ತುಂಬಾ ಜನರ ಅಚ್ಚು ಮೆಚ್ಚಿನ ತಿಂಡಿ! ಆರೋಗ್ಯಕರವಾದ, ರುಚಿಕರವಾದ ತಿಂಡಿ!

ಮಾಡುವ ವಿಧಾನ:-

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

2 ಚಮಚ ತೆಂಗಿನ ಕಾಯಿ ತುರಿದಿಡಿ.

4 ಚಮಚ ಮೆಂತ್ಯ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿ, 1/2 ಚಮಚ ಎಣ್ಣೆ ಹಾಕಿ ಸ್ವಲ್ಪ ಬಾಡಿಸಿಡಿ. ಹಾಗೆ ಹಸಿಯಾಗೆ ಹಾಕಬಹುದು. ಹುರಿದರೆ ರುಚಿ ಚೆನ್ನಾಗಿರುತ್ತದೆ.

ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ.

1 ಲೋಟ ರಾಗಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, ಹುರಿದ ಮೆಂತ್ಯ ಸೊಪ್ಪು, ಕಾಯಿ ತುರಿ, 1 ಚಮಚ ಜೀರಿಗೆ,ಉಪ್ಪು, ಚಿಟಿಕೆ ಇಂಗು, ಸ್ವಲ್ಪ ನೀರು ಸೇರಿಸಿ ಮೆತ್ತಗೆ ರೊಟ್ಟಿ ಹಿಟ್ಟು ಕಲೆಸಿಡಿ.

  

ಅವರೆ ಕಾಳು ಹಾಕುವುದಾದರೆ ಕುಕ್ಕರಿನಲ್ಲಿ 3 ವಿಷಲ್ ಕೂಗಿಸಿ ಬೇಯಿಸಿ ಹಾಕಿ. ಕಾಳು ಬೇಯಿಸಿದ ನೀರು ಚೆಲ್ಲದೆ ರೊಟ್ಟಿ ಕಲೆಸುವಾಗ ಉಪಯೋಗಿಸಿ. ಅವರೆಯ ಸೊಗಡು ರೊಟ್ಟಿಯಲ್ಲಿ ಚೆನ್ನಾಗಿರುತ್ತದೆ!

ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಸವರಿ ತೆಳ್ಳಗೆ ರೊಟ್ಟಿ ತಟ್ಟಿ, ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಬೇಯಿಸಿ. ನಂತರ ತಿರುವಿ ಹಾಕಿ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ರಾಗಿ ರೊಟ್ಟಿ ಸಿದ್ಧ!

ಕಾಯಿ ತುರಿಯ ಬದಲು ಸಣ್ಣದಾಗಿ ಹೆಚ್ಚಿದ ತೆಂಗಿನ ಕಾಯಿಯನ್ನು ಹಾಕಬಹುದು.

 

ಉಚ್ಚೆಳ್ಳು ಚಟ್ನಿ ( ಗುರೆಳ್ಳು ಚಟ್ನಿ )

ರಾಗಿ ರೊಟ್ಟಿಗೆ ಒಳ್ಳೆಯ ಜೊತೆಗಾರ!

ಮಾಡುವ ವಿಧಾನ:-

2 ಚಮಚ ಉಚ್ಚೆಳ್ಳು ಎಣ್ಣೆ ಹಾಕದೆ ಗರಿ ಗರಿಯಾಗಿ ಹುರಿದಿಡಿ.

4 ಚಮಚ ಕಾಯಿ ತುರಿದಿಡಿ.

2 ಹಸಿ ಮೆಣಸಿನಕಾಯಿ ಸ್ವಲ್ಪ ಸೀಳಿ 1/2 ಚಮಚ ಎಣ್ಣೆ ಹಾಕಿ ಹುರಿದಿಡಿ. ಮೆಣಸಿನಕಾಯಿ ಹುರಿದು ಹಾಕಿದರೆ ರುಚಿ ಚೆನ್ನಾಗಿರುತ್ತದೆ, ಆರೋಗ್ಯಕ್ಕೆ ಒಳ್ಳೆಯದು!

1 ಚಮಚ ಹುಣಿಸೆ ರಸ ತೆಗೆದಿಡಿ.

ಮೊದಲು ಉಚ್ಚೆಳ್ಳನ್ನು ಪುಡಿ ಮಾಡಿ, ನಂತರ ಕಾಯಿ ತುರಿ, ಮೆಣಸಿನಕಾಯಿ, ಉಪ್ಪು, ಹುಣಿಸೆ ರಸ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ.

ಕೊನೆಯಲ್ಲಿ ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ವಿಶೇಷ ರುಚಿಯ ಉಚ್ಚೆಳ್ಳು ಚಟ್ನಿ ಸಿದ್ಧ!

ಬಿಸಿ ಬಿಸಿಯಾದ ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಬೆಣ್ಣೆ, ಹಸಿ ಈರುಳ್ಳಿ ಜೊತೆಗೆ ತಿಂದರೆ ಆಹಾ ಸ್ವರ್ಗಕ್ಕೆ ಮೂರೇ ಗೇಣು! ಸವಿದವರಿಗಷ್ಟೇ ಗೊತ್ತು ಅದರ ರುಚಿ!!!

ಬೆಳ್ಳುಳ್ಳಿ ಹಾಕುವುದಾದರೆ ಹಸಿ ಮೆಣಸಿನಕಾಯಿ ಜೊತೆಗೆ ಹುರಿದು ಹಾಕಿ. ಒಗ್ಗರಣೆಗೆ ಇಂಗು ಹಾಕದೆ ಸಾಸಿವೆ, ಕರಿಬೇವು ಮಾತ್ರ ಹಾಕಬಹುದು.

ಧನ್ಯವಾದಗಳು