MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)
“ಮಳಗೋಗರೆ” ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ!
ಮಾಡುವ ವಿಧಾನ:-
ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.
3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ ಕಾಯಿ, ಇಷ್ಟನ್ನು 1 ಚಮಚ ಎಣ್ಣೆ ಹಾಕಿ ಹುರಿದು 3 ಚಮಚ ಒಣ ಕೊಬ್ಬರಿ ತುರಿ ಹಾಕಿ ಪುಡಿ ಮಾಡಿಡಿ.
ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಸ್ವಲ್ಪ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಇಂಗು, ಕರಿಬೇವು, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಒಗ್ಗರಣೆ ಮಾಡಿಡಿ.
ಮಾಡಿಟ್ಟ ಅನ್ನದ ಮೇಲೆ ಮೊದಲು ಉದ್ದಿನ ಬೇಳೆ ಪುಡಿ ಹಾಕಿ, ನಂತರ ಒಗ್ಗರಣೆ, ತುರಿದ ಕೊಬ್ಬರಿ ತುರಿ, ಹುರಿದ ಗೋಡಂಬಿ, ಹೇರಳೆ ಹಣ್ಣಿನ ರಸ ಹಾಕಿ ಕಲೆಸಿದರೆ, ರುಚಿಕರವಾದ, ಆರೋಗ್ಯಕರವಾದ ಮಳಗೋಗರೆ ಸಿದ್ಧ! ಹೇರಳೆ ಹಣ್ಣು ಸಿಗದಿದ್ದರೆ ನಿಂಬೆ ರಸ ಹಾಕಬಹುದು!
ತಮಿಳಿನಲ್ಲಿ “ಮಳಗು” ಎಂದರೆ ಮೆಣಸು ಎಂದು ಅರ್ಥ! ಮೂಲ ರೆಸಿಪಿಯ ಹೆಸರು ಬದಲಾಯಿಸುವುದು ಬೇಡವೆಂದು ನಾನು ಹಾಗೇ ಹೆಸರು ಹಾಕಿದ್ದೇನೆ! ನೀವು ಬೇಕಾದರೆ ಮೆಣಸಿನ ಅನ್ನ ಎಂದು ಕರೆಯಬಹುದು!
ಮೆಣಸಿನ ಸಾರು ಮಾಡುವ ವಿಧಾನ:-
ಮೇಲೆ ಹುರಿಯಲು ಹೇಳಿರುವ ಪದಾರ್ಥಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಕೊಬ್ಬರಿ ತುರಿ ಬದಲು ಕಾಯಿ ತುರಿ ಹಾಕಿ. 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ನುಣ್ಣಗೆ ಬೇಯಿಸಿಡಿ, ಚಿಕ್ಕ ಲೋಟ ಸಾಕು. ಹೆಸರು ಬೇಳೆ ಬೆಂದ ಮೇಲೆ ತುಂಬಾ ಜಾಸ್ತಿ ಆಗುತ್ತೆ. ಬೆಂದ ಹೆಸರು ಬೇಳೆಗೆ, ರುಬ್ಬಿದ ಮಿಶ್ರಣ ಸ್ವಲ್ಪ ನೀರು, ಉಪ್ಪು ಹಾಕಿ ಕುದಿಸಿ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿದರೆ ಮೆಣಸಿನ ಸಾರು ರೆಡಿ! ಈ ಸಾರಿಗೆ ಹುಣಿಸೆ ರಸ ಹಾಕೋಲ್ಲ. ಬೇಕಾದರೆ ತಿನ್ನುವಾಗ ನಿಂಬೆ ರಸ ಹಾಕಿಕೊಳ್ಳಬಹುದು. ಹಾಗೇ ಕುಡಿಯಲು ಕೂಡಾ ತುಂಬಾ ಚೆನ್ನಾಗಿರುತ್ತೆ.
ಖಾರಾ ನಿಮ್ಮ ರುಚಿಗೆ ಬೇಕಾದಷ್ಟು ಹಾಕಿಮಾಡಿ. ಒಗ್ಗರಣೆಗೆ ಸಾಮಾನ್ಯವಾಗಿ ತುಪ್ಪಾ, ಗೋಡಂಬೀನೇ ಹಾಕೋದು! ಕೊಬ್ಬರಿ ತುರಿ ಪುಡಿ ಮಾಡಲು ಮತ್ತು ಕಲೆಸುವಾಗ ಕೂಡ ಹಾಕಬೇಕು. ಹೇರಳೆ ಹಣ್ಣಿನ ಫೋಟೋ ಕಮೆಂಟ್ಸ್ ಬಾಕ್ಸಿನಲ್ಲಿ ಹಾಕಿದ್ದೇನೆ. ಸಿಗದಿದ್ದರೆ ತೊಂದರೆ ಇಲ್ಲ, ನಿಂಬೆ ರಸ ಹಾಕಿ ಮಾಡಿ, ಪರ್ವಾಗಿಲ್ಲ.
ಧನ್ಯವಾದಗಳು.