ನಮಸ್ಕಾರ, ಇದು ನನ್ನ ಮೊದಲ ಪೋಸ್ಟ್! ಹಾಗಾಗಿ ಸಿಹಿ ರೆಸಿಪಿ ಹಾಕಿದ್ದೇನೆ! ಹಾಗಾದರೆ ನಮ್ಮ ಸಿಹಿ ರೆಸಿಪಿ ನೋಡೋಣವೇ? ಇದು ತುಂಬಾ ಹಳೆಯ ರೆಸಿಪಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಗೋಕುಲಾಷ್ಟಮಿಯಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ತುಂಬಾ ಸುಲಭವಾಗಿ ಮಾಡಬಹುದು.

ಕೊಬ್ಬರಿ ಮಿಠಾಯಿ ಮಾಡುವ ವಿಧಾನ:-

   

1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ ತುರಿದುಕೊಳ್ಳಿ. ತುರಿಯುವಾಗ ಒಂದೇ ಕಡೆ ತುರಿಯದೆ ತಿರುಗಿಸುತ್ತಾ ಬಿಳಿ ಭಾಗ ಮಾತ್ರ ತುರಿದಿಡಿ. (ಉಳಿದ ಕಪ್ಪಾದ ಭಾಗ ಪಲ್ಯ, ಚಟ್ನಿಗೆ ಉಪಯೋಗಿಸಿ), ಕಾಯಿ ತುರಿಯಲ್ಲಿ ಏನಾದರು ನಾರು, ಕಪ್ಪು ತುರಿ ಬಂದಿದ್ದರೆ ತೆಗೆದು ಹಾಕಿ. 1 ಪಾವು ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿ 3 ರಿಂದ 4 ಗಂಟೆ ನೆನೆಸಿಡಿ. ಸಾಧಾರಣವಾಗಿ ಎಲ್ಲರೂ ತಕ್ಷಣ ಕೊಬ್ಬರಿ ಮಿಠಾಯಿ ಮಾಡುತ್ತಾರೆ. ಹಾಗೆ ಮಾಡಿದರೆ ಪಾಕ ಬರಲು ತುಂಬಾ ಸಮಯ ಬೇಕು‌. ಹೀಗೆ ಮಾಡಿದರೆ 12 ರಿಂದ 14 ನಿಮಿಷದಲ್ಲಿ ಮಾಡಬಹುದು.

     

ನಿಮಗೆ ಈ ಅಳತೆ ಗೊತ್ತಾಗದಿದ್ದರೆ, 1 1/2 ಲೋಟ ಕಾಯಿ ತುರಿ, 1 ಲೋಟ ಸಕ್ಕರೆ ಎಂದು ಲೆಕ್ಕ ಹಾಕಿ ಮಾಡಿ.

ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿಡಿ.

ನಂತರ ಒಂದು ಚೆನ್ನಾಗಿ ತೊಳೆದ ದಪ್ಪ ತಳದ ಬಾಣಲೆಯಲ್ಲಿ ಕಾಯಿ ತುರಿ ಮಿಶ್ರಣ ಹಾಕಿ ಮಧ್ಯಮ ಉರಿಯಲ್ಲಿ ಕೆದಕುತ್ತಾ ಇರಿ. ಯಾವುದೇ ಕಾರಣಕ್ಕೂ ಕೈ ಬಿಡುವ ಹಾಗಿಲ್ಲ! ಕಲೆಸುತ್ತಲೇ ಇರಬೇಕು. ಮಿಶ್ರಣವೆಲ್ಲಾ ಒಂದೇ ಕಡೆ ಸೇರಿ ಉಂಡೆಯಂತೆ ಆದಾಗ ಉರಿ ಕಡಿಮೆ ಮಾಡಿ. ಮಿಠಾಯಿ ಹದ ಪರೀಕ್ಷಿಸಲು ಸ್ವಲ್ಪ ಮಿಶ್ರಣ ತೆಗೆದು ತಟ್ಟೆಗೆ ಹಾಕಿ ಸ್ವಲ್ಪ ಸಮಯದ ನಂತರ ಕೈಯಿಂದ ತೆಗೆದು ನೋಡಿ. ಅದು ಕೈಗೆ ಅಂಟದೆ ಸುಲಭವಾಗಿ ಮೇಲೆ ಬಂದರೆ ಹದ ಸರಿಯಾಗಿದೆ ಎಂದು ಅರ್ಥ! ತಕ್ಷಣ ಮಿಶ್ರಣವನ್ನು ತಟ್ಟೆಗೆ ಸುರಿದು, ಕೈ ಒದ್ದೆ ಮಾಡಿ ‌ಮಿಶ್ರಣವನ್ನು ತಟ್ಟಿ, ಬಿಸಿಯಾಗಿರುವಾಗಲೇ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

   

1 ಗಂಟೆ ಬಿಟ್ಟು ಚೆನ್ನಾಗಿ ಆರಿದ ಮೇಲೆ, ತಟ್ಟೆಯನ್ನು ಪೇಪರ್ ಮೇಲೆ ತಲೆಕೆಳಗು ಮಾಡಿ, ಕತ್ತರಿಸಿದ ಚೂರುಗಳನ್ನು ಬೇರೆ ಬೇರೆ ಮಾಡಿ ಡಬ್ಬದಲ್ಲಿ ಹಾಕಿಡಿ. ಒಂದು ವಾರವಾದರೂ ವಾಸನೆ ಬರುವುದಿಲ್ಲ! ತುಂಬಾ ಚೆನ್ನಾಗಿರುತ್ತೆ. ಆರಿದ ಮೇಲೆ ಹಾಲು ಬಿಳುಪಿನ ಕೊಬ್ಬರಿ ಮಿಠಾಯಿ ಸಿದ್ಧವಾಗಿರುತ್ತೆ. ಮಾಡಿ ನೋಡಿ.

ಈ ರೀತಿ ಮಾಡಿದರೆ ಬೇಗ ಕೊಬ್ಬರಿ ಮಿಠಾಯಿ ಮಾಡಬಹುದು. ಪಾಕಕ್ಕೆ ನೀರು ಅಥವಾ ಹಾಲು ಸೇರಿಸುವ ಅಗತ್ಯವಿಲ್ಲ! ಕಾಯಿ ತುರಿ ಮತ್ತು ಸಕ್ಕರೆ ಒಟ್ಟಿಗೆ ನೆನೆಸುವುದರಿಂದ ಕಾಯಿ ತುರಿಯ ನೀರಿನಂಶ ಬಿಟ್ಟುಕೊಂಡು ಅಂಟು ಪಾಕ ಆಗಲೇ ಬಂದಿರುತ್ತೆ. ಹಾಗಾಗಿ ಕೊಬ್ಬರಿ ಮಿಠಾಯಿ ಬೇಗ ಆಗುತ್ತೆ!

ಧನ್ಯವಾದಗಳು, ನಿಮ್ಮ ಪ್ರೀತಿಯ ಸಹೋದರಿ
ಇಂದು ಜಯರಾಮ್.