ಸಾಧಾರಣವಾಗಿ ಗೋಕುಲಾಷ್ಟಮಿಯಲ್ಲಿ ನಮ್ಮ ಮನೆಯಲ್ಲಿ ಮಾಡುವ ತಿಂಡಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಬಾಯಲ್ಲಿಟ್ಟರೆ ಕರಗುವಷ್ಟು ಗರಿ ಗರಿಯಾಗಿರುತ್ತದೆ!

ಮಾಡುವ ವಿಧಾನ:-

1 ಅಳತೆ ಗಟ್ಟಿ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿಡಿ.

1/2 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿಡಿ. ಪುಡಿ ಮಾಡಿದ ಅವಲಕ್ಕಿ ಮತ್ತು ಹುರಿಗಡಲೆಯನ್ನು ಜರಡಿ ಹಿಡಿದಿಡಿ

  

2 ಅಳತೆ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ, ಪುಡಿ ಮಾಡಿದ ಅವಲಕ್ಕಿ, ಹುರಿಗಡಲೆ, 2 ಚಮಚ ಜೀರಿಗೆ, 2 ಚಮಚ ಬಿಳಿ ಎಳ್ಳು, 1/2 ಚಮಚ ಇಂಗು ಪುಡಿ, ಉಪ್ಪು, 1 ಚಮಚ ಖಾರದ ಪುಡಿ, 1 ಟೇಬಲ್ ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಹೆಸರೇ ಬೆಣ್ಣೆ ಮುರುಕು ಅಂತ ಹೆಚ್ಚು ಬೆಣ್ಣೆ ಹಾಕಿದರೆ ಸುತ್ತಲೂ ಬರುವುದಿಲ್ಲ! ಹೆಚ್ಚು ಎಣ್ಣೆ ಹೀರುತ್ತದೆ! ನಾನು ಮಾಡಿರುವುದು ಹೆಚ್ಚು ಕಡಿಮೆ 1/4 ಕೇಜಿಗಿಂತ ಹೆಚ್ಚು ಅಕ್ಕಿ ಹಿಟ್ಟನ್ನು ಹಾಕಿ. 1 ಟೇಬಲ್ ಚಮಚ ಬೆಣ್ಣೆ ಹಾಕಿದ್ದೇನೆ. ನೀವು ಹಾಕುವ ಅಕ್ಕಿ ಹಿಟ್ಟಿನ ಅಳತೆ ನೋಡಿಕೊಂಡು ಬೆಣ್ಣೆ ಹಾಕಿ ಮಾಡಿ.

ಈಗ ಬೇಕಾದರೆ ನೀವು ರುಚಿ ನೋಡಿ ಉಪ್ಪು, ಖಾರ ಬೇಕಾದರೆ ಸೇರಿಸಬಹುದು!

ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೃದುವಾದ ಚಕ್ಕುಲಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ. ಹೆಚ್ಚು ಕಡಿಮೆ 2 ರಿಂದ 2 1/4 ಅಳತೆ ನೀರು ಬೇಕಾಗಬಹುದು! ನೋಡಿಕೊಂಡು ನೀರು ಹಾಕಿ.

    

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಲೆಸಿದ ಹಿಟ್ಟನ್ನು ಚಕ್ಕುಲಿ ಒರಳಿಗೆ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಮುರುಕು ಒತ್ತಿ ಕಾದ ಎಣ್ಣೆಯಲ್ಲಿ, ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿದರೆ, ರುಚಿಯಾದ, ಮುದ್ದು ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಬೆಣ್ಣೆ ಮುರುಕು ಸಿದ್ಧ!!!

ನಾನು ಮಾಡಿರುವುದು ಚಕ್ಕುಲಿ ಬಿಲ್ಲೆಯಲ್ಲಿ! ನೀವು ಬೇಕಾದರೆ ತೇಂಗೊಳಲು ಬಿಲ್ಲೆ, ಮೂರು ಕಣ್ಣಿನ ಚಕ್ಕುಲಿ ಬಿಲ್ಲೆ ಬೇಕಾದರೆ ಹಾಕಿ ಮಾಡಬಹುದು!

ನಾನು ಹಾಕಿರುವುದು ಬ್ಯಾಡಗಿ ಮೆಣಸಿನಕಾಯಿ ಹುರಿದು ಮನೆಯಲ್ಲಿ ಪುಡಿ ಮಾಡಿರುವ ಖಾರದ ಪುಡಿ. ಹಾಗಾಗಿ ಈ ಬಣ್ಣ ಬಂದಿದೆ! ನಿಮಗೆ ಬ್ಯಾಡಗಿ ಮೆಣಸಿನಕಾಯಿ ಹಾಕುವುದು ಆಗದಿದ್ದರೆ ಕಾಶ್ಮೀರಿ ಚಿಲ್ಲಿ ಪುಡಿ ಹಾಕಬಹುದು!

ಧನ್ಯವಾದಗಳು