ಪುಳಿಯೋಗರೆ ಬಹು ಜನಪ್ರಿಯ ಆಹಾರ. ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾದರೂ, ಒಮ್ಮೆ ಮಾಡಿಟ್ಟರೆ 5 ಅಥವಾ 6 ತಿಂಗಳು, fridge ನಲ್ಲಿ ಇಟ್ಟು, ಬೇಕಾದಾಗ ಉಪಯೋಗಿಸಬಹುದು.

ಮಾಡುವ ವಿಧಾನ:-

ಖಾರಾ ಪುಡಿಗೆ ಬೇಕಾಗುವ ಸಾಮಾನು:-
ಧನಿಯ – 250 ಗ್ರಾಂ
ಮೆಣಸು – 100 ಗ್ರಾಂ
ಜೀರಾ – 100 ಗ್ರಾಂ
ಮೆಂತ್ಯ – 50 ಗ್ರಾಂ
ಸಾಸಿವೆ – 50 ಗ್ರಾಂ
ಒಣ ಮೆಣಸಿನ ಕಾಯಿ – ಕೆಂಪು 400 ಗ್ರಾಂ + ಬ್ಯಾಡಗಿ 100 ಗ್ರಾಂ
ಇಂಗು – 1 ಚಿಕ್ಕ ಡಬ್ಬ ಗಟ್ಟಿ

ಧನಿಯ, ಮೆಣಸು, ಜೀರಿಗೆ, ಮೆಂತ್ಯ, ಸಾಸಿವೆ, ಇಂಗು ಇಷ್ಟನ್ನು ಎಣ್ಣೆ ಹಾಕದೆ ಕೆಂಪಗೆ ಹುರಿದಿಡಿ.

ಮೆಣಸಿನ ಕಾಯಿ ಬಿಸಿಲಿನಲ್ಲಿ ಒಣಗಿಸಿ, ಸ್ವಲ್ಪ ಎಣ್ಣೆ ಹಾಕಿ ಹುರಿದು ತರಿ ತರಿಯಾಗಿ ಪುಡಿ ಮಾಡಿ ಇಡಿ. ಹುರಿದ ಇತರ ಸಾಮಾನುಗಳೊಂದಿಗೆ ಸೇರಿಸಿ ಮತ್ತೆ ಪುಡಿ ಮಾಡಿ ಇಡಿ. ಈ ಪುಡಿ ಮತ್ತು ರಸಂ ಪುಡಿ ಎರಡೂ ಒಂದೇನೆ. ಮನೆಯಲ್ಲಿ ಮಾಡಿದ ರಸಂ ಪುಡಿ ಇದ್ದರೆ ಹುಣಿಸೆ ರಸ ತೆಗೆದು ಮಾಡಬಹುದು.

1/2 ಕೇಜಿ ಹುಣಿಸೆ ಹಣ್ಣು, ತೊಳೆದು ಬಿಸಿ ನೀರಲ್ಲಿ 2 ಗಂಟೆ ನೆನೆಸಿಡಿ. ಹೆಚ್ಚು ನೀರು ಹಾಕಬೇಡಿ. ಹುಣಿಸೆ ಹಣ್ಣು ಮುಳುಗುವಷ್ಟು ಹಾಕಿದರೆ ಸಾಕು. ನೆಂದ ಹುಣಿಸೆ ಹಣ್ಣು ಕಿವುಚಿ, ಸೋಸಿ ರಸ ತೆಗೆದಿಡಿ. ( ಚಿತ್ರ ನೋಡಿ)

ಬಿಳಿ ಎಳ್ಳು /ಕಪ್ಪು / ಗುರೆಳ್ಳು ಹುರಿದು ಪುಡಿ ಮಾಡಿ ಇಡಿ.

1 ಗಿಟುಕು ಕೊಬ್ಬರಿ ತುರಿದು ಇಡಿ.

ಗೊಜ್ಜು ಮಾಡಲು ದಪ್ಪ ತಳದ ಬಾಣಲೆ ಅಥವಾ ಕುಕ್ಕರಿನಲ್ಲಿ 1/4 ಕೇಜಿ ಎಣ್ಣೆ ಹಾಕಿ, ಕಾದ ಮೇಲೆ, ಸಾಸಿವೆ, ಇಂಗು ಪುಡಿ, ಕರಿಬೇವು ಹಾಕಿ, ಹುಣಿಸೆ ರಸ ಹಾಕಿ, ಹಸಿ ವಾಸನೆ ಹೋಗುವವರೆಗೆ ದೊಡ್ಡ ಉರಿಯಲ್ಲಿ, ಆಗಾಗ ಕಲಸುತ್ತಾ ಇರಿ. ನಂತರ ಪುಡಿ ಮಾಡಿದ ಖಾರಾ ಪುಡಿ, ಉಪ್ಪು, 1/2 ಉಂಡೆ ಬೆಲ್ಲ ಹಾಕಿ, ಚೆನ್ನಾಗಿ ಕಲೆಸಿ, ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ತಟ್ಟೆ ಮುಚ್ಚಿ, ಕುದಿಸಿ. ಹಸಿ ವಾಸನೆ ಹೋಗಿ, ಗೊಜ್ಜು ಗಟ್ಟಿಯಾಗಿ ( fruit jam ನಷ್ಟು) ಆದಾಗ ಒಲೆಯಿಂದ ತೆಗೆದು, ತಣ್ಣಗಾದ ಮೇಲೆ ಡಬ್ಬದಲ್ಲಿ ಹಾಕಿ fridge ನಲ್ಲಿ ಇಟ್ಚರೆ 6 ತಿಂಗಳು ಉಪಯೋಗಿಸಬಹುದು. Freezer ನಲ್ಲಿ ಇಡಬೇಡಿ. ಇದು ಮೂಲ ಗೊಜ್ಜು.

 

ಪುಳಿಯೋಗರೆ ಮಾಡುವ ವಿಧಾನ:-

   

 

1 ಅಳತೆ ಅಕ್ಕಿಗೆ 2 ಅಳತೆ ನೀರು ಹಾಕಿ ಅನ್ನ ಮಾಡಿ ದೊಡ್ಡ ಪಾತ್ರೆಯಲ್ಲಿ ಹರಡಿ ಇಡಿ.

ಬಾಣಲೆಯಲ್ಲಿ 6 ರಿಂದ 8 ಚಮಚ ಎಣ್ಣೆ ಹಾಕಿ, ಸಾಸಿವೆ, ಇಂಗು, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ, 2 ಚಮಚ ರಸಂ ಪುಡಿ (ಸಾರಿನ ಪುಡಿ, ನಿಮ್ಮ ಮನೆಯಲ್ಲಿ ಇರುವುದು), ಸ್ವಲ್ಪ ಉಪ್ಪು, ಎಳ್ಳಿನ ಪುಡಿ 4 ಚಮಚ, ಕೊಬ್ಬರಿ ತುರಿ 4 ಚಮಚ, ಕರಿದ ಕಡಲೇ ಬೀಜ, ಗೋಡಂಬಿ (ಬೇಕಾದರೆ), ಹಾಕಿ ಕಲೆಸಿ ಒಲೆಯಿಂದ ತೆಗೆದು ಅನ್ನಂದೊಂದಿಗೆ ಮೃದುವಾಗಿ ಕಲೆಸಿ ತಿನ್ನಲು ಕೊಡಿ. ಕಡಲೇ ಬೀಜ ಬೇರೆ ಕರಿದು ಕೊನೆಯಲ್ಲಿ ಬೇಕಾದರೂ ಸೇರಿಸಬಹುದು. ಗರಿ ಗರಿಯಾಗಿ ಇರುತ್ತೆ.

   

ಇದೇ ಗೊಜ್ಜು ಹಾಕಿ, ಗೋಧಿ ನುಚ್ಚಿನ ಪುಳಿಯೋಗರೆ ಕೂಡ ಮಾಡಬಹುದು‌. ಚಿತ್ರದಲ್ಲಿ ಸ್ವಲ್ಪ ಇರುವುದು ಗೋಧಿ ಪುಳಿಯೋಗರೆ. 1 ಅಳತೆ ಗೋಧಿ ನುಚ್ಚಿಗೆ 1 1/4 ಅಳತೆ ನೀರು ಹಾಕಿ 4 ವಿಷಲ್ ಕೂಗಿಸಿ ಅನ್ನ ಮಾಡ ಬೇಕು.

   

ಎಳ್ಳು ಹುರಿದು ಪುಡಿ ಮಾಡಿ, ಕೊಬ್ಬರಿ ತುರಿದು ಬೇರೆಯಾಗಿ fridge ನಲ್ಲಿ ಇಟ್ಟು ಬೇಕಾದಾಗ ಗೊಜ್ಜು ಹಾಕಿ ಕಲೆಸಿ. ಈ ಪುಡಿ ಗೊಜ್ಜಿಗೆ ಹಾಕಿ ಕಲೆಸಿಡಬೇಡಿ. ಕೇವಲ ಗೊಜ್ಜು ಹಾಗೆ ಇಟ್ಚರೆ 6 ತಿಂಗಳು ಉಪಯೋಗಿಸಬಹುದು.

   

ಈ ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕು, ನೀವು ಒಂದು ದಿನ ಪುಡಿ ಮಾಡಿಟ್ಟುಕೊಂಡು, ಮರುದಿನ ಹುಣಿಸೆ ರಸ ತೆಗೆದು ಗೊಜ್ಜು ಮಾಡ ಬಹುದು.

ಇದು ನಮ್ಮ ಅತ್ತೆ ಅವರ ತಾಯಿಯಿಂದ ಕಲಿತ ರೆಸಿಪಿ! ಈ ರೆಸಿಪಿ ಹಾಕಲು ನನ್ನ ಪ್ರೀತಿಯ ನಾದಿನಿ ಗೋಧಾ, ತುಂಬಾ ಸಹಾಯ ಮಾಡಿದ್ದಾಳೆ‌. Thank u Godha!!!

ಪುಳಿಯೋಗರೆ ಗೊಜ್ಜನ್ನು ಬೇರೆ ಬೇರೆ ತರಹ ಮಾಡುತ್ತಾರೆ, ಇದು ನಮ್ಮ ಮನೆಯ ಶೈಲಿ.

ಧನ್ಯವಾದಗಳು.