ಅಜ್ಜಿಯ ಕೈರುಚಿ ಙಾಪಕ ಬರುತ್ತದೆ ಈ ಹೆಸರು ಕೇಳಿದೊಡನೆ! ಏಕೆಂದರೆ ಇದು ನನ್ನ ಪತಿಯ ಅಜ್ಜಿಯ ರೆಸಿಪಿ! ತಮಿಳುನಾಡಿನ ಶೈಲಿ! ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಅಂತಾರಲ್ಲಾ ಹಾಗೇ ಮೆಂತ್ಯ ತಿನ್ನುವಾಗ ಕಹಿ ಅನ್ನಿಸಿದರೂ ದೇಹಕ್ಕೆ ಒಳ್ಳೆಯದು!

ಮಾಡುವ ವಿಧಾನ:-

ಮೆಂತ್ಯ – 1/2 ಟೀ ಚಮಚ
ಕಡಲೇ ಬೇಳೆ – 1 ಟೇಬಲ್ ಚಮಚ
ಧನಿಯಾ – 1/2 ಟೇಬಲ್ ಚಮಚ
ಕಾಯಿ ತುರಿ – 2 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8

ಕಡಲೇ ಬೇಳೆ, ಧನಿಯಾ,ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ. ಎರಡೂ ಪುಡಿಗಳನ್ನು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.

1/2 ಬಟ್ಟಲ ಸಾಂಬಾರ್ ಈರುಳ್ಳಿ ಸಿಪ್ಪೆ ತೆಗೆದಿಡಿ. ಸಾಂಬಾರ್ ಈರುಳ್ಳಿ ಸಿಗದಿದ್ದರೆ ಒಂದು ದೊಡ್ಡ ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.

2 ಚಮಚ ಹುಣಿಸೆ ರಸ ತೆಗೆದಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಷಿಣ, ಇಂಗು, ಸಾಂಬಾರ್ ಈರುಳ್ಳಿ ಹಾಕಿ ಸ್ವಲ್ಪ ಹುರಿದು, ಮೊಳಕೆ ಬಂದ 2 ಟೇಬಲ್ ಚಮಚ ಮೆಂತ್ಯ ಹಾಕಿ ಹುರಿದು, ರುಬ್ಬಿದ ಮಿಶ್ರಣ, ಹುಣಿಸೆ ರಸ, ಕಡಲೇ ಬೀಜದಷ್ಟು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಮೆಂತ್ಯ ಪೂರ್ತಿಯಾಗಿ ಬೇಯುವವರೆಗೆಬೇಯಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಆರೋಗ್ಯಕರವಾದ ವೆಂದ್ಯೆ ಕೊಳಂಬು ಸಿದ್ಧ!

ಈ ರೆಸಿಪಿ ಮೆಂತ್ಯದ ಮಹತ್ವ ಗೊತ್ತಿರುವವರಿಗೆ ತುಂಬಾ ಇಷ್ಟವಾಗುತ್ತೆ ಎನ್ನುವುದು ನನ್ನ ಅಭಿಪ್ರಾಯ!

ಮೊಳಕೆ ಬಂದ ಮೆಂತ್ಯದ ಬದಲು ಸಾಧಾರಣ ಮೆಂತ್ಯ ಬೇಕಾದರೆ ಹಾಕಿಕೊಳ್ಳಬಹುದು.

ಅಥವಾ ಮೆಂತ್ಯ ಸೊಪ್ಪು ಹಾಕಿ ಬೇಕಾದರೂ ಮಾಡಬಹುದು!

ನಾನು ತುಸು ಹೆಚ್ಚೇ ಮೆಂತ್ಯ ಹಾಕಿದ್ದೇನೆ. ನೀವು ನಿಮ್ಮ ರುಚಿಗೆ ತಕ್ಕಷ್ಟು ಮೆಂತ್ಯ ಹಾಕಿಕೊಳ್ಳಬಹುದು.

ಮೆಂತ್ಯ ಮೊಳಕೆ ಬಂದ ನಂತರ ಕಹಿ ಕಡಿಮೆ ಆಗಿರುತ್ತದೆ. ಆರೋಗ್ಯಕ್ಕೂ ಬಹಳ ಒಳ್ಳೆಯದು!

ಈ ಗೊಜ್ಜು ಅನ್ನ, ಚಪಾತಿಯೊಂದಿಗೆ ಸಹ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು!