ನನಗೆ ಬಹಳ ಇಷ್ಚವಾದ ಆಹಾರ! ಹೋಟೆಲ್ ಗಳಲ್ಲಿ ಬಿರಿಯಾನಿ ಜೊತೆ ಶೇರ್ವಾ/ಶೋರ್ಬಾ ಗ್ರೇವಿ ಕೊಡುತ್ತಾರೆ. ಆ ಎರಡೂ ರೆಸಿಪಿ ಒಟ್ಟಿಗೆ!

ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ:-

       

ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ.

1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ.

12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ)

2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ.

4 ಚಮಚ ಪುದೀನಾ, ಕೊತ್ತಂಬರಿ ಸೊಪ್ಪು ತೊಳೆದು ಚಿಕ್ಕದಾಗಿ ಹೆಚ್ಚಿಡಿ.

1/4 ಕೇಜಿ ಬಾಸುಮತಿ ಅಕ್ಕಿ ತೊಳೆದಿಡಿ. (1 ಲೋಟ )

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದು, ನಂತರ ತರಕಾರಿಗಳನ್ನು ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ 1 ಚಮಚ Ginger garlic paste, 1/2 ಲೋಟ ತಾಜಾ ಮೊಸರು, 1 ಚಮಚ ಧನಿಯಾ ಪುಡಿ, 1 ಚಮಚ ಗರಂ ಮಸಾಲ, 2 ಚಮಚ ಖಾರಾ ಪುಡಿ, 1 ಚಮಚ ಬಿರಿಯಾನಿ ಪುಡಿ (ರೆಡಿ ಮೇಡ್ ಸಿಗುತ್ತೆ, Evetest, M T R company ದು, ವೆಜ್ ಅಂತ ಕೇಳಿ), ಉಪ್ಪು ಹಾಕಿ ಕಲೆಸಿ ತರಕಾರಿ ಮಿಶ್ರಣ ಸಿದ್ಧ ಮಾಡಿಡಿ.

      

 

ಕುಕ್ಕರಿನಲ್ಲಿ 2 ಚಮಚ ತುಪ್ಪ ಹಾಕಿ, 1 ಪಲಾವ್ ಎಲೆ, 1/2 ಇಂಚು ಚಕ್ಕೆ, 2 ಲವಂಗ, 1 ಏಲಕ್ಕಿ ಹಾಕಿ ಹುರಿದು,(ಇಷ್ಟನ್ನು ಬಡಿಸುವ ಮುನ್ನ ತೆಗೆದು ಬಿಡಿ) ತರಕಾರಿ ಮಿಶ್ರಣ ಅರ್ಧ ಹಾಕಿ, ಅದರ ಮೇಲೆ ಅರ್ಧ ಅಕ್ಕಿ ಹಾಕಿ, ಮೇಲೆ ಅರ್ಧ ಹುರಿದ ಈರುಳ್ಳಿ, ಸ್ವಲ್ಪ ಪುದೀನಾ ಹಾಕಿ. ಅದರ ಮೇಲೆ ಉಳಿದ ತರಕಾರಿ ಮಿಶ್ರಣ, ಅದರ ಮೇಲೆ ಉಳಿದ ಅಕ್ಕಿ, ಉಳಿದ ಈರುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ಗೋಡಂಬಿ, ಕುಂಕುಮ ಕೇಸರಿ ನೆನೆಸಿದ ಹಾಲು, 1 ಚಮಚ ತುಪ್ಪ, ಸ್ವಲ್ಪ ಬಿರಿಯಾನಿ ಪುಡಿ, 1 1/2 ಲೋಟ ನೀರು, (ಮೊಸರು + ನೀರು ಸೇರಿಸಿ 2 ಲೋಟ) ಹಾಕಿ, ( ಮತ್ತೆ ಕಲೆಸಬೇಡಿ, ಇದು ಪದರ ಪದರವಾಗಿ ಇರಬೇಕು) ಕುಕ್ಕರಿನ ಮುಚ್ಚಳ ಮುಚ್ಚಿ ವೇಟ್ ಹಾಕಿ 20 ನಿಮಿಷ ಕಡಿಮೆ ಉರಿಯಲ್ಲಿ ( ಸಿಮ್) ಬೇಯಿಸಿದರೆ ರುಚಿಯಾದ ವೆಜ್ ದಮ್ ಬಿರಿಯಾನಿ ಸಿದ್ಧ!

ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಬಿರಿಯಾನಿ ಸೀದು ಹೋಗುವ ಯೋಚನೆಯಿಲ್ಲ! ಮಧ್ಯದಲ್ಲಿ ಕಲೆಸುವ ಕೆಲಸವೂ ಇಲ್ಲ! ಸರಿಯಾಗಿ ಬೆಂದಿರುತ್ತೆ!

ಮೊಸರು ಹಾಕುವುದರಿಂದ ಬಿರಿಯಾನಿ ಸ್ವಲ್ಪ ಹುಳಿ ಇರುತ್ತೆ, ನಿಮಗೆ ಹುಳಿ ಇಷ್ಟವಿಲ್ಲದಿದ್ದರೆ, ಮೆಾಸರು ಹಾಕದೆ 2 ಲೋಟ ನೀರು ಹಾಕಿ ಮಾಡಬಹುದು.

 

SHERVA/SHORBA GRAVY

ಶೇರ್ವಾ/ಶೋರ್ಬಾ ಗ್ರೇವಿ

ಸಾಮಾನ್ಯವಾಗಿ ಹೋಟೆಲ್ ನಲ್ಲಿ ಬಿರಿಯಾನಿ, ಪಲಾವ್ ಜೊತೆ ಕೊಡುತ್ತಾರೆ.

   

ಮಾಡುವ ವಿಧಾನ:-

1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿ , ಎಣ್ಣೆ ಹಾಕಿ ಹುರಿದು, 6 ಗೋಡಂಬಿ, 2 ಚಮಚ ಕಾಯಿ ತುರಿ ಜೊತೆ ನುಣ್ಣಗೆ ರುಬ್ಬಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1/2 ಚಮಚ Ginger garlic paste, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ, 1/2 ಚಮಚ ಧನಿಯಾ ಪುಡಿ, 1 ಚಮಚ ಖಾರಾ ಪುಡಿ, ರುಬ್ಬಿದ ಮಿಶ್ರಣ, ಉಪ್ಪು , ಸ್ವಲ್ಪ ನೀರು ಹಾಕಿ ಕುದಿಸಿದರೆ ರುಚಿಯಾದ ಹೋಟೆಲ್ ಶೈಲಿ ಶೇರ್ವಾ ಗ್ರೇವಿ ಸಿದ್ಧ!

ಧನ್ಯವಾದಗಳು.