ರಾಗಿ ದಕ್ಷಿಣ ಭಾರತದ ಪ್ರಮುಖ ಬೆಳೆ! ಆರೋಗ್ಯಕರ, ದೇಹಕ್ಕೆ ತಂಪು ನೀಡುವ ಧಾನ್ಯ! ಅದರಿಂದ ಮಾಡುವ ರುಚಿಯಾದ ಮಸಾಲ ದೋಸೆಯ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:-

3 ಲೋಟ ರಾಗಿ ಕಾಳನ್ನು ಸುಮಾರು 6 ಗಂಟೆ ಕಾಲ ನೆನೆಸಿಡಿ. ರಾಗಿ ಕಾಳು ಸಿಪ್ಪೆ ಇರುವುದರಿಂದ ಸ್ವಲ್ಪ ಸಮಯ ಬೇಕು.

1 ಲೋಟ 1 ಉದ್ದಿನ ಬೇಳೆ, 2 ಚಮಚ ಗಟ್ಟಿ ಅವಲಕ್ಕಿ, 1/2 ಚಮಚ ಮೆಂತ್ಯ 2 ಗಂಟೆ ನೆನೆಸಿಡಿ.

      

ಉದ್ದಿನ ಬೇಳೆ, ಅವಲಕ್ಕಿಯನ್ನು ಮೊದಲು ನುಣ್ಣಗೆ ರುಬ್ಬಿ. ನಂತರ ರಾಗಿಯನ್ನು ಬೇರೆಯಾಗಿ ನುಣ್ಣಗೆ ರುಬ್ಬಿ. ರಾಗಿ ನುಣ್ಣಗೆ ಆಗಲು ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತದೆ. Grinder ಆದರೆ ಒಳ್ಳೆಯದು! Mixie ಯಲ್ಲಾದರೆ ಎರಡು ಬಾರಿ ರುಬ್ಬಬೇಕು. ಆದಷ್ಟೂ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.

ಮರುದಿನ ಸಾಧಾರಣ ದೋಸೆಯಂತೆ ಮಸಾಲೆ ದೋಸೆ ಮಾಡಬಹುದು.

      

 

ಕೆಂಪು ಚಟ್ನಿ

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 5 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 2 ಚಮಚ ಕಡಲೇ ಬೇಳೆ ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ , ಬೆಳ್ಳುಳ್ಳಿ, 6 ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ.

    

ನಂತರ ಸ್ವಲ್ಪ ಹುಣಿಸೆ ರಸ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಆದಷ್ಟೂ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿದರೆ ಮಸಾಲ ದೋಸೆ ಒಳಗೆ ಸವರುವ ಕೆಂಪು ಚಟ್ನಿ ಸಿದ್ಧ!

ಮಸಾಲ ದೋಸೆ ಮಾಡುವ ವಿಧಾನ:-

ಕಾವಲಿ ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಒರೆಸಿ. ನಂತರ ಸೌಟಿನಿಂದ ಹಿಟ್ಟು ತೆಗೆದು ಕೊಂಡು ಕಾವಲಿಯ ಮೇಲೆ ತೆಳ್ಳಗೆ ದೋಸೆ ಮಾಡಿ ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿಡಿ.ಒಂದು ನಿಮಿಷದ ನಂತರ ದೋಸೆ ತಿರುವಿ ಹಾಕಿ ಎಣ್ಣೆ ಸವರಿ. ಮತ್ತೊಂದು ಬಾರಿ ತಿರುವಿ ಹಾಕಿ ಕೆಂಪು ಚಟ್ನಿ ಸವರಿ ಮಧ್ಯದಲ್ಲಿ ಆಲೂ ಗೆಡ್ಡೆ ಪಲ್ಯ ಇಟ್ಟು ಮಡಚಿದರೆ, ರುಚಿಯಾದ, ಆರೋಗ್ಯಕರವಾದ ರಾಗಿ ಮಸಾಲ ದೋಸೆ ಸವಿಯಲು ಸಿದ್ಧ!