ಸಂಜೆ ಹೊತ್ತಿಗೆ ಹೊತ್ತು ಕಳೆಯಲು ಏನಾದರೂ ಸ್ವಲ್ಪ ರುಚಿಯಾದದ್ದು ತಿನ್ನಬೇಕೆನೆಸಿದಾಗ ಹೀಗೆ ಮಾಡಿ ನೋಡಿ!

ಈಗ ಎಲ್ಲೆಡೆ ಸೊಗಡು ಅವರೆ ಕಾಯಿ ಮತ್ತು ಹೊಸ ಕಡಲೇ ಕಾಯಿ ರಾಶಿ ರಾಶಿ! ಅವರೆ ಕಾಯಿಯ ಸೊಗಡು ಇರುವುದೇ ಆ ಕಾಯಿಯ ಸಿಪ್ಪೆಯಲ್ಲಿ! ಅವರೆ ಕಾಯಿ ಬಿಡಿಸಿ ಕೈ ತೊಳೆದರೂ ಅದರ ಸೊಗಡು ಕೈಯಲ್ಲೇ ಇರುತ್ತದೆ!

ಹಾಗಾದರೆ ಅಂತಹ ಸೊಗಡಿರುವ ಅವರೆ ಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿದರೆ ಹೇಗಿರುತ್ತೆ!? ಜೊತೆಗೆ ಹೊಸ ಕಡಲೇ ಕಾಯಿ! ಉಪ್ಪು ತುಂಬಿದ ಕಡಲೇಕಾಯಿ ಅಂದೊಡನೆ ಕೆಲವರಿಗೆ ಬಾಲ್ಯ ನೆನಪಿಗೆ ಬಂದಿರಬಹುದು! ಕಡಲೇ ಕಾಯಿಯ ಉಪ್ಪು ನೀರು ಸೊರ್ ಸೊರ್ ಎಂದು ಹೀರಿ ಅಮ್ಮನ ಕೈನಲ್ಲಿ ಬೈಸಿಕೊಂಡದ್ದು ಮರೆಯಲು ಸಾಧ್ಯವೇ!?

ಮಾಡುವ ವಿಧಾನ:-

ನಿಮಗೆ ಬೇಕಾಗುವಷ್ಟು ಸೊಗಡಿನ ಅವರೆ ಕಾಯಿಯನ್ನು ತೆಗೆದು ಕೊಳ್ಳಿ. ಸ್ವಲ್ಪ ಎಚ್ಚರಿಕೆಯಿಂದ ಕಾಯಿಯನ್ನು ನೋಡಿ ಬೇಯಲು ಹಾಕಿ. ಈಗ ಹುಳುಗಳ ಕಾಟ ಹೆಚ್ಚಾಗಿದೆ. ತೂತು ಇದ್ದರೆ ಅಂತಹ ಅವರೆ ಕಾಯಿ ಹಾಕಲೇಬೇಡಿ.

ಹೊಸ ಕಡಲೇ ಕಾಯಿಯನ್ನು ಮೂರ್ನಾಲ್ಕು ಬಾರಿ ಚೆನ್ನಾಗಿ ತೊಳೆದು, ತೊಳೆದ ಅವರೆ ಕಾಯಿ, 2 ಚಮಚ ಉಪ್ಪು, ಸಾಕಷ್ಟು ನೀರು ಹಾಕಿ ಕುಕ್ಕರಿನಲ್ಲಿ 4 ಅಥವಾ 5 ವಿಷಲ್ ಕೂಗಿಸಿಡಿ.

ನಂತರ ಬಿಸಿಯಾದ, ರುಚಿಯಾದ, ಟೈಮ್ ಪಾಸ್ ಕಡಲೆ ಅವರೆ ಕಾಯಿಯನ್ನು ( ಸಿಪ್ಪೆ ತೆಗೆದು!!!) ಸವಿಯಿರಿ!

ಬೇಕಾದರೆ ಇದರ ಜೊತೆಗೆ ಸಿಹಿ ಗೆಣಸು ಸಹ ಹಾಕಿ ಬೇಯಿಸಬಹುದು! ಸಂಕ್ರಾಂತಿ ಹಬ್ಬದಲ್ಲಿ ತಪ್ಪದೆ ಮಾಡುವ ವಿಧಾನ ಇದು!

ಧನ್ಯವಾದಗಳು