ನೋಲ್ ಕೋಲ್ ಅನ್ನು ಕನ್ನಡದಲ್ಲಿ ಕೋಸು ಗೆಡ್ಡೆ, ನವಿಲು ಕೋಸು ಎಂದುಾ ಕೂಡ ಕರೆಯುತ್ತಾರೆ. ಅದರಲ್ಲಿರುವ ಒಳ್ಳೆಯ ಅಂಶಗಳು ಹಲವಾರು. ರಕ್ತದೊತ್ತಡ ಹತೋಟಿಯಲ್ಲಿ ಇಡುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಮೂಳೆಗಳು ಗಟ್ಟಿಯಾಗಲು ಸಹಕರಿಸುತ್ತದೆ. ತೂಕ ಕಡಿಮೆ ಮಾಡಲು ಸಹಾಯ ಆಗುತ್ತೆ. ಎಷ್ಟು ಹೇಳಿದರು ಸಾಲದು ಕೋಸು ಗೆಡ್ಡೆಯ ಬಗ್ಗೆ! ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು. ಹಾಗಾದರೆ ಹಸಿಯಾಗಿ ಕೋಸು ಗೆಡ್ಡೆ ಹಾಕಿ ಮಾಡುವ ರೆಸಿಪಿ ನೋಡೋಣವೇ?

ನೋಲ್ ಕೋಲ್ ಕೋಸಂಬರಿ ಮಾಡುವ ವಿಧಾನ :-

ಎಳೆಯದಾದ ಚಿಕ್ಕ ಚಿಕ್ಕ ನೋಲ್ ಕೋಲ್ ಆಯ್ದುಕೊಂಡು, ತೊಳೆದು, ಸಿಪ್ಪೆ ತೆಗೆದು, ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.

ತೆಂಗಿನ ಕಾಯಿ ತುರಿ 4 ಚಮಚದಷ್ಟು ತುರಿದಿಡಿ.

   

ಹೆಸರು ಕಾಳು 1 ಲೋಟದಷ್ಟು ಮೊಳಕೆ ಬರಿಸಿ ತೊಳೆದು ನೀರು ಸೋರಿ ಹಾಕಿಡಿ.

   

ಸಣ್ಣಗೆ ಹೆಚ್ಚಿದ ನೋಲ್ ಕೋಲ್, ಮೊಳಕೆ ಬಂದ ಹೆಸರು ಕಾಳು, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ಹೆಚ್ಚಿದ ಹಸಿ ಮೆಣಸಿನ ಕಾಯಿ 1 (ಬೇಕಾದರೆ ಹಾಕಿ, ಹಸಿ ನೋಲ್ ಕೋಲ್ ಸ್ವಲ್ಪ ಖಾರವಾಗಿ ಇರುತ್ತೆ), ನಿಂಬೆ ರಸ ಹಾಕಿ ಕಲೆಸಿ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ನೋಲ್ ಕೋಲ್ ಮಿಶ್ರಣಕ್ಕೆ ಹಾಕಿ ಕಲೆಸಿದರೆ, ರುಚಿಯಾದ, ಆರೋಗ್ಯಕರವಾದ ನೋಲ್ ಕೋಲ್ ಕೋಸಂಬರಿ ಸಿದ್ಧ!

ನೋಲ್ ಕೋಲ್ ಅನ್ನು, ಪ್ರತಿದಿನ ಜ್ಯೂಸ್ ಮಾಡಿ ಕುಡಿದರೆ ತೂಕ ಗಮನೀಯವಾಗಿ ಕಡಿಮೆ ಆಗುತ್ತದೆ! ಖಾರಾ ಹೆಚ್ಚಿರುವ ಕಾರಣ ಕ್ಯಾರೆಟ್ ಸೇರಿಸಿ ಮಾಡಬಹುದು.

ಈ ರೆಸಿಪಿ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡುವವರಿಗೆ ಇಷ್ಟವಾಗುವುದು ಎಂಬ ನಂಬಿಕೆ ನನಗಿದೆ. ಹಾಗಾದರೆ ನೀವು ಮಾಡುವಿರೆಂಬ ನಂಬಿಕೆಯೊಂದಿಗೆ,

ಧನ್ಯವಾದಗಳು.