VEGETABLE KURMA & GARLIC BUTTER NAAN ವೆಜಿಟೇಬಲ್ ಕುರ್ಮ ಮತ್ತು ಗಾರ್ಲಿಕ್ ಬಟರ್ ನಾನ್

ವೆಜಿಟೇಬಲ್ ಕುರ್ಮ ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತೆ. ಹೋಟೆಲ್ ಶೈಲಿ ಯಲ್ಲಿ ವಿಜಿಟೇಬಲ್ ಕುರ್ಮ ಮಾಡುವ ರೆಸಿಪಿ ಇಲ್ಲಿದೆ.

ವೆಜಿಟೇಬಲ್ ಕುರ್ಮ ಮಾಡುವ ವಿಧಾನ:-

ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು.

   

4 ಚಮಚ ಕಾಯಿ ತುರಿದಿಡಿ.

1 ಚಮಚ ಗಸಗಸೆ, 1 ಚಮಚ ಧನಿಯ ಸ್ವಲ್ಪ ಹುರಿದು, ಬೆಚ್ಚಗೆ ಇರುವಾಗಲೇ ನುಣ್ಣಗೆ ಪುಡಿ ಮಾಡಿ, ಕಾಯಿತುರಿ, 1/2 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, 2 ಎಸಳು ಬೆಳ್ಳುಳ್ಳಿ, 10 ಗೋಡಂಬಿ ಅಥವಾ 1 ಚಮಚ ಹುರಿಗಡಲೆ ( ನಾನು ಗೋಡಂಬಿ ಹಾಕಿರೋದು) 1/4 ಚಮಚ ಸೋಂಪು, 3 ಹಸಿ ಮೆಣಸಿನ ಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

   

 

1 ಈರುಳ್ಳಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ ಹಾಕಿ (ಈ ಮೂರು ಪದಾರ್ಥಗಳನ್ನು ಬಡಿಸುವಾಗ ತೆಗೆದು ಬಿಡಿ, ತಿನ್ನುವಾಗ ಸಿಕ್ಕರೆ ಖಾರಾ ಆಗುತ್ತೆ) ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ, 1/2 ಚಮಚ ಖಾರದ ಪುಡಿ, ಬೆಂದ ತರಕಾರಿ, ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿದರೆ, ರುಚಿಕರವಾದ ಹೋಟೆಲ್ ಶೈಲಿ ವೆಜಿಟೇಬಲ್ ಕುರ್ಮ ಸಿದ್ಧ!

ನಿಮಗೆ ಸಮಯವಿದ್ದರೆ ತರಕಾರಿಗಳನ್ನು ಈರುಳ್ಳಿ, ಟೋಮೇಟೋ ಹಾಕಿದ ನಂತರ, ಒಗ್ಗರಣೆಯಲ್ಲಿ ಬೇಯಿಸಬಹುದು. ಸಮಯದ ಅಭಾವ ಇರುವವರು ಕುಕ್ಕರಿನಲ್ಲಿ ಬೇಯಿಸಿ ಮಾಡಬಹುದು. ಈ ಕುರ್ಮ ಜೀರಾ ರೈಸ್, ಘೀ ರೈಸ್ ಜೊತೆ ಕೂಡಾ ತುಂಬಾ ಚೆನ್ನಾಗಿರುತ್ತೆ.

 

ಗಾರ್ಲಿಕ್ ಬಟರ್ ನಾನ್ ( ON TAWA)

ಮಾಡುವ ವಿಧಾನ:- ಸಾಧಾರಣವಾಗಿ ನಾನ್ ಎಲ್ಲರೂ ಮೈದಾ ಹಾಕಿ ಮಾಡಿ, ತಂದೂರಿ ಒಲೆಯಲ್ಲಿ ಮಾಡುತ್ತಾರೆ. ಗೋಧಿ ಹಿಟ್ಟು, ಮೈದಾ ಹಿಟ್ಟು ಹಾಕಿ, ತವಾ ಮೇಲೆ ಮಾಡುವುದು ಈ ರೆಸಿಪಿಯ ವಿಶೇಷತೆ!

   

1 ಅಳತೆ ಗೋಧಿ ಹಿಟ್ಟು, 1 ಅಳತೆ ಮೈದಾ ಹಿಟ್ಟು, 1 ಚಮಚ ಬೇಕಿಂಗ್ ಪೌಡರ್, 1/4 ಚಮಚ ಸೋಡಾ, ಉಪ್ಪು, 1/2 ತಾಜಾ ಮೊಸರು + 1/2 ಬೆಚ್ಚನೆಯ ಹಾಲು ಹಾಕಿ ಮೆತ್ತಗೆ ಹಿಟ್ಟು ಕಲೆಸಿ, (ನೀರಿನ ಬದಲು ಹಾಲು ಮೊಸರು ಹಾಕಿ)1 ಚಮಚ ಎಣ್ಣೆ ಕಲಸಿದ ಹಿಟ್ಟಿನ ಮೇಲೆ ಹಾಕಿ, ಒದ್ದೆ ಬಟ್ಟೆ ಹಾಕಿ 1 ಗಂಟೆ ನೆನೆಸಿಡಿ.

4 ಬೆಳ್ಳುಳ್ಳಿ ಸಿಪ್ಪೆ ತೆಗೆದು ಆದಷ್ಟೂ ಸಣ್ಣಗೆ ಹೆಚ್ಚಿಡಿ. ಕೊತ್ತಂಬರಿ ಸೊಪ್ಪು ಹೆಚ್ಚಿಡಿ.

   

1 ಗಂಟೆಯ ನಂತರ ಹಿಟ್ಟನ್ನು ಸ್ವಲ್ಪ ನಾದಿ, ಚಪಾತಿ ಉಂಡೆ ಅಳತೆ ಹಿಟ್ಟು ತೆಗೆದು ಕೊಂಡು ಆಯುತಾಕಾರದಲ್ಲಿ (OVAL SHAPE) ನಲ್ಲಿ ಚಪಾತಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹರಡಿ, ಒದ್ದೆ ಕೈಯಿಂದ ಸ್ವಲ್ಪ ಒತ್ತಿ, ಬೆಳ್ಳುಳ್ಳಿ ಹಾಕಿರುವ ಭಾಗವನ್ನು ಹೆಂಚಿನ ಮೇಲೆ ಹಾಕಿ. ಗುಳ್ಳೆಗಳು ಬಂದಾಗ ನಿಧಾನವಾಗಿ ತಿರುವಿ ಹಾಕಿ‌. ನಾನ್ ಪೂರ್ತಿ ಬೆಂದಾಗ ತೆಗೆದು, ಬೆಳ್ಳುಳ್ಳಿ ಹಾಕಿರುವ ಕಡೆಗೆ ಬೆಣ್ಣೆ ಸವರಿ ವೆಜಿಟೇಬಲ್ ಕುರ್ಮ ಜೊತೆ ತಿನ್ನಲು ಕೊಡಿ.

      

ಯಾವಾಗಲಾದರು ಒಮ್ಮೆ ಮೈದಾ ತಿನ್ನಬಹುದು ಎನ್ನುವವರು, ಗೋಧಿ ಹಿಟ್ಟಿನ ಬದಲು ಕೇವಲ ಮೈದಾ ಹಾಕಿ ಮಾಡಬಹುದು. ಮೆತ್ತಗೆ ತುಂಬಾ ಚೆನ್ನಾಗಿರುತ್ತೆ!

ಬೆಳ್ಳುಳ್ಳಿ ಇಷ್ಟವಾಗದವರು, ನಾನ್ ಲಟ್ಟಿಸಿ ಹಾಗೇ ಮಾಡಿಕೊಂಡು ಬೆಣ್ಣೆ ಹಾಕಿ ಮಾಡಬಹುದು.

ಬೆಳ್ಳುಳ್ಳಿ ಹೆಚ್ಚಿದ ನಂತರ ಚೂರು ಬೆಣ್ಣೆ ಹಾಕಿ ಸ್ವಲ್ಪ ಹುರಿದು ಹಾಕಿ ಬೇಕಾದರೂ ಮಾಡಬಹುದು.

ಧನ್ಯವಾದಗಳು.

Leave a Comment

%d bloggers like this: