ದೋಸೆ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಸಾಬೂದಾನ ದೋಸೆ ಸ್ವಲ್ಪ ವಿಶೇಷ! ಗರಿ ಗರಿ!

ಮಾಡುವ ವಿಧಾನ:-

1 ಲೋಟ ಸಾಬೂದಾನ, 1 ಲೋಟ ಅಕ್ಕಿ, 1/2 ಲೋಟ ಉದ್ದಿನ ಬೇಳೆ, 1/4 ಚಮಚ ಮೆಂತ್ಯ( ಬೇಕಾದರೆ ಹಾಕಿ, ಇಲ್ಲದಿದ್ದರೂ ಪರ್ವಾಗಿಲ್ಲ) ಇಷ್ಟನ್ನು ತೊಳೆದು 2 ಗಂಟೆ ನೆನೆಸಿ. ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ, 4 ಚಮಚ ಅಕ್ಕಿ ಹಿಟ್ಟು, 1/2 ಚಮಚ ಸಕ್ಕರೆ ಹಾಕಿ ತಕ್ಷಣ ಬೇಕಾದರೂ ಮಾಡಬಹುದು, ಇಲ್ಲದಿದ್ದರೆ ಸಾಧಾರಣ ದೋಸೆಯ ಹಾಗೆ, ರಾತ್ರಿ ರುಬ್ಬಿ, ಬೆಳಗ್ಗೆ ಮಾಡಬಹುದು. ತೆಳ್ಳಗೆ, ಗರಿ ಗರಿಯಾಗಿ ದೋಸೆ ಮಾಡಬಹುದು.

  

ಚಿತ್ರದಲ್ಲಿ ಇರುವ ಟೋಪಿ ದೋಸೆ ಮಾಡಬೇಕೆಂದರೆ ಎಣ್ಣೆ ಹಾಕಿ ಒಂದೇ ಕಡೆ ಕೆಂಪಗೆ ಆಗುವವರೆಗೂ ಬೇಯಿಸಿ, ಮಧ್ಯದಲ್ಲಿ ಸ್ವಲ್ಪ ಕತ್ತರಿಸಿ, ಕೋನ್ ಆಕಾರದಲ್ಲಿ ಸುತ್ತಬೇಕು.

 

ಕದಂಬಂ ಚಟ್ನಿ

ಯಾವಾಗಲೂ ಕಾಯಿ ಚಟ್ನಿ ತಿಂದು ಬೇಸರ ಆಗಿದ್ದರೆ, ತಮಿಳುನಾಡಿನ ಶೈಲಿಯ ಈ ಚಟ್ನಿ ಮಾಡಿ ನೋಡಿ! ತಮಿಳುನಾಡಿನ ಹೋಟೆಲ್ ಗಳಲ್ಲಿ ದೋಸೆ, ಇಡ್ಲಿ ಜೊತೆ ಸಾಮಾನ್ಯವಾಗಿ ಕೊಡುವ ಕೆಂಪು ಚಟ್ನಿ ಈ ಕದಂಬಂ ಚಟ್ನಿ!

ಮಾಡುವ ವಿಧಾನ:-

   

ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ, 2 ಚಮಚ ಕಡಲೇ ಬೇಳೆ, 2 ಚಮಚ ಉದ್ದಿನ ಬೇಳೆ, 1 ಹೆಚ್ಚಿದ ಈರುಳ್ಳಿ, 3 ಹಸಿ ಮೆಣಸಿನ ಕಾಯಿ, 3 ಕೆಂಪು ಮೆಣಸಿನ ಕಾಯಿ, 1 ಎಸಳು ಕರಿಬೇವು, 4 ಎಸಳು ಪುದೀನ, 1 ಹೆಚ್ಚಿದ ಟೊಮೇಟೋ, 1 ಇಂಚು ತುರಿದ ಶುಂಠಿ, 6 ಎಸಳು ಬೆಳ್ಳುಳ್ಳಿ, 1 ಚಮಚ ಹುಣಿಸೆ ರಸ, ಉಪ್ಪು ಹಾಕಿ ಹುರಿದು ಒಲೆಯಿಂದ ತೆಗೆದು, ಕೊನೆಯಲ್ಲಿ, 4 ಚಮಚ ಕಾಯಿ ತುರಿ, 4 ಎಸಳು ಕೊತ್ತಂಬರಿ ಸೊಪ್ಪು ಹಾಕಿ, ತಣ್ಣಗಾದ ಮೇಲೆ ಸ್ವಲ್ಪ ನೀರು ಹಾಕಿ, ನುಣ್ಣಗೆ ರುಬ್ಬಿ, ಕೊನೆಯಲ್ಲಿ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ ದೋಸೆ/ಇಡ್ಲಿ ಜೊತೆ ಬಡಿಸಿ.

ಹುರಿಯ ಬೇಕಾದ ಪದಾರ್ಥಗಳನ್ನು ನೋಡಿ ಗಾಬರಿಯಾಗಬೇಡಿ! ಕದಂಬಂ ಚಟ್ನಿ ಎಂದರೇನೆ ಎಲ್ಲಾ ಸೇರಿಸಿ ಎಂದು ಅರ್ಥ! ಹೆಚ್ಚು ಸಾಮಾನು ಹಾಕಿದ್ದಕ್ಕೆ ತಕ್ಕ ಹಾಗೆ ರುಚಿ ಹೆಚ್ಚಾಗಿರುತ್ತೆ. ನಿಮಗೆ ಇಷ್ಟ ಇಲ್ಲದ್ದನ್ನು ಒಂದೋ, ಎರಡೋ ಸಾಮಾನು ಹಾಕದೆ ಕೂಡ ಮಾಡಬಹುದು, ಮಾಡಿ ನೋಡಿ.

ಧನ್ಯವಾದಗಳು.