ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ ಇಲ್ಲಿದೆ! ನೀವು ಈ ಖಾರದ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 2 ವಾರವಾದರೂ ತುಂಬಾ ಚೆನ್ನಾಗಿರುತ್ತದೆ! ಬೇಕಾದಾಗ ಪಲ್ಯ, ಗೊಜ್ಜು, ಎಣ್ಣೆಗಾಯಿ ಮಾಡಿದಾಗ ಹಾಕಿಕೊಳ್ಳಬಹುದು!ಆದರೆ ಒಟ್ಟಿಗೆ ಹೆಚ್ಚು ಮಾಡಬೇಡಿ. ಬೇಕಾದಾಗ ಸ್ವಲ್ಪ ಸ್ವಲ್ಪವೇ ಮಾಡಿಕೊಂಡರೆ ತಾಜಾತನ ಇರುತ್ತದೆ!

ಮಾಡುವ ವಿಧಾನ:-

2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.

1/4 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿಡಿ/ ಹುರಿದಿಡಿ.

   

50 ಗ್ರಾಂ ನಷ್ಟು ಬ್ಯಾಡಗಿ ಮೆಣಸಿನಕಾಯಿ ಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. (ಅಥವಾ 4 ಹಿಡಿಯಷ್ಟು ಬ್ಯಾಡಗಿ ಮೆಣಸಿನಕಾಯಿ ಕಾಯಿ)

ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ ಹುರಿದು, ನಂತರ ಒಣ ಕೊಬ್ಬರಿ ಹಾಕಿ ಒಂದು ನಿಮಿಷ ಬಾಡಿಸಿ ಒಲೆಯಿಂದ ಇಳಿಸಿ.

ಸ್ವಲ್ಪ ತಣ್ಣಗಾದ ನಂತರ ಎಲ್ಲಾ ಸಾಮಗ್ರಿಗಳನ್ನು ತರಿ ತರಿಯಾಗಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

ಈ ಖಾರ ನೀವು ಮಾಡುವ ಅಡುಗೆಗೆ ಸಾಕಾಗದಿದ್ದರೆ ಅಚ್ಚ ಖಾರದ ಪುಡಿ ಸ್ವಲ್ಪ ಬೇಕಾದರೆ ಸೇರಿಸಿ ಕೊಳ್ಳಬಹುದು!

ನಾನು ಈ ಪುಡಿ ಹಾಕಿ ಮಾಡಿದ ಪಲ್ಯದ ರೆಸಿಪಿ ಹಾಕಿದ್ದೇನೆ!

ಆಲೂಗೆಡ್ಡೆ ಪಲ್ಯ

4 ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು, ಚಿಟಿಕೆ ಅರಿಷಿಣ, ಹೆಚ್ಚಿದಆಲೂಗೆಡ್ಡೆ ಹಾಕಿ ಸ್ವಲ್ಪ ಬಾಡಿಸಿ, ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

   

ನಂತರ ಬೆಂದ ಆಲೂಗೆಡ್ಡೆಗೆ ಉಪ್ಪು, 2 ಚಮಚ ಬೆಳ್ಳುಳ್ಳಿ ಖಾರಾದ ಪುಡಿ ಹಾಕಿ ಕಲೆಸಿ, ಕೊನೆಯಲ್ಲಿ ನಿಂಬೆ ರಸ ಸೇರಿಸಿದರೆ ರುಚಿಯಾದ ಆಲೂಗೆಡ್ಡೆ ಪಲ್ಯ ಸಿದ್ಧ!

ಈ ಪಲ್ಯ ಚಪಾತಿ, ರೊಟ್ಟಿಯೊಂದಿಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತುಂಬಾ ಚೆನ್ನಾಗಿರುತ್ತದೆ!

ನಾನು ಮಾಡಿರುವ ಚಪಾತಿ ನಿಮಗೆ ಮೃದುವಾಗಿ ಕಾಣುತ್ತದೆ ಅನ್ನಿಸಿದರೆ ಚಪಾತಿ ಹಿಟ್ಟನ್ನು ಕಲೆಸುವಾಗ ಒಂದು ಚಿಕ್ಕ ಚಮಚ ಕಡಲೇ ಹಿಟ್ಟು ಹಾಕಿ ಕಲೆಸಿ. ಇದರಿಂದ ಚಪಾತಿ ಮೃದುವಾಗಿ, ರುಚಿಯಾಗಿರುತ್ತದೆ. ಬಣ್ಣ ಕೂಡ ಚೆನ್ನಾಗಿರುತ್ತೆ!

ಧನ್ಯವಾದಗಳು.