ಎಲ್ಲರಿಗೂ ಇಷ್ಟವಾಗುವ ಕುರುಕಲು ತಿಂಡಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?!

ಮಾಡುವ ವಿಧಾನ:-

ಈರುಳ್ಳಿ ಸಿಪ್ಪೆ ತೆಗೆದು ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

ಸ್ವಲ್ಪ ಕೊತ್ತಂಬರಿ, ಕರಿಬೇವು ಹೆಚ್ಚಿಡಿ.

  

ಬಟ್ಟಲಿನಲ್ಲಿ 1 ಅಳತೆ ಕಡಲೇ ಹಿಟ್ಟು, 1/2 ಅಳತೆ ಅಕ್ಕಿ ಹಿಟ್ಟು ಜರಡಿ ಹಿಡಿದಿಡಿ.

1 ಚಿಕ್ಕ ಬಟ್ಟಲಿನಲ್ಲಿ 1 ಚಮಚ ತುಪ್ಪ, ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ, ಕಡಲೇ ಹಿಟ್ಟಿಗೆ ಸೇರಿಸಿ.

ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, 2 ಚಮಚ ಖಾರದ ಪುಡಿ ( ನಿಮಗೆ ಬೇಕಾಗುವಷ್ಟು ಖಾರಾ), ಉಪ್ಪು , 1 ಚಮಚ ಧನಿಯಾ ( Optional, ಹಾಕಿದರೆ ತುಂಬಾ ಚೆನ್ನಾಗಿರುತ್ತದೆ. ಹುರಿಯುವ ಅಗತ್ಯವಿಲ್ಲ) ಎಲ್ಲಾ ಸೇರಿಸಿ ಕೈಯಿಂದ ಚೆನ್ನಾಗಿ ಕಲೆಸಿ.

ಕಲೆಸಿದ ಮಿಶ್ರಣವನ್ನು ಸ್ವಲ್ಪ ಬೇರೆ ಬಟ್ಟಲಿನಲ್ಲಿ ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ನೀರು ಚಿಮುಕಿಸುತ್ತಾ ಕಾದ ಎಣ್ಣೆಯಲ್ಲಿ ಬಿಡಿ ಬಿಡಿಯಾಗಿ ಹಾಕಿ ಮಧ್ಯಮ ಉರಿಯಲ್ಲಿ ಗರಿ ಗರಿಯಾಗುವಂತೆ ಕರಿಯಿರಿ.

ಇದೇ ರೀತಿ ಮಿಕ್ಕ ಮಿಶ್ರಣದಿಂದ ಗರಿ ಗರಿಯಾದ ಈರುಳ್ಳಿ ಪಕೋಡ ಮಾಡಿ ಚಟ್ನಿ/ ಸಾಸ್ ಜೊತೆಗೆ ಸವಿಯಿರಿ.

ಕಡಲೇ ಮಿಶ್ರಣಕ್ಕೆ ಒಟ್ಟಿಗೆ ನೀರು ಹಾಕಿದರೆ ಮೆತ್ತಗಾಗುತ್ತೆ. ಸ್ವಲ್ಪ ಸ್ವಲ್ಪವೇ ಭಾಗ ಮಾಡಿಕೊಂಡು ಕರಿದರೆ ಒಳ್ಳೆಯದು!

ಧನ್ಯವಾದಗಳು