ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ!
ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ!
ರಸಂ ಪುಡಿ ಬೇಕಾಗುವ ಸಾಮಗ್ರಿಗಳು
ಬ್ಯಾಡಗಿ ಮೆಣಸಿನಕಾಯಿ – 200 ಗ್ರಾಂ
ಧನಿಯ – 4 ಟೇಬಲ್ ಚಮಚ
ಕರಿ ಮೆಣಸು – 2 ಟೇಬಲ್ ಚಮಚ
ಸಾಸಿವೆ – 2 ಟೇಬಲ್ ಚಮಚ
ಜೀರಿಗೆ – 2 ಟೇಬಲ್ ಚಮಚ
ಮೆಂತ್ಯ – 1 ಟೇಬಲ್ ಚಮಚ
ಕರಿಬೇವು – 6 ರಿಂದ 8 ಎಸಳು
ಇಂಗು – 2 ಕಡಲೇ ಬೀಜದ ಗಾತ್ರ
ಮಾಡುವ ವಿಧಾನ:-
ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ( ಮೆಣಸಿನಕಾಯಿ ಬಿಟ್ಟು) ಎಣ್ಣೆ ಹಾಕದೆ ಬೇರೆ ಬೇರೆ ಹುರಿದಿಡಿ. ಸ್ವಲ್ಪ ತಣ್ಣಗಾದ ಮೇಲೆ ತರಿ ತರಿಯಾಗಿ ಪುಡಿ ಮಾಡಿಡಿ.
ಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ಮೇಲೆ ತರಿ ತರಿಯಾಗಿ ಪುಡಿ ಮಾಡಿಡಿ.
ನಂತರ ಎರಡನ್ನೂ ಸೇರಿಸಿ ಇನ್ನೊಂದು ಬಾರಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ನಾನು ಕೇವಲ ಬ್ಯಾಡಗಿ ಮೆಣಸಿನಕಾಯಿ ಮಾತ್ರ ಹಾಕಿರುವುದು. ನೀವು ಬೇಕಾದರೆ ಕೆಂಪು ಮೆಣಸಿನಕಾಯಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಎರಡೂ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಬಹುದು.
ಅಂದ ಹಾಗೆ ನಾನು ಮೆಣಸಿನಕಾಯಿ ಹುರಿಯುವುದು Oven ನಲ್ಲಿ! 3 ರಿಂದ 4 ನಿಮಿಷ ಇಟ್ಟರೆ ಸಾಕು! ತಣ್ಣಗಾದ ನಂತರ ಪುಡಿ ಮಾಡಿದರೆ ಆಯಿತು!
ರಸಂ ಮಾಡುವ ವಿಧಾನ :-
50 ಗ್ರಾಂ ನಷ್ಟು ತೊಗರಿ ಬೇಳೆ ತೊಳೆದು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ, ಸ್ವಲ್ಪ ಮಸೆದಿಡಿ. ( Blender ಅಥವಾ ಸೌಟಿನಿಂದ)
2 ಅಥವಾ 3 ಟೋಮೇಟೋ ಸಣ್ಣಗೆ ಹೆಚ್ಚಿಡಿ.
2 ಚಮಚ ಹುಣಿಸೆ ರಸ ತೆಗೆದಿಡಿ.
ಬಾಣಲೆಯಲ್ಲಿ 2 ಚಮಚ ತುಪ್ಪ/ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಚಿಟಿಕೆ ಇಂಗು, ಅರಿಷಿಣ, ಹೆಚ್ಚಿದ ಟೋಮೇಟೋ ಹಾಕಿ,ಟೋಮೇಟೋ ಮೆತ್ತಗೆ ಆಗುವವರೆಗೂ ಬೇಯಿಸಿ, 2 ಚಮಚ ರಸಂ ಪುಡಿ, ಬೇಯಿಸಿದ ಬೇಳೆ, ಹುಣಿಸೆ ರಸ, ಚೂರು ಬೆಲ್ಲ, ಉಪ್ಪು, ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ, ರುಚಿಯಾದ ಮೈಸೂರು ರಸಂ ಸಿದ್ಧ!
ಈ ಪುಡಿಯನ್ನು ಒಟ್ಟಿಗೆ ಹೆಚ್ಚು ಮಾಡಿಡುವ ಬದಲು ಆಗಾಗ ಮಾಡಿ ಕೊಂಡರೆ ತಾಜಾ ವಾಸನೆ ಇರುತ್ತದೆ!
ಮೆಣಸಿನಕಾಯಿ ಮತ್ತು ಕರಿ ಮೆಣಸು ಎರಡು ಹಾಕುವುದರಿಂದ ಖಾರಾ ನೋಡಿ ಕೊಂಡು ನಿಮಗೆ ಬೇಕಾಗುವಷ್ಟು ಹಾಕಿ ಮಾಡಿಕೊಳ್ಳಿ!
ಧನ್ಯವಾದಗಳು
Leave A Comment