ಬೇಕಾಗುವ ಸಾಮಗ್ರಿಗಳು

ಧನಿಯ – 1/4 ಕೇಜಿ
ಮೆಣಸು – 100 ಗ್ರಾಂ
ಜೀರಿಗೆ – 100 ಗ್ರಾಂ
ಮೆಂತ್ಯ – 50 ಗ್ರಾಂ
ಸಾಸಿವೆ – 50 ಗ್ರಾಂ
ಕೆಂಪು ಮೆಣಸಿನ ಕಾಯಿ – 300 ಗ್ರಾಂ
ಬ್ಯಾಡಗಿ ಮೆಣಸಿನ ಕಾಯಿ – 300 ಗ್ರಾಂ
(ನಿಮಗೆ ಖಾರಾ ಹೆಚ್ಚಿಗೆ ಬೇಕಾದಲ್ಲಿ ಈ ಅಳತೆಗಿಂತ ಸ್ವಲ್ಪ ಹೆಚ್ಚಿನ ಮೆಣಸಿನ ಕಾಯಿ ಹಾಕಿ)
ಗಟ್ಟಿ ಇಂಗು – 2 ಕಡಲೇ ಬೀಜದಷ್ಟು ದಪ್ಪ
ಕರಿಬೇವು – 1 ಕಟ್ಟು

ಮಾಡುವ ವಿಧಾನ:-

ಮೆಣಸಿನ ಕಾಯಿ ಬಿಸಿಲಿನಲ್ಲಿ ಇಟ್ಟು ಒಣಗಿಸಿ ಇಡಿ.

ಕರಿಬೇವು ತೊಳೆದು ಒಣ ಬಟ್ಟೆ ಮೇಲೆ ಹಾಕಿ ಒಣಗಿಸಿಡಿ.

   

ಬಾಣಲೆಯಲ್ಲಿ ಧನಿಯ ಸ್ವಲ್ಪ ಸ್ವಲ್ಪ ಹಾಕಿ ಕೆಂಪಗೆ ಹುರಿದಿಡಿ. ಮೆಣಸು, ಜೀರಿಗೆ, ಮೆಂತ್ಯ, ಸಾಸಿವೆ, ಇಂಗು, ಕರಿಬೇವು ಎಲ್ಲಾ ಬೇರೆ ಬೇರೆ ಕೆಂಪಗೆ ಹುರಿದಿಡಿ(ಎಣ್ಣೆ ಹಾಕದೆ ಹುರಿದಿಡಿ). ಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ಹಾಕಿ ಗರಿ ಗರಿಯಾಗಿ ಹುರಿದು, ತಣ್ಣಗಾದ ಮೇಲೆ ತರಿ ತರಿಯಾಗಿ ಪುಡಿ ಮಾಡಿ, ಒಂದು ದೊಡ್ಡ ತಟ್ಟೆ ಅಥವಾ ಪಾತ್ರೆಯಲ್ಲಿ, ಹುರಿದ ಇತರ ಪದಾರ್ಥಗಳೊಡನೆ ಸೇರಿಸಿ, ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ ಮತ್ತೆ ಪುಡಿ ಮಾಡಿ. ತುಂಬಾ ನುಣ್ಣಗೆ ಅಗತ್ಯವಿಲ್ಲ. ಎಲ್ಲಾ ಪುಡಿ ಆದ ಮೇಲೆ ಮತ್ತೊಮ್ಮೆ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಈ ಪುಡಿ fridge/freezer ನಲ್ಲಿ ಇಟ್ಟರೆ fresh ಆಗಿರುತ್ತೆ. ಎಷ್ಟು ಬೇಕೋ ಅಷ್ಟು ಚಿಕ್ಕ ಡಬ್ಬದಲ್ಲಿ ಹಾಕಿ ಹೊರಗೆ ಇಡಿ.

 

ರಸಂ ಮಾಡುವ ವಿಧಾನ:-
1/2 ಲೋಟ ಬೇಳೆಗೆ ಚಿಟಿಕೆ ಅರಿಶಿಣ, 1 ಚಮಚ ಎಣ್ಣೆ, 3 ಟೊಮೇಟೋ ಹಾಕಿ ಬೇಯಿಸಿ ಇಡಿ (ಕೆಲವರು ಟೊಮೇಟೋ ಬೇಯಿಸದೆ ಹೆಚ್ಚಿ ಒಗ್ಗರಣೆಯ ಜೊತೆ ಹಾಕುತ್ತಾರೆ, ನಾನು ಬೇಯಿಸಿ ಹಾಕುತ್ತೇನೆ) ಟೊಮೇಟೋ ಸಿಪ್ಪೆ ತೆಗೆದು, ಸ್ವಲ್ಪ ಮಸೆದು ಸ್ವಲ್ಪ ನೀರು, ಹುಣಿಸೆ ರಸ (ನಿಮ್ಮ ರುಚಿಗೆ ತಕ್ಕಷ್ಟು ಹಾಕಿ, ಇಲ್ಲದಿದ್ದರೂ ಟೊಮೇಟೋ ಹುಳಿ ಸಾಕು ಅಂದರೂ ಪರ್ವಾಗಿಲ್ಲ), ಉಪ್ಪು, ಚೂರು ಬೆಲ್ಲ, ಹಾಕಿ ಕುದಿಯಲು ಇಡಿ. ಸ್ವಲ್ಪ ಬಿಸಿಯಾದ ಮೇಲೆ 3 ಅಥವಾ 4 ಚಮಚ ರಸಂ ಪುಡಿ (ಖಾರಾ ಬೇಕಾದಷ್ಟು) ಹಾಕಿ ಕುದಿಸಿ ಒಲೆಯಿಂದ ತೆಗೆದು ಇಡಿ. ಒಗ್ಗರಣೆಗೆ ತುಪ್ಪ/ಎಣ್ಣೆ, ಸಾಸಿವೆ ಇಂಗು, ಕರಿಬೇವು ಹಾಕಿ ರಸಂಗೆ ಹಾಕಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ರಸಂ ಸಿದ್ಧ!

ಧನ್ಯವಾದಗಳು