಿಮೆ ಆಗಲು ಬಿಡಿ. ಆಗಾಗ ಕಲೆಸುವುದನ್ನು ಮರೆಯಬೇಡಿ!

    

ನಂತರ 4 ಚಮಚ ಸಕ್ಕರೆ, ಕೇಸರಿ ಹಾಕಿರುವ ಹಾಲು, ಚಿಟಿಕೆ ಏಲಕ್ಕಿ ಪುಡಿ, ಸಣ್ಣಗೆ ಹೆಚ್ಚಿದ Dry fruits ಹಾಕಿ ಹಾಲು ಇನ್ನಷ್ಟು ಗಟ್ಟಿಯಾಗಲು ಬಿಡಿ.

ಆಗಾಗ ಹಾಲು ಕಲೆಸಲು ಮರೆಯಬೇಡಿ!

ಹಾಲು 1/4 ಭಾಗದಷ್ಟು ಆದಾಗ ಒಲೆಯಿಂದ ಇಳಿಸಿ. ಜಿಲೇಬಿ ತಿನ್ನುವ ಮೊದಲು ಮೇಲೆ ಸ್ವಲ್ಪ ರಬ್ಡಿ ಹಾಕಿ ಸವಿಯಿರಿ!

ನಾನಿಲ್ಲಿ ರಬ್ಡಿಗೆ ಸಕ್ಕರೆ ಹಾಕಿಲ್ಲ! ಏಕೆಂದರೆ ನಾವು ಹೆಚ್ಚು ಸಿಹಿ ತಿನ್ನುವುದಿಲ್ಲ! ಸಿಹಿಯಾದ ಜಿಲೇಬಿ ಜೊತೆಗೆ ಇದು ಹಾಗೆ ಚೆನ್ನಾಗಿರುತ್ತದೆ ಎಂದು ಸಕ್ಕರೆ ಹಾಕದೆ ಮಾಡಿದ್ದೇನೆ.

ಧನ್ಯವಾದಗಳು.

ಧನ್ಯವಾದಗಳು