ಬದನೆ ಎಣ್ಣೆಗಾಯಿ, ಗೊಜ್ಜು, ವಾಂಗೀ ಭಾತ್ ಎಲ್ಲರಿಗೂ ಗೊತ್ತಿರುವ ವಿಷಯವೇ!? ಬದನೆ ಪಲಾವ್ ಮಾಡಿದ್ದೀರಾ!?

ಇಲ್ಲವಾ ಹಾಗಾದರೆ ಈಗ ಮಾಡಿ ನೋಡಿ!
ಬದನೆ ಪ್ರಿಯರಿಗೆ ಖಂಡಿತಾ ಇಷ್ಟ ಆಗುತ್ತೆ!

ಪಲಾವ್ ಗೆ ಮಸಾಲೆ ಮಾಡುವ ವಿಧಾನ;-

1/2 ತೆಂಗಿನ ಕಾಯಿಯ ದೊಡ್ಡ ಭಾಗದ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿ 1 ಲೋಟ ಕಾಯಿ ಹಾಲು ತೆಗೆದಿಡಿ.

2 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 6 ಎಸಳು ಬೆಳ್ಳುಳ್ಳಿ, 1/2 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ ತರಿ ತರಿಯಾಗಿ ರುಬ್ಬಿಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ ಸೋರಿ ಹಾಕಿಡಿ.

ಬದನೆ ಕಾಯಿಗೆ ತುಂಬಲು ಎಳೆಯದಾದ ಪುಟ್ಟ ಪುಟ್ಟ ಬದನೆ ಕಾಯಿಗಳನ್ನು ಆಯ್ದು ಕೊಳ್ಳಿ.

ಚೆನ್ನಾಗಿ ತೊಳೆದು ತೊಟ್ಟು ತೆಗೆಯದೆ ಕೆಳ ಭಾಗದಲ್ಲಿ + ಆಕಾರದಲ್ಲಿ ಮಧ್ಯದವರೆಗೂ ಕತ್ತರಿಸಿ ನೀರಿನಲ್ಲಿ ಮುಳುಗಿಸಿಡಿ.

1 ಚಮಚ ಹುರಿಗಡಲೆ, 4 ಚಮಚ ಕಾಯಿ ತುರಿ, 1 ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ ಹಾಕಿ ಚಟ್ನಿಯ ಹದಕ್ಕೆ ಮಸಾಲ ರುಬ್ಬಿಡಿ.

ರುಬ್ಬಿದ ಮಿಶ್ರಣವನ್ನು ಬದನೆ ಕಾಯಿಯಲ್ಲಿ ಎಚ್ಚರಿಕೆಯಿಂದ ಬದನೆ ತುಂಡಾಗದಂತೆ ತುಂಬಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ / ಬೆಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಪಲಾವ್ ಗೆ ರುಬ್ಬಿದ ಮಸಾಲೆ ಹಾಕಿ ಸ್ವಲ್ಪ ಹುರಿದು, ನಂತರ ಬಾಸುಮತಿ ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು, 1 ಲೋಟ ಕಾಯಿ ಹಾಲು, 1 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ, ಕೊನೆಯಲ್ಲಿ ತುಂಬಿದ ಬದನೆ ಕಾಯಿಗಳನ್ನು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿದರೆ, ರುಚಿಯಾದ ಬದನೆ ಪಲಾವ್ ರೆಡಿ!

  

ಬಾಸುಮತಿ ಅಕ್ಕಿ ನೆನೆಸುವುದರಿಂದ ಬೇಗ ಬೇಯುತ್ತದೆ!

ತಿನ್ನುವಾಗ ಒಂದು ತುತ್ತು ಪಲಾವ್, ಒಂದು ತುಂಡು ಬದನೆ ತಿಂದರೆ ಚೆನ್ನಾಗಿರುತ್ತದೆ!

ಬದನೆಯ ಬದಲು ಬೇಬಿ ಆಲೂಗೆಡ್ಡೆ ಬೇಯಿಸಿ,ಸಿಪ್ಪೆ ತೆಗೆದು ಇದೇ ರೀತಿಯಲ್ಲಿ ಬೇಕಾದರೂ ಮಾಡಬಹುದು!

ಧನ್ಯವಾದಗಳು????????