ಮಾಡುವ ವಿಧಾನ:-
1 ಪಾವು ಅಕ್ಕಿ ತೊಳೆದು, 2 ಅಳತೆ ನೀರು ಸೇರಿಸಿ ಅನ್ನ ಮಾಡಿಡಿ.
1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಧನಿಯ, 1/2 ಚಮಚ ಮೆಂತ್ಯ, 1/4 ಚಮಚ ಕಪ್ಪು ಮೆಣಸು, 2 ಚಮಚ ಬಿಳಿ ಎಳ್ಳು (ಕಪ್ಪು ಎಳ್ಳು+ ಉಚ್ಚೆಳ್ಳು(ಗುರೆಳ್ಳು) ಸೇರಿಸಿ ಕೂಡ ಹಾಕಬಹುದು, ತುಂಬಾ ಚೆನ್ನಾಗಿರುತ್ತದೆ), 6 ರಿಂದ 8 ಒಣ ಮೆಣಸಿನ ಕಾಯಿ (ಕೆಂಪು+ ಬ್ಯಾಡಗಿ), ಇಷ್ಟು ಸಾಮಾನುಗಳನ್ನು 1 ಚಮಚ ಎಣ್ಣೆ ಹಾಕಿ ಕೆಂಪಗೆ ಹುರಿದು, ತಣ್ಣಗಾದ ಮೇಲೆ ಪುಡಿ ಮಾಡಿಡಿ. ಮೊದಲು ಕಡಲೇ ಬೇಳೆ, ಮೆಣಸು, ಉದ್ದಿನ ಬೇಳೆ, ಧನಿಯ, ಕೊನೆಯಲ್ಲಿ ಮೆಂತ್ಯ, ಎಳ್ಳು ಹಾಕಿ ಹುರಿಯಿರಿ, ಮೆಣಸಿನ ಕಾಯಿ ಬೇರೆ ಹುರಿದು ನಂತರ ಪುಡಿ ಮಾಡಿ.(ಎಲ್ಲಾ ಟೇಬಲ್ ಚಮಚ ಅಳತೆ)
ಅನ್ನವನ್ನು ದೊಡ್ಡ ತಟ್ಟೆ ಅಥವಾ ಪಾತ್ರೆಯಲ್ಲಿ ಹರಡಿ ಇಡಿ.
ನಿಂಬೆ ಹಣ್ಣಿಗಿಂತ ಸ್ವಲ್ಪ ದೊಡ್ಡ ದಪ್ಪ ಹುಣಿಸೆ ಹಣ್ಣನ್ನು( ಹಳೆಯ ಹುಣಿಸೆ ಹಣ್ಣು/ಕಪ್ಪು ಬಣ್ಣ ಆದರೆ ಒಳ್ಳೆಯದು) ಬಿಸಿ ನೀರಲ್ಲಿ ನೆನೆಸಿ, ಗಟ್ಟಿ ರಸ ತೆಗೆದಿಡಿ.
ಬಾಣಲೆಯಲ್ಲಿ 5 ಚಮಚ ಎಣ್ಣೆ/ಎಳ್ಳೆಣ್ಣೆ ಹಾಕಿ, ಕಾದ ನಂತರ, 1 ಹಿಡಿಯಷ್ಟು ಕಡಲೇ ಬೀಜ ಹಾಕಿ, ಸ್ವಲ್ಪ ಕೆಂಪಾದ ಮೇಲೆ ಸಾಸಿವೆ, ಇಂಗು, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, 2 ಮುರಿದ ಬ್ಯಾಡಗಿ ಮೆಣಸಿನ ಕಾಯಿ, ಚಿಟಿಕೆ ಅರಿಶಿಣ ಹಾಕಿ ಹುಣಿಸೆ ರಸ, ಚೂರು ಬೆಲ್ಲ, ಉಪ್ಪು ಹಾಕಿ ಕುದಿಸಿ, ಸ್ವಲ್ಪ ಗಟ್ಟಿಯಾಗಿ ಎಣ್ಣೆ ಅಂಚು ಬಿಡುವಾಗ, ಒಲೆಯಿಂದ ತೆಗೆದು ಅನ್ನದ ಮೇಲೆ ಹಾಕಿ ಕಲೆಸಿ.
ನಂತರ ಪುಡಿ ಮಾಡಿದ ಬೇಳೆ ಮಿಶ್ರಣವನ್ನು ಹಾಕಿ ಕಲೆಸಿ. ನಿಮಗೆ ಖಾರಾ ಎಷ್ಟು ಬೇಕೋ ಅಷ್ಟು ಹಾಕಿ, ಪುಡಿ ಹೆಚ್ಚೆನಿಸಿದರೆ, ಸ್ವಲ್ಪ ಉಳಿಸಿ. 15 ನಿಮಿಷದ ನಂತರ ತಿನ್ನಿ. ಪುಡಿಯ ರುಚಿ ಅನ್ನಕ್ಕೆ ಬರಲು ಸ್ವಲ್ಪ ಸಮಯ ಬೇಕು. ಮೇಲೆ ಹೇಳಿರುವ ಪುಡಿಯ ಅಳತೆ ಸಾಧಾರಣವಾಗಿ ಒಂದು ಪಾವು ಅಕ್ಕಿಗೆ ಸಾಕಾಗುತ್ತೆ. ನಿಮ್ಮ ರುಚಿಗೆ ತಕ್ಕ ಹಾಗೆ ಪುಡಿ ಹಾಕಿ ಮಾಡಿ.
ಮಾಡಿದ ಅನ್ನವಿದ್ದರೆ 10 ನಿಮಿಷದಲ್ಲಿ ಮಾಡಬಹುದು.
ದಯವಿಟ್ಟು ಮನೆಯಲ್ಲಿ ಮಾಡಿದ ಪುಳಿಯೋಗರೆಯನ್ನು ದೇವಸ್ಥಾನದ ಪುಳಿಯೋಗರೆಗೆ ಹೋಲಿಸಬೇಡಿ. ದೇವಸ್ಥಾನದ ಪ್ರಸಾದಕ್ಕೆ ಅದರದೇ ಆದ ಮಹತ್ವವಿದೆ! ಬೇರೆಯವರಿಂದ ಕಲಿತಿದ್ದನ್ನು ನಾನು ಇಲ್ಲಿ ಹಾಕಿದ್ದೇನೆ.
ಧನ್ಯವಾದಗಳು.
Leave A Comment