ಮನೆಯಲ್ಲಿ ವಾಂಗೀ ಬಾತ್ ಪುಡಿ ಇದ್ದರೆ, ಬೇಕಾದ ತರಕಾರಿ ಸೇರಿಸಿ ಮಕ್ಕಳ ಮತ್ತು ಪತಿ ದೇವರ ಲಂಚ್ ಬಾಕ್ಸ್ ಗೆ ತಕ್ಷಣ ತಿಂಡಿ ಮಾಡಿ ಹಾಕಬಹುದು. ನಮ್ಮ ಮನೆಯಲ್ಲಿ ವಾಂಗೀ ಬಾತ್ ಪುಡಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾನು:-

ಕಡಲೇ ಬೇಳೆ – 1 ಪಾವು
ಉದ್ದಿನ ಬೇಳೆ – 1/2 ಪಾವು
ಧನಿಯ – 2 ಟೇಬಲ್ ಚಮಚ
ಚಕ್ಕೆ – 2 ಇಂಚು
ಲವಂಗ – 10 ರಿಂದ 12
ಕೊಬ್ಬರಿ – 2 ಗಿಟುಕು (2 halves)
ಒಣ ಮೆಣಸಿನ ಕಾಯಿ – 300 ಗ್ರಾಂ ( ಕೆಂಪು + ಬ್ಯಾಡಗಿ ಮೆಣಸಿನ ಕಾಯಿ ಸೇರಿಸಿ)
ನಿಮಗೆ ಬೇಕಾದ ಗರಂ ಮಸಾಲ ಸಾಮಾನುಗಳನ್ನು ಹೆಚ್ಚು ಸೇರಿಸಿ ಕೊಳ್ಳಿ.

ಮಾಡುವ ವಿಧಾನ:-

ಕಡಲೇ ಬೇಳೆ, ಉದ್ದಿನ ಬೇಳೆ, ಧನಿಯ, ಚಕ್ಕೆ, ಲವಂಗ, ಎಣ್ಣೆ ಹಾಕದೆ, ಬೇರೆ ಬೇರೆ ಕೆಂಪಗೆ ಹುರಿದಿಡಿ. ಕೊಬ್ಬರಿ ತುರಿ ಸ್ವಲ್ಪ ಬಿಸಿ ಮಾಡಿಡಿ.

   

ಒಣ ಮೆಣಸಿನ ಕಾಯಿ ಬಿಸಿಲಿನಲ್ಲಿ ಒಣಗಿಸಿ, ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ಹಾಕಿ, ಗರಿ ಗರಿಯಾಗಿ ಹುರಿದು ಸ್ವಲ್ಪ ಪುಡಿ ಮಾಡಿ, ಹುರಿದ ಇತರ ಸಾಮಾನುಗಳೊಂದಿಗೆ ಸೇರಿಸಿ, ಕಲೆಸಿ, ಇನ್ನೊಮ್ಮೆ ಪುಡಿ ಮಾಡಿ. ಎಲ್ಲಾ ಪುಡಿ ಮಾಡಿಯಾದ ಮೇಲೆ, ಚೆನ್ನಾಗಿ ಕಲೆಸಿ ಡಬ್ಬದಲ್ಲಿ ಹಾಕಿಡಿ. ಖಾರಾ ಹೆಚ್ಚು ಬೇಕೆಂದರೆ ಬಾತ್ ಗೆ ಒಗ್ಗರಣೆಗೆ ಸ್ವಲ್ಪ ಖಾರಾ ಪುಡಿ ಸೇರಿಸಿ ಕೊಳ್ಳಿ. ಸಾಧಾರಣವಾಗಿ ಇಷ್ಟು ಖಾರಾ ಸಾಕಾಗುತ್ತೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಮಾಡಿ ಕೊಳ್ಳಿ.

ಇದೇ ಪುಡಿ ಉಪಯೋಗಿಸಿ ಮಾಡಿದ ನಮ್ಮ ಮನೆಯ ಟೊಮೇಟೋ ಬಾತ್ ರೆಸಿಪಿ ಹಾಕಿದ್ದೇನೆ.

 

ಟೊಮೇಟೋ ಬಾತ್ ಮಾಡುವ ವಿಧಾನ:-

1 ಲೋಟ ಅಕ್ಕಿ ಹಾಕಿ ಅನ್ನ ಮಾಡಿಡಿ. 4 ಟೊಮೇಟೋ, 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 5 ಚಮಚ ಎಣ್ಣೆ ಹಾಕಿ, ಒಗ್ಗರಣೆಗೆ ಸಾಸಿವೆ, ಇಂಗು,ಚಿಟಿಕೆ ಅರಿಶಿಣ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಈರುಳ್ಳಿ ಹಾಕಿ ಒಂದರೆಡು ನಿಮಿಷ ಬಾಡಿಸಿ, ಟೊಮೇಟೋ ಹಾಕಿ ಬಾಡಿಸಿ, 4 ಅಥವಾ 5 ಚಮಚ ಬಾತಿನ ಪುಡಿ, ಉಪ್ಪು ಹಾಕಿ, ಸ್ವಲ್ಪ ಬಾಡಿಸಿ, (ಬೇಕಾದಲ್ಲಿ 1/2 ನಿಂಬೆ ರಸ ಹಾಕಿ,) ಮಾಡಿಟ್ಟ ಅನ್ನ ಹಾಕಿ ಕಲೆಸಿ, ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಟೊಮೇಟೋ ಬಾತ್ ಸಿದ್ಧ! ಮೆಾಸರು/ಮೊಸರು ಬಜ್ಜಿ ಜೊತೆ ಚೆನ್ನಾಗಿರುತ್ತದೆ. ನಮ್ಮ ಮನೆಯಲ್ಲಿ ಹೆಚ್ಚು ಖಾರಾ ತಿನ್ನುವುದಿಲ್ಲ, ಹಾಗಾಗಿ ಸ್ವಲ್ಪ ಬ್ಯಾಡಗಿ ಮೆಣಸಿನ ಕಾಯಿ ಹೆಚ್ಚು ಹಾಕಿ, ಕೆಂಪು ಮೆಣಸಿನ ಕಾಯಿ ಕಡಿಮೆ ಹಾಕುತ್ತೇವೆ. ಬ್ಯಾಡಗಿ ಮೆಣಸಿನ ಕಾಯಿ ಹೆಚ್ಚು ಹಾಕಿರುವುದರಿಂದ ಕೆಂಪು ಬಣ್ಣ ಬಂದಿದೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಮೆಣಸಿನ ಕಾಯಿ ಹಾಕಿ ಮಾಡಿ.

ಇದೇ ರೀತಿ ಬದನೇ ಕಾಯಿ, ಆಲೂಗೆಡ್ಡೆ ಹಾಕಿ ವಾಂಗೀ ಬಾತ್ ಮಾಡಬಹುದು.

ದಪ್ಪ ಮೆಣಸಿನ ಕಾಯಿ, ಬಟಾಣಿ ಹಾಕಿ ಕ್ಯಾಪ್ಸಿಕಮ್ ಬಾತ್ ಮಾಡಬಹುದು.

ಮಿಶ್ರ ತರಕಾರಿಗಳನ್ನು ಹಾಕಿ ಮಿಕ್ಸ್ ವೆಜ್ ಬಾತ್ ಮಾಡಬಹುದು.

ಇದೇ ಪುಡಿ ಹಾಕಿ ರವಾ ವಾಂಗೀ ಬಾತ್ ಕೂಡ ಮಾಡಬಹುದು. ಸಾಧಾರಣವಾಗಿ ಮಾಡುವ ಹಾಗೆ, ಉಪ್ಪಿಟ್ಟು ಒಗ್ಗರಣೆ ಹಾಕಿ, ಹೆಚ್ಚಿದ ತರಕಾರಿ ಹಾಕಿ ಬಾಡಿಸಿ, ಹಸಿ ಮೆಣಸಿನ ಕಾಯಿ ಹಾಕದೆ ಈ ಬಾತಿನ ಪುಡಿ ಹಾಕಿ ಉಪ್ಪಿಟ್ಟು ಮಾಡಿದರೆ, ರುಚಿಯಾದ ರವಾ ವಾಂಗೀ ಬಾತ್ ಸಿದ್ಧವಾಗುತ್ತೆ. ಮಾಡಿ ನೋಡಿ.

ಧನ್ಯವಾದಗಳು.