ಕಡಲೇ ಬೀಜ ” ಬಡವರ ಬಾದಾಮಿ” ಎಂದೇ ಪ್ರಸಿದ್ಧ! ನಮ್ಮ ಪ್ರೀತಿಯ ಬಾಪೂಜಿಯವರೂ ಸಹ ಕಡಲೇ ಬೀಜವನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು! ಅಂತಹ ಕಡಲೇ ಬೀಜದ ಒಂದು ಜನಪ್ರಿಯ
ರೆಸಿಪಿ ಈ ಮಸಾಲ ಕಡಲೇ ಬೀಜ! ಬೆಂಗಳೂರಿನಲ್ಲಿ ಇದನ್ನು ಕಾಂಗ್ರೆಸ್ ಕಡಲೇ ಬೀಜ ಅಂತಾರೆ! ಯಾಕೆ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ! ಎಲ್ಲಾ ಬೇಕರಿ, ಅಂಗಡಿಗಳಲ್ಲಿ ಹೆಚ್ಚು ಮಾರಾಟ ಆಗುತ್ತೆ! ಈ ಕಡಲೇ ಬೀಜ ಮನೇಲಿ ಸುಲಭವಾಗಿ, ಶುಚಿಯಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ:-

ದೊಡ್ಡ ಪಾತ್ರೆಯಲ್ಲಿ 2 ಲೀಟರ್ ನೀರು ಕುದಿಯಲು ಇಡಿ. ನೀರು ಕುದಿಯುವಾಗ ನಿಮಗೆ ಬೇಕಾಗುವಷ್ಟು ಕಡಲೇ ಬೀಜ ಹಾಕಿ 3 ರಿಂದ 4 ನಿಮಿಷ ಕುದಿಸಿ, ಒಲೆಯಿಂದ ತೆಗೆದು ತಟ್ಟೆ ಮುಚ್ಚಿ 5 ನಿಮಿಷ ಹಾಗೇ ಬಿಡಿ. ನಂತರ ನೀರು ಸೋಸಿ, ಒಗೆದ ಸ್ವಲ್ಪ ದಪ್ಪ ಇರುವ ಟವೆಲ್ ಮೇಲೆ ಹಾಕಿ ಚೆನ್ನಾಗಿ ಉಜ್ಜಿದರೆ ಸಿಪ್ಪೆ ಬೇರೆ ಆಗುತ್ತೆ. ಎಲ್ಲಾ ಸಿಪ್ಪೆ ತೆಗೆದ ಮೇಲೆ ಒಣ ಬಟ್ಟೆಯಲ್ಲಿ ಮತ್ತೊಮ್ಮೆ ಒರೆಸಿಡಿ.

 

   

ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಮೇಲೆ ಒಂದು ದೊಡ್ಡ ಜಾಲರಿಯನ್ನು ಬಾಣಲೆಯಲ್ಲಿ ಇಟ್ಟು, (ಚಿತ್ರ ನೋಡಿ) ಸ್ವಲ್ಪ ಸ್ವಲ್ಪ ಕಡಲೇ ಬೀಜ ಹಾಕಿ, ಕೆಂಪಗೆ ಗರಿ ಗರಿಯಾಗಿ ಕರಿದು, ಬಿಸಿ ಇದ್ದಾಗಲೇ ನಿಮಗೆ ಇಷ್ಟ ಆಗುವ ಖಾರಾ, ಉಪ್ಪು ಹಾಕಿ ಕಲೆಸಿ. ಖಾರಾ ಪುಡಿ, ಉಪ್ಪು , ಇಂಗು ಹಾಕಿ ಕಲೆಸಿದರೆ ಕೆಂಪು ಕಡಲೇ ಬೀಜ ಸಿದ್ಧ! ಕರಿ ಮೆಣಸಿನ ಪುಡಿ, ಅರಿಷಿಣ, ಇಂಗು, ಉಪ್ಪು ಹಾಕಿ ಕಲೆಸಿದರೆ ಹಳದಿ ಕಡಲೇ ಬೀಜ ರೆಡಿ! ನಾನು ಎರಡೂ ತರಹ ಮಾಡಿದ್ದೇನೆ. ನಿಮಗೆ ಇಷ್ಟ ಆಗುವ ರೀತಿ ನೀವು ಮಾಡಿಕೊಳ್ಳಿ.

   

ಕಡಲೇ ಬೀಜವನ್ನು ನೇರವಾಗಿ ಬಾಣಲೆಗೆ ಹಾಕಿದರೆ, ತೆಗೆಯಲು ಕಷ್ಟ ಆಗುವುದು! ನಾನು ಮಾಡಿದ ಹಾಗೆ ಮಾಡುವುದು ಒಳ್ಳೆಯದು. ಮೊದಲೇ ಬಾಣಲೆಯಲ್ಲಿ ಯಾವ ಜಾಲರ ಸರಿಯಾಗಿ ಇಡಬಹುದು ಎಂದು ನೋಡಿ ಕೊಳ್ಳಿ.

   

ಕರಿದ ಕಡಲೇ ಬೀಜಕ್ಕೆ, ಹೆಚ್ಚಿದ ಈರುಳ್ಳಿ, ಟೋಮೇಟೋ, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಸ್ವಲ್ಪ ಉಪ್ಪು, ಖಾರಾ ಪುಡಿ, ಚಾಟ್ ಮಸಾಲ, ನಿಂಬೆ ರಸ ಹಾಕಿದರೆ ಕಡಲೇ ಬೀಜದ ಚಾಟ್ ಸಿದ್ಧ!

ಧನ್ಯವಾದಗಳು.