ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ದೋಸೆ! ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ!

ದೋಸೆ ಮಾಡುವ ವಿಧಾನ:-

ದೋಸೆ ಅಕ್ಕಿ – 4 ಕಪ್
ಉದ್ದಿನ ಬೇಳೆ – 1 ಕಪ್
ಮೆಂತ್ಯ- 1/2 ಚಮಚ
ಕಡಲೇ ಪುರಿ (ಮಂಡಕ್ಕಿ/ Puffed rice) – 2 ಕಪ್ ( ಮೈಸೂರು ಪುರಿ ಆದರೆ ಒಳ್ಳೆಯದು! ಅಥವಾ ಯಾವುದಾದರೂ ದಪ್ಪ ಇರುವ ಪುರಿ,)

    

ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಬೇರೆ ಬೇರೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. ಕಡಲೇ ಪುರಿ 10 ನಿಮಿಷ ನೆನೆಸಿನೀರು ಸೋರಿ ಹಾಕಿ ಅಕ್ಕಿಯ ಜೊತೆಗೆ ಸೇರಿಸಿ.

ನೆನೆಸಿದ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿ. ಕಡಲೇ ಪುರಿ ಒಂದನ್ನೇ ರುಬ್ಬಲು ಆಗುವುದಿಲ್ಲ. ಅಕ್ಕಿ ಜೊತೆಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.ರುಬ್ಬಿದ ಮಿಶ್ರಣಕ್ಕೆ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.

  

ಮರುದಿನ ಬೆಳಿಗ್ಗೆ ಕಾವಲಿಯನ್ನು ಬಿಸಿಯಾಗಲು ಇಡಿ. ಕಾದ ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಒರೆಸಿಬಿಡಿ. ದೋಸೆ ಹಿಟ್ಟಿಗೆ ಚಿಟಿಕೆ ಸೋಡಾ, 1/4 ಚಮಚ ಸಕ್ಕರೆ, 1 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ, ಒಂದು ಸೌಟಿನಷ್ಟು ಹಿಟ್ಟು ತೆಗೆದು ಕೊಂಡು, ಸ್ವಲ್ಪ ದಪ್ಪಗೆ ಹರಡಿ ದೋಸೆ ಮಾಡಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಒಂದು ನಿಮಿಷ ಬೇಯಿಸಿ. ನಂತರ ಒಂದು ಚಮಚ ಬೆಣ್ಣೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಬೆಣ್ಣೆ ದೋಸೆಯ ಒಳಗೆ ಹೋಗುವಂತೆ ಮೃದುವಾಗಿ ಒತ್ತಿ ದೋಸೆ ತಳಭಾಗ ಕೆಂಪಗೆ ಆದಾಗ ತಿರುವಿ ಹಾಕಿ.

  

ಎರಡೂ ಕಡೆ ಬೆಂದ ಮೇಲೆ ತೆಗೆದು ಚಟ್ನಿ, ಆಲೂಗೆಡ್ಡೆ ಪಲ್ಯದೊಂದಿಗೆ ಸವಿಯಿರಿ!

ದೋಸೆ ಹಾಕಿದ ತಕ್ಷಣ ಬೆಣ್ಣೆ ಹಾಕಬೇಡಿ, ತಳ ಸ್ವಲ್ಪ ಕೆಂಪಗಾಗಿ, ಸ್ವಲ್ಪ ಬೆಂದ ಮೇಲೆ ಬೆಣ್ಣೆ ಹಾಕಿ.

ಇದು ನಮ್ಮ ಮನೆಯಲ್ಲಿ ಮಾಡುವ ವಿಧಾನ! ಇಷ್ಟವಾದರೆ ಟ್ರೈ ಮಾಡಿ ನೋಡಿ!

 

ಆಲೂಗೆಡ್ಡೆ ಪಲ್ಯ

ಸಾಧಾರಣವಾಗಿ ಮಾಡುವ ವಿಧಾನಾನೇ! ಆದರೆ ಒಗ್ಗರಣೆ ಮತ್ತು ಅರಿಷಿಣ ಹಾಕಬಾರದು. ನೀವು ನೋಡಿರಬಹುದು ಸಾಧಾರಣವಾಗಿ ಈ ದೋಸೆಯೊಂದಿಗೆ ಕೊಡುವ ಪಲ್ಯಕ್ಕೆ ಅರಿಷಿಣ, ಒಗ್ಗರಣೆ ಹಾಕುವುದಿಲ್ಲ!

 

ಪುದೀನಾ ಚಟ್ನಿ

2 ಹಿಡಿ ಪುದೀನ, 4 ಹಸಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, 4 ಚಮಚ ಕಾಯಿ ತುರಿ, 1 ಚಮಚ ಹುರಿಗಡಲೆ, 1 ಚಮಚ ಹುರಿದು ಸಿಪ್ಪೆ ತೆಗೆದ ಕಡಲೇ ಬೀಜ, ಉಪ್ಪು, 1/2 ಹೋಳು ನಿಂಬೆ ರಸ ಹಾಕಿ ರುಬ್ಬಿ, ಒಗ್ಗರಣೆ ಸಾಸಿವೆ, ಇಂಗು ಹಾಕಿದರೆ ರುಚಿಯಾದ ಪುದೀನಾ ಚಟ್ನಿ ರೆಡಿ!

ಧನ್ಯವಾದಗಳು