ಎಲ್ಲರ ಪ್ರೀತಿಯ ತಿಂಡಿ! ಹೋಟೆಲ್ ಗಳಲ್ಲಿ ಆರ್ಡರ್ ಮಾಡುವ ಮೊದಲ ತಿಂಡಿ! ಮನೆಯಲ್ಲಿಯೇ ಹೋಟೆಲಿನ ಹಾಗೆ ಗರಿ ಗರಿಯಾಗಿ ಮಾಡುವ ರೆಸಿಪಿ ಇಲ್ಲಿದೆ!

ದೋಸೆ ಹಿಟ್ಟು ಮಾಡುವ ವಿಧಾನ:-

ದೋಸೆ ಅಕ್ಕಿ – 4 ಲೋಟ
ಉದ್ದಿನ ಬೇಳೆ – 1 ಲೋಟ
ಕಡಲೇ ಬೇಳೆ – 4 ಚಮಚ
ಗಟ್ಟಿ ಅವಲಕ್ಕಿ – 4 ಚಮಚ
ಮೆಂತ್ಯ – 1/2 ಚಮಚ (ಬೇಕಾದರೆ)

ಅಕ್ಕಿ, ಅವಲಕ್ಕಿಯನ್ನು ಒಟ್ಟಿಗೆ ತೊಳೆದು ನೆನೆಸಿಡಿ. ಉದ್ದಿನ ಬೇಳೆ, ಕಡಲೇ ಬೇಳೆ ಒಟ್ಟಿಗೆ ತೊಳೆದು, ನೆನೆಸಿಡಿ. 2 ಗಂಟೆಯ ನಂತರ ಬೇಳೆ ನುಣ್ಣಗೆ ರುಬ್ಬಿ, ನಂತರ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಸೇರಿಸಿ, ಉಪ್ಪು ಸೇರಿಸಿ, ಚೆನ್ನಾಗಿ ಕಲೆಸಿ ಮುಚ್ಚಿಡಿ. Grinder ನಲ್ಲಿ ರುಬ್ಬಿದರೆ ಚೆನ್ನಾಗಿರುತ್ತೆ. ದೋಸೆ ಮಾಡುವಾಗ 4 ಚಮಚ ಅಕ್ಕಿ ಹಿಟ್ಟು, 1 ಚಮಚ ಸಕ್ಕರೆಯನ್ನು ಸೇರಿಸಿ ದೋಸೆ ಮಾಡಿದರೆ, ದೋಸೆ ಕೆಂಪಗೆ, ಗರಿಯಾಗಿ ಬರುತ್ತೆ. ದೋಸೆ ಹಿಟ್ಟು ತುಂಬಾ ತೆಳ್ಳಗೆ ಮಾಡಬೇಡಿ, ಸ್ವಲ್ಪ ಗಟ್ಟಿಯಾಗಿ ಇರಲಿ.

 

ಕೆಂಪು ಚಟ್ನಿ ಮಾಡುವ ವಿಧಾನ:-

   

2 ಚಮಚ ಹುರಿಗಡಲೆ, 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳು, 6 ಬಿಸಿ ನೀರಲ್ಲಿ ನೆನೆಸಿದ ಬ್ಯಾಡಗಿ ಮೆಣಸಿನ ಕಾಯಿ, ಉಪ್ಪು ಹಾಕಿ, ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿದರೆ ದೋಸೆ ಒಳಗೆ ಸವರುವ ಕೆಂಪು ಚಟ್ನಿ ಸಿದ್ಧ!

ಕಾಯಿ ಚಟ್ನಿ ಮತ್ತು ಆಲೂಗೆಡ್ಡೆ ಸಾಧಾರಣವಾಗಿ ಎಲ್ಲರೂ ಮಾಡುವ ವಿಧಾನ, ಚಟ್ನಿಗೆ ಮಾತ್ರ ಹುಣಿಸೆ ರಸದ ಬದಲು ನಿಂಬೆ ರಸ ಮತ್ತು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು 1/2 ಹಸಿ ಈರುಳ್ಳಿ ರುಬ್ಬಲು ಹಾಕಿದೆ, ಬೆಳ್ಳುಳ್ಳಿ ಹಾಕಿಲ್ಲ.

 

ಮಸಾಲೆ ದೋಸೆ ಮಾಡುವ ವಿಧಾನ:-

      
ಹೆಂಚು ಕಾದ ಮೇಲೆ ಸ್ವಲ್ಪ ನೀರು ಚಿಮುಕಿಸಿ 1 ಸೌಟಿನಷ್ಟು ದೋಸೆಹಿಟ್ಟು ತೆಳ್ಳಗೆ ಹಾಕಿ, ಸ್ವಲ್ಪ ಎಣ್ಣೆ/ತುಪ್ಪ ಹಾಕಿ ಉರಿ ಕಡಿಮೆ ಮಾಡಿ, ದೋಸೆ ಕೆಂಪಗಾದಾಗ, 1 ಚಮಚ ಕೆಂಪು ಚಟ್ನಿ ಸವರಿ ಮಧ್ಯದಲ್ಲಿ ಆಲೂ ಪಲ್ಯ ಇಟ್ಟು, ಮಧ್ಯದಲ್ಲಿ ಸರಿಯಾಗಿ ಮಡಚಿ, ಮೇಲೆ ಸ್ವಲ್ಪ ಬೆಣ್ಣೆ ಹಾಕಿ, ಚಟ್ನಿ/ ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ.

   

ಮಸಾಲೆ ದೋಸೆಗೆ ಒಳಗೆ ಚಟ್ನಿ ಪುಡಿ ಕೂಡ ಹಾಕಿ ಮಾಡಬಹುದು. ತೆಳ್ಳಗೆ ದೋಸೆ ಮಾಡಿ, 1 ಚಮಚ ತುಪ್ಪ ಹಾಕಿ, ಮನೆಯಲ್ಲಿ ಇರುವ ಚಟ್ನಿ ಪುಡಿ ಹಾಕಿ, ಮಧ್ಯದಲ್ಲಿ ಆಲೂ ಪಲ್ಯ ಇಟ್ಟು, ಲಘುವಾಗಿ ದೋಸೆ ಮೇಲೆ ತ್ರಿಕೋನಾಕಾರವಾಗಿ ಗೆರೆ ಎಳೆದು ಮೂರು ಕಡೆಯಿಂದ ಮಡಚಿದರೆ, ತ್ರಿಕೋನಾಕಾರದ ಮಸಾಲೆ ದೋಸೆ ಸಿದ್ಧ!

ಮರೆತ ವಿಷಯ :-

ನಾನು ದೋಸೆ ಮಾಡುವುದು cast iron ನ ತವಾ ಮೇಲೆ, ದಪ್ಪ ತಳ! ಭಾರ ಜಾಸ್ತಿ! ಬಿಸಿಯಾಗಲು 3 ರಿಂದ 4 ನಿಮಿಷ ಬೇಕು! ಒಮ್ಮೆ ಬಿಸಿಯಾದರೆ ಬೇಗ ಬೇಗ ದೋಸೆ ಮಾಡಬಹುದು! ತಳ ದಪ್ಪ ಇರುವುದರಿಂದ, ದೋಸೆ ನಿಧಾನವಾಗಿ ಬೇಯುತ್ತೆ, ಗರಿ ಗರಿಯಾಗಿ ಬರುತ್ತೆ! ಎಲ್ಲರೂ ಸಾಧ್ಯವಾದಷ್ಟು ಕಬ್ಬಿಣದ ತವಾ, ಬಾಣಲೆ ಬಳಸಿ, ಆರೋಗ್ಯಕ್ಕೆ ಒಳ್ಳೆಯದು! ಸಿಗುವವರು ಉಪಯೋಗಿಸಬಹುದು! ಇದು ನನ್ನ ಕೋರಿಕೆ!

ಧನ್ಯವಾದಗಳು.