SABUDANA IDLI ಸಾಬುದಾನ ಇಡ್ಲಿ
ಮಾಡುವ ವಿಧಾನ:-
ಮೊದಲನೆಯ ವಿಧಾನ:-
1 ಅಳತೆ ಸಾಬುದಾನವನ್ನು 1 ಚಮಚ ತುಪ್ಪ ಹಾಕಿ ಎರಡು ಮೂರು ನಿಮಿಷ ಹುರಿದಿಡಿ. 1 ಅಳತೆ ಇಡ್ಲಿ ರವೆ ಜೊತೆ ಸೇರಿಸಿ, 2 1/2 ಅಳತೆ ತಾಜಾ ಮೊಸರು ಹಾಕಿ, ಚೆನ್ನಾಗಿ ಕಲೆಸಿ ರಾತ್ರಿ ಪೂರ ನೆನೆಯಲು ಬಿಡಿ. ಬೆಳಗ್ಗೆ ಬೇಕಾದರೆ ಸ್ವಲ್ಪ ನೀರು ಹಾಕಿ, ಉಪ್ಪು ಚಿಟಿಕೆ ಸೋಡಾ ಹಾಕಿ ಕಲೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿ ಸಾಮಾನ್ಯವಾಗಿ ಮಾಡುವ ಹಾಗೇ 10 ರಿಂದ 12 ನಿಮಿಷ ಬೇಯಿಸಿ ಇಡ್ಲಿ ಮಾಡಿ.
ಎರಡನೆಯ ವಿಧಾನ:-
ಮೀಡಿಯಂ ರವೆ ಹಾಕಿ ಮಾಡಿ ಬೇಕಾದರೂ ಇಡ್ಲಿ ಮಾಡಬಹುದು. ರವೆ ಸ್ವಲ್ಪ ಹುರಿದು ಸಾಬುದಾನ ಜೊತೆ ಸೇರಿಸಿ ಮೊಸರು ಹಾಕಿ ಕಲೆಸಿ, ರಾತ್ರಿ ಪೂರ ನೆನೆಸಿ ಮೇಲೆ ಹೇಳಿದಂತೆ ಮಾಡಬಹುದು. ಅಳತೆ ಕೂಡಾ ಹಾಗೇನೆ. ಇದಕ್ಕೆ ಒಗ್ಗರಣೆಗೆ ಜೀರಿಗೆ, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ , ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು, ತಣ್ಣಗಾದ ಮೇಲೆ ಉಪ್ಪು, ಚಿಟಿಕೆ ಸೋಡಾ ಹಾಕಿ ಕಲೆಸಿ ರವೆ ಇಡ್ಲಿಯ ಹಾಗೇ ಮಾಡಬಹುದು. ಬೇಕಾದರೆ ತುರಿದ ಕ್ಯಾರೆಟ್, ಕಾಯಿ ತುರಿ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುತ್ತೆ
ಮೂರನೆ ವಿಧಾನ:-
ಕೇವಲ ಸಾಬುದಾನ ಮಾತ್ರ ಹುರಿದು, 1 1/2 ಅಳತೆ ತಾಜಾ ಮೊಸರು ಹಾಕಿ ರಾತ್ರಿ ಪೂರ ನೆನೆಸಿ. ಬೆಳಗ್ಗೆ ಒಗ್ಗರಣೆಗೆ ಜೀರಿಗೆ, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ, ಉಪ್ಪು ಹಾಕಿ ಕಲೆಸಿ, ಬೇಕಾದರೆ ಸ್ವಲ್ಪ ನೀರು ಸೇರಿಸಿ ಇಡ್ಲಿ ಹದಕ್ಕೆ ಕಲೆಸಿ, ಸಾಮಾನ್ಯವಾಗಿ ಮಾಡುವಂತೆ ಇಡ್ಲಿ ಮಾಡಿ. ಈ ರೀತಿ ಮಾಡಿದ ಇಡ್ಲಿ ಸ್ವಲ್ಪ ಮೆತ್ತಗೆ ಇರುತ್ತೆ! ಉಬ್ಬೋಲ್ಲ! ವಿಧಾನ 1, 2 ರಂತೆ ಮಾಡಿದರೆ ರವೆ ಇರುವ ಕಾರಣ ಉಬ್ಬುತ್ತೆ!
ಹಸಿರು ತಟ್ಟೆಯಲ್ಲಿ ಇರುವುದು ರವೆ ಹಾಕಿ ಮಾಡಿದ ಇಡ್ಲಿ, ಒಂದೇ ಒಂದು ಇರುವುದು ಇಡ್ಲಿ ರವೆ ಹಾಕಿ ಮಾಡಿರೋದು, ಮೂರು ಇರೋದು ಮೀಡಿಯಂ ರವೆ ಹಾಕಿ ಒಗ್ಗರಣೆ ಹಾಕಿ ಮಾಡಿರೋದು. ಕೆಂಪು ತಟ್ಟೆಯಲ್ಲಿ ಇರೋದು ಸಾಬುದಾನ ಮಾತ್ರ ಹಾಕಿ ಮಾಡಿರೋದು. ನೋಡಿ ಮೂರು ತರಹ ಮಾಡೋದು ಫೋಟೋ ಇದೆ, ನಿಮಗೆ ಬೇಕಾದ ರೀತಿ ಮಾಡಿಕೊಳ್ಳಿ. ಹೇಗೆ ಮಾಡಿದರೂ ಚೆನ್ನಾಗಿರುತ್ತೆ.
ನೀವು ಯಾವುದೇ ವಿಧಾನದಲ್ಲಿ ಮಾಡಿದರೂ ಸಾಬುದಾನ ಸ್ವಲ್ಪ ಹುರಿದು ಮಾಡಿ.
ಟೋಮೇಟೋ ಚಟ್ನಿ ಮಾಡುವ ವಿಧಾನ:-
2 ಟೋಮೇಟೋ ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, 4 ಹಸಿ ಮೆಣಸಿನ ಕಾಯಿ, 2 ಎಸಳು ಬೆಳ್ಳುಳ್ಳಿ, ಟೋಮೇಟೋ, ಉಪ್ಪು ಹಾಕಿ ಹುರಿದು ತಣ್ಣಗಾದ ಮೇಲೆ ನೀರು ಹಾಕದೆ ನುಣ್ಣಗೆ ರುಬ್ಬಿದರೆ ರುಚಿಕರವಾದ ಟೋಮೇಟೋ ಚಟ್ನಿ ಸಿದ್ಧ!
ಟೋಮೇಟೋ ಕಾಯಿ ಹಾಕಿ ಇದೇ ರೀತಿ ಮಾಡಿದರೆ ತುಂಬಾ ಚೆನ್ನಾಗಿರುತ್ತೆ.
ಧನ್ಯವಾದಗಳು.