ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ!

ಪೂರಿ ಮಾಡುವ ವಿಧಾನ:-

      

1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, 1 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ. ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲೆಸಿ. ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ಚಪಾತಿ ಅಳತೆ ಉಂಡೆಯಷ್ಟು ತೆಗೆದು ಕೊಂಡು ತೆಳ್ಳಗೆ ಲಟ್ಟಿಸಿ.

   

ಚಿಕ್ಕ ಬಾಟಲಿನ/ಡಬ್ಬದ ಮುಚ್ಚಳದ ಸಹಾಯದಿಂದ ಚಿಕ್ಕ ಚಿಕ್ಕ ಪೂರಿ ಅಳತೆಗೆ ಕತ್ತರಿಸಿ, (ಚಿತ್ರ ನೋಡಿ) ಕಾದ ಎಣ್ಣೆಯಲ್ಲಿ ಹಾಕಿ ಒಂದೊಂದು ಪೂರಿಯ ಮೇಲೂ ಜಾಲರಿಯಿಂದ ಸ್ವಲ್ಪ ಒತ್ತಿ ಉಬ್ಬುವಂತೆ ಮಾಡಿ ಗರಿ ಗರಿಯಾಗಿ ಕರಿದು, ಹೆಚ್ಚಿನ ಎಣ್ಣೆ ಹೋಗಲು paper napkin ಮೇಲೆ ಹಾಕಿ ತಣ್ಣಗಾದ ಮೇಲೆ, ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಈ ರೀತಿ ಮಾಡಿದ ಪೂರಿ 2 ಅಥವಾ 3 ದಿನ ಗರಿ ಗರಿಯಾಗಿ ಇರುತ್ತೆ. ಪೂರಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತೆ. ನೀವು ಪೂರಿಯನ್ನು ಹಿಂದಿನ ದಿನ ಅಥವಾ ಬೆಳಗ್ಗೆ ಮಾಡಿ, ಸಂಜೆ ಮಸಾಲೆ ಮಾಡಿಕೊಳ್ಳಬಹುದು.

 

ಮಸಾಲ ಮಾಡುವ ವಿಧಾನ:-

1 ಲೋಟ ಒಣ ಬಟಾಣಿ 6 ಗಂಟೆ ನೆನೆಸಿ, (1/2 ಕ್ಯಾರೆಟ್, 1 ಆಲೂಗೆಡ್ಡೆ ಹಾಕಿ optional) 3 ವಿಷಲ್ ಕೂಗಿಸಿಡಿ. (ಹಸಿ ಬಟಾಣಿ ಬೇಕಾದರೂ ಹಾಕಬಹುದು. 1 ವಿಷಲ್ ಕೂಗಿಸಿದರೆ ಸಾಕು)

   

1 ಈರುಳ್ಳಿ ಸಣ್ಣಗೆ ಹೆಚ್ಚಿ 1/2 ಚಮಚ ಜೀರಿಗೆ ಹಾಕಿ, 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದಿಡಿ.

1 ಇಂಚು ಚಕ್ಕೆ, 4 ಲವಂಗ, 1 ಮರಾಠಿ ಮೊಗ್ಗು, 1 ಪಲಾವ್ ಎಲೆ, 1 ಇಂಚು ಸಿಪ್ಪೆ ತೆಗೆದ ಶುಂಠಿ, 4 ಎಸಳು ಬೆಳ್ಳುಳ್ಳಿ, 1 ಹಿಡಿ ಕೊತ್ತಂಬರಿ ಸೊಪ್ಪು, 1 ಹಿಡಿ ಪುದೀನ, 3 ಹಸಿ ಮೆಣಸಿನ ಕಾಯಿ, 3 ಕೆಂಪು ಮೆಣಸಿನ ಕಾಯಿ, 6 ಕಪ್ಪು ಮೆಣಸು, ಇಷ್ಟನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಕ್ಯಾರೆಟ್, ಆಲೂಗೆಡ್ಡೆ ಹಾಕುವುದಾದರೆ, ಕೊನೆಯಲ್ಲಿ ಹಾಕಿ ಒಂದು ಸುತ್ತು ಸುತ್ತಿದರೆ ಸಾಕು.

   

 

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ರುಬ್ಬಿದ ಮಿಶ್ರಣ ಹಾಕಿ 4 ರಿಂದ 5 ನಿಮಿಷ medium flame ನಲ್ಲಿ ಕುದಿಸಿ. ನಂತರ ಬೇಯಿಸಿದ ಬಟಾಣಿ, ಬಟಾಣಿ ಬೇಯಿಸಿದ ನೀರು, ಸ್ವಲ್ಪ ನೀರು ಬೇಕಾದರೆ ಹಾಕಿ, 1 ಚಮಚ ಕಾಲಾ ನಮಕ್( ರೆಡಿ ಮೇಡ್ ಸಿಗುತ್ತೆ, ಚಾಟ್ ಗಳಿಗೆ ಹಾಕಿದರೆ ಒಳ್ಳೆಯ ಸುವಾಸನೆ ಬರುತ್ತೆ), ಉಪ್ಪು ಹಾಕಿ ಸಣ್ಣ ಉರಿಯಲ್ಲಿ 15 ನಿಮಿಷ ಕುದಿಸಿ.

1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನ ಕಾಯಿ, 1/2 ನಿಂಬೆ ರಸ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ ಹಸಿರು ಚಟ್ನಿ ಮಾಡಿಡಿ.

   

4 ಚಮಚ ಹುಣಿಸೆ ರಸ, ಚೂರು ಬೆಲ್ಲ ಹಾಕಿ ಕುದಿಸಿ ಸಿಹಿ ಚಟ್ನಿ ಮಾಡಿಡಿ.

ಈರುಳ್ಳಿ, ಟೊಮೇಟೋ, ಕೊತ್ತಂಬರಿ ಸೊಪ್ಪು ಹೆಚ್ಚಿಡಿ.

ಒಂದು ತಟ್ಟೆಯಲ್ಲಿ 8 ಪೂರಿ ಪುಡಿ ಮಾಡಿ ಹಾಕಿ. ಅದರ ಮೇಲೆ ಪೂರಿ ಮುಳುಗುವಷ್ಟು ಬಿಸಿ ಮಸಾಲ ಹಾಕಿ, 1/2 ಚಮಚ ಹಸಿರು ಚಟ್ನಿ, 1/2 ಚಮಚ ಸಿಹಿ ಚಟ್ನಿ ಹಾಕಿ, ಅದರ ಮೇಲೆ ಹೆಚ್ಚಿದ ಈರುಳ್ಳಿ, ಟೊಮೇಟೋ, ಕೊತ್ತಂಬರಿ ಸೊಪ್ಪು ಹಾಕಿ, ಮೇಲೆ ಚಾಟ್ ಮಸಾಲ, ಸೇವ್ ಹಾಕಿ, ತಿನ್ನಲು ಕೊಡಿ.

ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ ಕೊಳ್ಳಿ. ಮಸಾಲ ಪೂರಿ ಮಾಡಲು ಸ್ವಲ್ಪ ಸಮಯ ಬೇಕಾದರೂ ಮನೆಯಲ್ಲಿ ಮಾಡಿದ ಸಂತೋಷ ಇರುತ್ತೆ. ಮಾಡಿ ನೋಡಿ.

ಧನ್ಯವಾದಗಳು.