ಮಾಡುವ ವಿಧಾನ:-

4 ಚಮಚ ಕಡಲೇ ಬೇಳೆ ನೆನೆಸಿಡಿ. 4 ಚಮಚ ಕಾಯಿ ತುರಿದಿಡಿ. ನೆಂದ ಕಡಲೇ ಬೇಳೆ, ಕಾಯಿ ತುರಿ, 6 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

   

ಬೂದುಗುಂಬಳ ಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿ ಬೇಯಿಸಿ, ರುಬ್ಬಿದ ಮಿಶ್ರಣ, ಸ್ವಲ್ಪ ಹುಳಿಯಾದ ಮೊಸರು, ಉಪ್ಪು ಹಾಕಿ ಸ್ವಲ್ಪ ಕುದಿಸಿ ತೆಗೆದಿಡಿ. ತುಂಬಾ ಕುದಿಯುವುದು ಬೇಡ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಅರಿಷಿಣ ಹಾಕಿ ಮಜ್ಜಿಗೆ ಹುಳಿಗೆ ಹಾಕಿ.

 

ಉದ್ದಿನ ಬೋಂಡಾ ಮಾಡುವ ವಿಧಾನ:-

   

1 ಲೋಟ ಉದ್ದಿನ ಬೇಳೆ ನೆನೆಸಿ, ನೀರು ಹಾಕದೆ ನುಣ್ಣಗೆ ರುಬ್ಬಿ, ಉಪ್ಪು, ಹುರಿದು ಪುಡಿ ಮಾಡಿದ ಮೆಣಸು, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, 2 ಚಮಚ ಅಕ್ಕಿ ಹಿಟ್ಟು ಹಾಕಿ ಕಲೆಸಿ, ಚಿಕ್ಕ ಚಿಕ್ಕ ಉಂಡೆ ಮಾಡಿ ಕಾದ ಎಣ್ಣೆಗೆ ಹಾಕಿ ಗರಿ ಗರಿಯಾಗಿ ಬೋಂಡಾದಂತೆ ಕರಿದಿಡಿ. ಬಡಿಸುವ ಮುನ್ನ ಮಜ್ಜಿಗೆ ಹುಳಿಗೆ ಹಾಕಿ ಬಡಿಸಿ. ಮೊದಲೇ ಹಾಕಿಟ್ಟರೆ ಮೊಸರನೆಲ್ಲಾ ಹೀರಿಕೊಂಡು ಬೋಂಡ ಮೆತ್ತಗೆ ಆಗುತ್ತೆ. ನಾವು ಈ ರೀತಿ ಬೋಂಡಾ ಮಜ್ಜಿಗೆ ಹುಳಿ ವಿಶೇಷ ದಿನಗಳಲ್ಲಿ ಮಾಡುತ್ತೇವೆ.

ಇದೇ ರೀತಿ ಈರುಳ್ಳಿ ಹಾಕಿ ಕೂಡ ಮಜ್ಜಿಗೆ ಹುಳಿ ಮಾಡಬಹುದು! 2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಅರಿಷಿಣ, ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಸ್ವಲ್ಪ ನೀರು ಹಾಕಿ ಕುದಿಸಿದರೆ ರುಚಿಯಾದ ಈರುಳ್ಳಿ ಮಜ್ಜಿಗೆ ಹುಳಿ ರೆಡಿ! ಈ ರೀತಿ ಆಂಧ್ರ ಶೈಲಿ ಹೋಟೆಲ್ ನಲ್ಲಿ ಮಾಡುತ್ತಾರೆ, ತುಂಬಾ ಚೆನ್ನಾಗಿರುತ್ತೆ.

ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ. ಇದು ನಮ್ಮ ಮನೇಲಿ ಮಾಡುವ ವಿಧಾನ.

ಧನ್ಯವಾದಗಳು.