ಬಹಳ ಜನರ ಇಷ್ಟವಾದ ತಿಂಡಿ ಮೆಣಸಿನಕಾಯಿ ಬಜ್ಜಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?! ಸಾಧಾರಣವಾಗಿ ಮೆಣಸಿನಕಾಯಿ ಬಜ್ಜಿ ಎಲ್ಲರೂ ಮಾಡುತ್ತಾರೆ! ಹೀಗೊಮ್ಮೆ ಮಾಡಿ ನೋಡಿ! ನಿಮಗೆಲ್ಲಾ ಖಂಡಿತಾ ಇಷ್ಟ ಆಗುತ್ತೆ!

ಮಾಡುವ ವಿಧಾನ:-

ಬಜ್ಜಿಯ ಒಳಗೆ ತುಂಬಲು:-

   

2 ಚಮಚ ಬಿಳಿ ಎಳ್ಳು, 1 ಚಮಚ ಜೀರಿಗೆ, 1/4 ಚಮಚ ಓಂ ಕಾಳು ( ಅಜವಾನ ), ಹುರಿದು 1 ಚಮಚ ಹುರಿಗಡಲೆ ಸೇರಿಸಿ ನುಣ್ಣಗೆ ಪುಡಿ ಮಾಡಿಡಿ. ಜೊತೆಗೆ 1/4 ಚಮಚ ಖಾರದ ಪುಡಿ ( ಬೇಕಾದರೆ ), ಉಪ್ಪು , ಚಿಟಿಕೆ ಅರಿಷಿಣ, 1/2 ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಗಟ್ಟಿಯಾದ ಚಟ್ನಿಯ ಹದಕ್ಕೆ ಕಲೆಸಿಡಿ.

ಬಜ್ಜಿ ಮೆಣಸಿನಕಾಯಿ ತೊಳೆದು ಮಧ್ಯದಲ್ಲಿ ಸೀಳಿ ಈ ಮಿಶ್ರಣವನ್ನು ತುಂಬಿಡಿ.

ಕಡಲೇ ಹಿಟ್ಟು, 4 ಚಮಚ ಅಕ್ಕಿ ಹಿಟ್ಟು, 1/2 ಚಮಚ ಇಂಗು ಪುಡಿ, ಉಪ್ಪು, 1/2 ಚಮಚ ಜೀರಿಗೆ,1 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ನೀರು ಸೇರಿಸಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಕಲೆಸಿಡಿ.

ಬಾಣಲೆಯಲ್ಲಿ ಕಾದ ಎಣ್ಣೆಗೆ ಮೆಣಸಿನಕಾಯಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಗರಿ ಗರಿಯಾಗಿ ಬಜ್ಜಿ ಕರಿದಿಡಿ.

ನೀವು ಹೀಗೆಯೇ ಬೇಕಾದರೆ ಬಜ್ಜಿ ತಿನ್ನಬಹುದು!

   

ಅಥವಾ ಬೆಂದ ಬಜ್ಜಿಯನ್ನು 1 ಇಂಚು ಅಳತೆಗೆ ಕತ್ತರಿಸಿಡಿ. ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕತ್ತರಿಸಿದ ಬಜ್ಜಿಗಳನ್ನು ಮತ್ತಷ್ಟು ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

ಎರಡನೇ ಬಾರಿ ಕರಿದ ಗರಿ ಗರಿಯದ ಬಜ್ಜಿಯ ಮೇಲೆ ಸ್ವಲ್ಪ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಚಿಟಿಕೆ ಚಾಟ್ ಮಸಾಲ, ಸ್ವಲ್ಪ ನಿಂಬೆ ರಸ, ಖಾರದ ಪುಡಿ ಉದುರಿಸಿ ಸವಿಯಿರಿ!

ಈ ರೀತಿ ಮಾಡಿದರೆ ಬಜ್ಜಿ ತುಂಬಾ ರುಚಿಯಾಗಿರುತ್ತದೆ!

ಎರಡನೇ ಬಾರಿ ಕರಿಯಲು ಸ್ವಲ್ಪ ಕಡಿಮೆ ಎಣ್ಣೆ ಹಾಕಿ ಕರಿಯಿರಿ. ಈ ಎಣ್ಣೆಯನ್ನು ಮತ್ತೆ ಉಪಯೋಗಿಸುವುದು ಸ್ವಲ್ಪ ಕಷ್ಟವೇ!

ಈ ಕಟ್ ಬಜ್ಜಿ ಗಿರ್ಮಿಟ್ ಜೊತೆಗೆ ಸೂಪರ್ ಕಾಂಬಿನೇಶನ್!!!

ಧನ್ಯವಾದಗಳು!