ಇಡ್ಲಿ, ವಡೆ ಎಲ್ಲಾ ಹೋಟೆಲ್ ಗಳಲ್ಲಿ ಬೋರ್ಡಿನಲ್ಲಿರುವ ಮೊದಲ ಹೆಸರು! ಹಾಗಾದರೆ ಅದರ ಜನಪ್ರಿಯತೆ ಎಷ್ಟು ಇರಬಹುದು ಊಹಿಸಿ! ಅದನ್ನು ತಿನ್ನುವುದಕ್ಕಾಗಿ ಎಷ್ಟೋ ಜನ ಹೋಟೆಲ್ ಗೆ ಹೋಗ್ತಾರೆ! ಮನೇಲಿ ಅಷ್ಟೇ ಚೆನ್ನಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೊದಲು ಇಡ್ಲಿ ರೆಸಿಪಿ ನೋಡೋಣ!

ಇಡ್ಲಿ ಮಾಡುವ ವಿಧಾನ:-

ಕುಸುಬಲಕ್ಕಿ – 3/4 ಕೇಜಿ
ಉದ್ದಿನ ಬೇಳೆ – 1/4 ಕೇಜಿ
ಮೆಂತ್ಯ – 1 ಚಮಚ
ಗಟ್ಟಿ ಅವಲಕ್ಕಿ- 4 ಚಮಚ

   

ಅಕ್ಕಿ, ಅವಲಕ್ಕಿ ತೊಳೆದು ಒಟ್ಟಿಗೆ 2 ಗಂಟೆ ಕಾಲ ನೆನೆಸಿಡಿ. ಬೇಕಾದರೆ ಕುಸುಬಲಕ್ಕಿಯ ಬದಲು ದೋಸೆ ಅಕ್ಕಿ ಕೂಡಾ ಹಾಕಬಹುದು

ಉದ್ದಿನ ಬೇಳೆ, ಮೆಂತ್ಯ ಒಟ್ಟಿಗೆ ನೆನೆಸಿಡಿ.

ಮೊದಲು ಉದ್ದಿನ ಬೇಳೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. Grinder ನಲ್ಲಿ ರುಬ್ಬಿದರೆ ಚೆನ್ನಾಗಿರುತ್ತೆ. ನಂತರ ಅಕ್ಕಿಯನ್ನು ನುಣ್ಣಗೆ ರುಬ್ಬಿ. ನಂತರ ಎರಡೂ ಸೇರಿಸಿ ಉಪ್ಪು ಹಾಕಿ ಮುಚ್ಚಿಡಿ. ಬೆಳಗ್ಗೆ ಇಡ್ಲಿ ಮಾಡುವ ಮುಂಚೆ, 1 ಚಮಚ ನೀರಿಗೆ ಚಿಟಿಕೆ ಸೋಡ ಹಾಕಿ ಕಲೆಸಿ ಇಡ್ಲಿ ಹಿಟ್ಟಿಗೆ ಸೇರಿಸಿ. ನೇರವಾಗಿ ಸೋಡಾ ಹಾಕಿದರೆ ಗಂಟಾಗಿ, ಕೆಂಪಾಗಿ ಇಡ್ಲಿಯಲ್ಲಿ ಸಿಗುತ್ತೆ. 2 ಚಮಚ ಬೆಣ್ಣೆ ಸೇರಿಸಿದರೆ ಇಡ್ಲಿ ಮೃದುವಾಗಿ ಬರುತ್ತೆ. ಇಡ್ಲಿ ಹಿಟ್ಟನ್ನು ಜೋರಾಗಿ ಕಲೆಸಬೇಡಿ, ಅದರಲ್ಲಿರುವ ಗುಳ್ಳೆಗಳು ಹೆಚ್ಚು ಇದ್ದಷ್ಟು ಇಡ್ಲಿ ಮೆತ್ತಗೆ ಬರುತ್ತೆ. ತುಪ್ಪ ಸವರಿದ ತಟ್ಟೆಗಳಿಗೆ ಹಿಟ್ಟು ಹಾಕಿ, ಕುಕ್ಕರಿನಲ್ಲಿ 10 ರಿಂದ 12 ನಿಮಿಷ ಬೇಯಿಸಿದರೆ ಮೃದುವಾದ
ಇಡ್ಲಿ ಸಿದ್ಧ!

 

ಉದ್ದಿನ ವಡೆ ಮಾಡುವ ವಿಧಾನ:-

   

1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ಹೆಚ್ಚು ನೀರು ಹಾಕದೆ ಆದಷ್ಟೂ ನುಣ್ಣಗೆ ರುಬ್ಬಿ. 2 ಚಮಚ ಅಕ್ಕಿ ಹಿಟ್ಟು, ಚಿಟಿಕೆ ಸೋಡಾ, ಹುರಿದು ತರಿ ತರಿಯಾಗಿ ಪುಡಿ ಮಾಡಿದ 1 ಚಮಚ ಮೆಣಸು, ಜೀರಿಗೆ, ಹೆಚ್ಚಿದ ಹಸಿ ಮೆಣಸಿನ ಕಾಯಿ 2, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಚಿಟಿಕೆ ಇಂಗು, ಉಪ್ಪು (1 ಚಿಕ್ಕ ಈರುಳ್ಳಿ ಬೇಕಾದರೆ)ಹಾಕಿ ಕಲೆಸಿ. ಸ್ವಲ್ಪ ಹಿಟ್ಟು ತೆಗೆದು ಕೊಂಡು, ಬಾಳೆ ಎಲೆ/ ವೀಳೆದೆಲೆ/ದಪ್ಪ ಪ್ಲಾಸ್ಟಿಕ್ ಕಾಗದದ ಮೇಲೆ ವಡೆ ಸ್ವಲ್ಪ ದಪ್ಪಗೆ ತಟ್ಟಿ, ಮಧ್ಯದಲ್ಲಿ ರಂಧ್ರ ಮಾಡಿ, ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದರೆ ಗರಿ ಗರಿಯಾದ ಉದ್ದಿನ ವಡೆ ಸಿದ್ಧ!

   

 

ಸಾಂಬಾರ್ ಮಾಡುವ ವಿಧಾನ:-

   

1 ಲೋಟ ತೊಗರಿ ಬೇಳೆ, 1 ಸಿಪ್ಪೆ ತೆಗೆದು ಹೆಚ್ಚಿದ ಆಲೂಗೆಡ್ಡೆಯನ್ನು 2 ವಿಷಲ್ ಕೂಗಿಸಿಡಿ. 1 ದೊಡ್ಡ ಈರುಳ್ಳಿಯನ್ನು ದೊಡ್ಡ ದೊಡ್ಡದಾಗಿ ಹೆಚ್ಚಿ, ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹುರಿದಿಡಿ.

1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಧನಿಯಾ, 1/2 ಈರುಳ್ಳಿ, 10 ಕೆಂಪು/ಬ್ಯಾಡಗಿ ಮೆಣಸಿನ ಕಾಯಿ, 1/4 ಚಮಚ (ಜೀರಿಗೆ+ ಮೆಂತ್ಯ), ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು, 4 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿ, ಬೆಂದ ಬೇಳೆಗೆ ಹಾಕಿ, ಹುರಿದ ಈರುಳ್ಳಿ, ಹುಣಿಸೆ ರಸ, ಉಪ್ಪು, ಚೂರು ಬೆಲ್ಲ, ಸ್ವಲ್ಪ ನೀರು ಹಾಕಿ ಕುದಿಸಿ, ಸಾಸಿವೆ, ಇಂಗು, ಕರಿಬೇವು ಒಗ್ಗರಣೆ ಹಾಕಿದರೆ, ಹೋಟೆಲ್ ಶೈಲಿ ಸಾಂಬಾರ್ ರೆಡಿ!

 

ಪುದೀನಾ ಚಟ್ನಿ ಮಾಡುವ ವಿಧಾನ:-

   

1 ಕಟ್ಟು ಪುದೀನಾ, 3 ರಿಂದ 4 ಹಸಿ ಮೆಣಸಿನ ಕಾಯಿ ಎಣ್ಣೆ ಹಾಕಿ ಹುರಿದು, 4 ಚಮಚ ಕಾಯಿ ತುರಿ, 2 ಚಮಚ ಹುರಿಗಡಲೆ, ಉಪ್ಪು, 1/2 ಹಸಿ ಈರುಳ್ಳಿ, 1/2 ಚಮಚ ನಿಂಬೆ ರಸ ಹಾಕಿ ರುಬ್ಬಿ, ಸಾಸಿವೆ ಕರಿಬೇವು ಒಗ್ಗರಣೆ ಹಾಕಿದರೆ, ರುಚಿಕರವಾದ ಪುದೀನಾ ಚಟ್ನಿ ರೆಡಿ!

ಧನ್ಯವಾದಗಳು.